ನವದೆಹಲಿ: ದೇಶದಲ್ಲಿ ನಕಲಿ ಔಷಧಗಳು ಪೂರೈಕೆಯಾಗುತ್ತಿವೆ ಎಚ್ಚರ! ಇಂಥದ್ದೊಂದು ಅಲರ್ಟ್ ರವಾನಿಸಿದ್ದು ಬೇರ್ಯಾರೂ ಅಲ್ಲ ಭಾರತೀಯ ಔಷಧಗಳ ಮಹಾನಿರ್ದೇಶನಾಲಯ (ಡಿಸಿಐಜಿ).
ಹಿಮಾಚಲ ಪ್ರದೇಶ ಮೂಲದ ಕಂಪನಿಯೊಂದು ಉತ್ಪಾದಿಸುತ್ತಿರುವ ನಕಲಿ ಔಷಧಗಳಿಗೆ ಸಂಬಂಧಿಸಿ ಭಾರತೀಯ ಔಷಧ ನಿರ್ದೇಶನಾಲಯ ಶುಕ್ರವಾರ ಎಲ್ಲ ರಾಜ್ಯಗಳ ಔಷಧ ನಿರೀಕ್ಷಕರಿಗೆ ಎಚ್ಚರಿಕೆ ಸಂದೇಶ ಕಳುಹಿಸಿದೆ.
ಅಲರ್ಜಿ ನಿಗ್ರಹ ಮಾಂಟೈರ್, ಹೃದ್ರೋಗಕ್ಕೆ ಸಂಬಂಧಿಸಿದ ಔಷಧ ಅಟೋರ್ವ, ರೋಸ್‌ಡೇ, ನೋವು ನಿವಾರಕ ಝೆರೋಡೋಲ್, ಕ್ಯಾಲ್ಸಿಯಂ ಮಾತ್ರೆಗಳು ಮತ್ತು ವಿಟಮಿನ್ ಡಿ ಮಾತ್ರೆಗಳ ಮೇಲೆ ನಿಗಾ ಇಡುವಂತೆ ದೇಶಾದ್ಯಂತದ ಡ್ರಗ್ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ. ನಕಲಿಯಾಗಿ ಉತ್ಪಾದಿಸಲ್ಪಡುತ್ತಿರುವ ಔಷಧಗಳ ಪಟ್ಟಿಯನ್ನು ಸುತ್ತೋಲೆಯೊಂದಿಗೆ ರವಾನಿಸಲಾಗಿದೆ.
ಗಾಂಬಿಯಾ ಮತ್ತು ಉಜ್ಬೇಕಿಸ್ತಾನದಲ್ಲಿ ಭಾರತದ ಕಂಪನಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ಹಲವು ಮಕ್ಕಳು ಅಸುನೀಗಿದ ಆರೋಪಗಳು ಕೇಳಿಬಂದ ಬೆನ್ನಲ್ಲೇ ಕೇಂದ್ರ ಸರ್ಕಾರವು ದೇಶದ ಔಷಧ ಉತ್ಪಾದನೆಯಲ್ಲಿನ ಸಮಸ್ಯೆಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ.
ಹಿಮಾಚಲದ ಟ್ರೈಜಲ್ ಫಾರ್ಮುಲೇಷನ್ಸ್ ಕಂಪನಿಯ ಮೋಹಿತ್ ಬನ್ಸಲ್ ಎಂಬಾತ ಯಾವುದೇ ಅನುಮತಿಯಿಲ್ಲದೇ ನಕಲಿ ಔಷಧಗಳನ್ನು ತಯಾರಿಸುತ್ತಿರುವುದು ಇತ್ತೀಚೆಗೆ ನಡೆದ ದಾಳಿ ವೇಳೆ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಆಗ್ರಾದಲ್ಲಿರುವ ಈತನದ್ದೇ ಕಂಪನಿಯ ಅಂಗಸಂಸ್ಥೆ ಎಂಎಚ್ ಪಾರ್ಮಾದಲ್ಲಿ ಕೂಡ ನಕಲಿ ಔಷಧಗಳನ್ನು ಮಾರಾಟ ಮಾಡುತ್ತಿದ್ದುದು ಬಹಿರಂಗವಾಗಿದೆ.
ಮೇಲಿನ ಪಟ್ಟಿಯಲ್ಲಿರುವ ಔಷಧಗಳನ್ನು ವಾಸ್ತವದಲ್ಲಿ ಪ್ರಮುಖ ಔಷಧ ಕಂಪನಿಗಳಾದ ಸಿಪ್ಲಾ, ಝೈಡಸ್ ಹೆಲ್ತ್‌ಕೇರ್, ಐಪಿಸಿಎ ಲ್ಯಾಬ್ಸ್, ಮ್ಯಾಕ್ಲಿಯೋಡ್ಸ್ ಫಾರ್ಮಾ ಮತ್ತು ಟೊರೆಂಟ್ ಫಾರ್ಮಾಸುಟಿಕಲ್ಸ್ ಉತ್ಪಾದನೆ ಮಾಡುತ್ತಿವೆ. ಆದರೆ, ಹಿಮಾಚಲ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ಕಂಪನಿಗಳು ತಯಾರಿಸುವ ಔಷಧಗಳನ್ನೇ ನಕಲು ಮಾಡಿ ಮಾರಾಟ ಮಾಡಲಾಗುತ್ತಿದೆ. ಇಂಥ ಔಷಧಗಳ ಮೇಲೆ ನಿಗಾ ವಹಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.