ಮೊದಲಿಗೆ ಯಾಕೆ ಈ ರೀತಿಯಾಗಿ ಚುಕ್ಕೆ ಇಟ್ಟಿದ್ದಾರೆ ಅಂತ ಯೋಚನೆ ಮಾಡುತ್ತಿದ್ದೀರಾ ತಾನೆ? ಉತ್ತರ ಸಿಗ್ತಾ? ಸಿಗಲ್ಲ. ಯಾಕೆಂದರೆ, ಅದು ನಾನು ಇಟ್ಟಿರುವಂತಹ ಚುಕ್ಕೆ. ಅದಕ್ಕೆ ನಾನೇ ಉತ್ತರ ನೀಡಬೇಕು. ನನಗೂ ಸಹ ನಿಮಗೆ ಉತ್ತರ ಕೊಡಬೇಕು ಅಂತ ಅನಿಸುತ್ತಿದೆ. ಆದರೆ, ನನಗೂ ಸಹ ಉತ್ತರ ಸಿಕ್ಕಿಲ್ಲ. ಹಾಗಂತ ಉತ್ತರವೇ ಗೊತ್ತಿಲ್ಲ ಇವರಿಗೆ ಅಂತ ತಿಳಿದುಕೊಳ್ಳಬೇಡಿ. ನಿಜವಾಗಲೂ ನನಗೆ ಉತ್ತರ ಗೊತ್ತು. ಉತ್ತರ ಗೊತ್ತಿದ್ದ ಮೇಲೆ ಹೇಳುವುದಕ್ಕೆ ಏನು ಕಷ್ಟ ಅನ್ನೋದು ನಿಮ್ಮ ಪ್ರಶ್ನೆ ಅಂತ ನನಗೆ ಗೊತ್ತು. ಆದರೂ ನಾನು ನಿಮಗೆ ಉತ್ತರ ಕೊಡಲ್ಲ. ಯಾಕೆಂದರೆ, ನನಗೆ ಗೊತ್ತಿರುವ ಉತ್ತರವನ್ನು ನಿಮಗೆ ಹೇಳಬೇಕು ಅಂತ ನನಗೆ ಅನಿಸುತ್ತಿಲ್ಲ. ಅದಕ್ಕಿಂತ ಮೊದಲು ನನಗೆ ಗೊತ್ತಿರುವ ಉತ್ತರ ನಿಜವಾದ ಉತ್ತರವೆ? ಎನ್ನುವುದೂ ನನಗೆ ಗೊತ್ತಿಲ್ಲ. ಅಯ್ಯೋ ಉತ್ತರ ಗೊತ್ತಿದ್ದ ಮೇಲೆ ಪ್ರಶ್ನೆ ಏನು ಅಂತಾನೂ ಗೊತ್ತಿರಬೇಕಲ್ವ ! ಆದರೆ, ನನಗೆ ಪ್ರಶ್ನೆ ಏನೂ ಅಂತಾನೆ ಗೊತ್ತಿಲ್ಲ. ಏನಪ್ಪ ಇವರು ಪ್ರಶ್ನೆ ಗೊತ್ತಿಲ್ಲ ಅಂತ ಹೇಳ್ತಾರೆ- ಅಂತ ಯೋಚನೆ ಮಾಡ್ತಾ ಇದ್ದೀರಾ?
ಛೇ, ಏನೆಲ್ಲ ಯೋಚನೆ ಮಾಡ್ತೀರಾ ನೀವು, ಯಾವತ್ತಾದರೂ ಪ್ರಶ್ನೆ ಇಲ್ಲದೆ ಉತ್ತರ ಬರೋಕೆ ಸಾಧ್ಯವಾಗುತ್ತಾ? ಆಗಿದ್ರೆ ಇವರಿಗೆ ಪ್ರಶ್ನೆ ಗೊತ್ತಿದೆ ಅಂತ ಭಾವಿಸುತ್ತಿದ್ದೀರಾ ತಾನೆ? ಇಲ್ಲ, ನಿಜವಾಗಲೂ ನನಗೆ ಪ್ರಶ್ನೆ ಏನು ಅಂತ ಗೊತ್ತೇ ಇಲ್ಲ. ಹಾಗಿದ್ರೆ ಉತ್ತರ ಎಲ್ಲಿಂದ ಸಿಗುತ್ತೆ ಇವರಿಗೆ ಎಂಬುದು ನಿಮ್ಮ ಆಲೋಚನೆ. ಉತ್ತರ ನನಗೆ ಸಿಕ್ಕಿದಲ್ಲಿ ಅದನ್ನೂ ನಾನೇ ಹುಡುಕಿಕೊಂಡಿದ್ದು. ಉತ್ತರ ಹುಡುಕಿದ ಮೇಲೆ ಪ್ರಶ್ನೆ ಇದ್ದೇ ಇರುತ್ತದೆ ಎಂಬುದು ನಿಮ್ಮ ಪ್ರಶ್ನೆ. ಇಲ್ಲ, ಉತ್ತರವನ್ನು ನಾನು ಯಾಕೆ ಹುಡುಕಲಿ, ಪ್ರಶ್ನೆಯೇ ನನ್ನ ಬಳಿ ಇಲ್ಲವಲ್ಲ. ಇವರಿಗೆ ಏನಾಗಿದೆ ಪ್ರಶ್ನೆ-ಉತ್ತರ ಎರಡೂ ಗೊತ್ತು ಅಂತ ಹೇಳ್ತಾರೆ, ಸ್ವಲ್ಪ ಹೊತ್ತಿಗೆ ಗೊತ್ತಿಲ್ಲ ಅಂತ ಹೇಳ್ತಾರೆ. ಇವರಿಗೆ ಪಕ್ಕಾ ತಲೆ ಹಾಳಾಗಿದೆ. ಹುಚ್ಚರ ಆಸ್ಪತ್ರೆಗೆ ಸೇರಿಸಬೇಕು ಅಂತ ಯೋಚನೆ ಮಾಡ್ತಾ ಇದೀರ ಅಲ್ವಾ? ನೀವು ತಿಳಿದುಕೊಂಡಿರುವುದು ತಪ್ಪು . ನನಗೆ ಪ್ರಶ್ನೆಯೂ ಗೊತ್ತು, ಉತ್ತರವೂ ಗೊತ್ತು. ಆದರೆ, ಒಂದು ನಿಜ ಮಾತ್ರ ನಿಮಗೆ ಹೇಳ್ತೀನಿ. ನನಗೆ ಪ್ರಶ್ನೆಯೂ ಗೊತ್ತಿಲ್ಲ. ಉತ್ತರವೂ ಗೊತ್ತಿಲ್ಲ. ಗೊತ್ತಾಗೋದೂ ಇಲ್ಲ. ಏನಾಗಿದೆ ಇವರಿಗೆ? ಯಾವುದೂ ಗೊತ್ತಿಲ್ಲ ಅಂದಮೇಲೆ ಮತ್ತೆ ಪ್ರಶ್ನೆ-ಉತ್ತರ ಎಲ್ಲಿಂದ ಬರುತ್ತೆ? ಅಂತ ಆಲೋಚನೆ ಮಾಡ್ತಿದ್ದೀರಾ? ನಿಮಗೆ ಇನ್ನೊಂದು ಸತ್ಯವನ್ನು ನಾನು ಹೇಳಲೇಬೇಕು. ಪ್ರಶ್ನೆ-ಉತ್ತರ ಈ ಎರಡು ನಿಮಗೆ ಗೊತ್ತು. ಅದು ನಿಮ್ಮಿಂದಲೇ ಬಂದಿದ್ದು. ಈಗ ತುಂಬಾ ಚೆನ್ನಾಗಿ ಯೋಚನೆ ಮಾಡಿ. ಉತ್ತರ ಸಿಗುತ್ತದೆ.
ಉತ್ತರ ಸಿಕ್ಕಿತಾ? ಸಿಗುವುದಿಲ್ಲ. ಯಾಕೆಂದರೆ ಅದು ನಿಮ್ಮ ಪ್ರಶ್ನೆ ಎಂಬುದು ನೂರಕ್ಕೆ ನೂರು ಸತ್ಯ. ಆದರೆ, ಅದು ಹುಟ್ಟಿಕೊಂಡಿದ್ದು ಮಾತ್ರ ನನ್ನಿಂದ. ಹಾಗಾಗಿ, ಉತ್ತರ ನನಗೆ ಮಾತ್ರ ಗೊತ್ತಿರಲು ಸಾಧ್ಯ.
ತುಂಬಾ ತಲೆನೋವು ಬರುತ್ತಿದೆಯಾ? ನಾನು ನಿಮಗೆ ಒಂದು ಸತ್ಯವನ್ನು ಅರ್ಥಮಾಡಿಸಬೇಕಿತ್ತು. ಹಾಗಾಗಿ, ಈ ಮೇಲೆ ಈ ರೀತಿಯಾಗಿ ಬರೆಯಬೇಕಾಯಿತು. ಆದರೆ, ಈ ಬರವಣಿಗೆಯನ್ನು ತುಂಬಾ ಸೂಕ್ಷ್ಮವಾಗಿ ವಿಚಾರಬುದ್ಧಿಯಿಂದ ಓದಿದರೆ ಅದರ ಒಳ ಅರ್ಥ ತಿಳಿಯುತ್ತದೆ. ಗೊತ್ತು-ಗೊತ್ತಿಲ್ಲಗಳ ಮಧ್ಯೆ ನಾವು ಬದುಕುತ್ತಿದ್ದೇವೆ. ಜೀವನವೇ ಪ್ರಶ್ನೆ-ಉತ್ತರಗಳ ಸರಮಾಲೆ. ಪ್ರಶ್ನೆ ಗೊತ್ತಿದ್ದರೆ ಉತ್ತರ ಗೊತ್ತಿರುವುದಿಲ್ಲ. ಉತ್ತರ ಗೊತ್ತಿದ್ದರೆ ಪ್ರಶ್ನೆ ಏನು ಎಂಬುದು ಗೊತ್ತಿರುವುದಿಲ್ಲ. ಹೀಗೆ ಗೊತ್ತು-ಗೊತ್ತಿಲ್ಲಗಳ ಮಧ್ಯದ ಜೀವನ ನಮ್ಮದು.
ರಕ್ಷಾಚಂದ್ರ
ದ್ವಿತೀಯ ಬಿಎಸ್ಸಿ, ಆಳ್ವಾಸ್ ಕಾಲೇಜು, ಮೂಡಬಿದಿರೆ