Advertisement
ಮೊದಲನೆಯ ಮಗು ಹುಟ್ಟುತ್ತೆ ಅನ್ನೋವಾಗ ಗರ್ಭಿಣಿಗೆ ವಿಶೇಷ ಮರ್ಯಾದೆ. ಸಾಲು ಸಾಲು ಬಯಕೆಗಳ ಈಡೇರಿಕೆ. ಬಗೆಬಗೆಯಲ್ಲಿ ಫೋಟೋ ಶೂಟು. ಮನೆಯ ಗೋಡೆಯ ತುಂಬ ಮುದ್ದು ಮುದ್ದು ಮಕ್ಕಳ ಪೋಸ್ಟರು. ವಾರ್ಡ್‌ರೋಬ್‌ನಲ್ಲಿ ಅದಾಗಲೇ ಮುಂದಿನ ಮಗುವಿನ ಬಟ್ಟೆ , ಶೂ, ಚೆಂದದ ಹೆಸರಿಗಾಗಿ ಭರ್ಜರಿ ಅನ್ವೇಷಣೆ. ಆದರೆ, ಇವೆಲ್ಲ ಸಂಭ್ರಮ, ಕಾತರಗಳು ಎರಡನೆಯ ಮಗುವಿಗೆ ದಕ್ಕುವುದೇ ಇಲ್ಲ. ಏಕೆ ಹೀಗೆ?
Related Articles
Advertisement
ಒಂದು ಸರ್ವೆಯ ಪ್ರಕಾರ, ಮಗುವಿನಿಂದ ಮಗುವಿಗೆ ಪೋಷಕರು ನೀಡುವ ಗಮನ ಕಡಿಮೆಯಾಗುತ್ತಾ ಹೋಗುತ್ತದಂತೆ. ಮೊದಲ ಮಗುವಿನ ಊಟ-ಆಟ-ಪಾಠ ಎಲ್ಲದರಲ್ಲಿಯೂ ಪೋಷಕರು ಸಕ್ರಿಯರಾಗುವುದರಿಂದ ಮೊದಲ ಮಗು ತಮ್ಮ ಸಹೋದರ/ರಿಗಿಂತ ಮೂರು ಸೆಂ.ಮೀ. ಎತ್ತರ ಬೆಳೆಯುವುದಲ್ಲದೇ ಹೆಚ್ಚಿನ ಬುದ್ಧಿಶಕ್ತಿ ಹೊಂದಿರುತ್ತಾರೆ!
ಈ ಕುರಿತು ಕುಟುಂಬದ ಕಿರಿಯ ಮಗಳಾದ ಯಲಹಂಕದ ಸಾಧನಾ, ತಮ್ಮ ಅನುಭವ ವಿವರಿಸುತ್ತಾರೆ, “”ಮನೆಯಲ್ಲಿ ಅಕ್ಕನಿಗೆ ಯಾವಾಗಲೂ ಮೊದಲ ಪ್ರಾಶಸ್ತ್ಯ ಇರುತ್ತಿತ್ತು. ನನಗೆ ಆಕೆ ಬಳಸಿದ ಪುಸ್ತಕ, ಬಟ್ಟೆ, ಆಟದ ಸಾಮಾನು… ಎಲ್ಲವೂ ಹೀಗೆ ಸೆಕೆಂಡ್ ಹ್ಯಾಂಡ್ ವಸ್ತುಗಳು. ಮೊದಮೊದಲು ಇದು ಗೊತ್ತಾಗುತ್ತಿರಲಿಲ್ಲ. ಬುದ್ಧಿ ಬಂದಂತೆ ಬಹಳ ಬೇಸರವಾಗುತ್ತಿತ್ತು. ನಾನು ಏನೇ ಮಾಡಿದರೂ ಅದನ್ನು ಅಕ್ಕನ ಸಾಧನೆಗೆ ಹೋಲಿಸಲಾಗುತ್ತಿತ್ತು. ಬೇಕೆಂದೇ ಹೀಗೆ ಮಾಡುತ್ತಿರಲಿಲ್ಲವೇನೋ! ಆದರೆ, ಆ ವಯಸ್ಸಿನಲ್ಲಿ ನನ್ನನ್ನು ಕಂಡರೆ ಅಪ್ಪ-ಅಮ್ಮನಿಗೆ ಇಷ್ಟವಿಲ್ಲ ಅನಿಸುತ್ತಿತ್ತು. ಕೆಲವೊಮ್ಮೆ ನಾನು ದತ್ತು ಮಗುವೇನೋ ಎಂಬ ಸಂಶಯವೂ ಕಾಡುತ್ತಿತ್ತು. ಅಕ್ಕ ಅಂದರೆ, ಒಳಗೊಳಗೇ ಸಿಟ್ಟು ! ಪುಣ್ಯಕ್ಕೆ ಕಾಲೇಜಿಗೆ ಬಂದಂತೆ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ಹೋದೆ. ಆಗ ಆತ್ಮವಿಶ್ವಾಸ ಬೆಳೆಯಿತು. ನನ್ನನ್ನು ನಾನು ಸ್ವತಂತ್ರಳಾಗಿ ಗುರುತಿಸಿಕೊಂಡೆ. ಈಗ ನಾನೇ ಆ ಸ್ಥಾನದಲ್ಲಿ ನಿಂತಾಗ ತಾಯಿಗೆ ಯಾವ ಮಕ್ಕಳಾದರೂ ಪ್ರೀತಿಯೇ. ಆದರೆ, ಸಮಯ-ಸಂದರ್ಭಗಳಿಂದ ಈ ರೀತಿ ಆಗುವುದು ಸಹಜ ಅನಿಸುತ್ತದೆ”
ಇದಕ್ಕೆ ವಿರುದ್ಧವಾದ ಅಭಿಪ್ರಾಯ ಚೆನ್ನೈನ ಸುಶೀಲಾರದ್ದು , “”ಸಂಪ್ರದಾಯಸ್ಥ ಕುಟುಂಬದಲ್ಲಿ ಮೊದಲ ಮಗು ಗಂಡಾಗಲಿ ಎಂದು ನಿರೀಕ್ಷಿಸುತ್ತಿದ್ದಾಗ ಹುಟ್ಟಿದ್ದು ನಾನು. ಆಗಲೇ ಗಂಡುಮಗನಿಗಾಗಿ ಕಾಯುವಿಕೆ ಶುರುವಾಗಿತ್ತು. ಅದಕ್ಕೆ ಸರಿಯಾಗಿ ತಮ್ಮ ಹುಟ್ಟಿದಾಗ, ನನ್ನನ್ನು ಕೇಳುವವರೇ ಇಲ್ಲವಾದರು. ಆತ ಅತ್ತರೂ, ನಕ್ಕರೂ, ಬಿದ್ದರೂ ಚೆಂದ. ನನಗೆ ಮಾತ್ರ ದೊಡ್ಡವಳು ಎಂಬ ಮುಳ್ಳಿನ ಕಿರೀಟ. ಸಣ್ಣವಳಿರುವಾಗ ಈ ತಮ್ಮ ಇರದಿದ್ದರೆ ಎಷ್ಟು ಚೆಂದವಿತ್ತು ಎಂದು ದಿನವೂ ಯೋಚಿಸುತ್ತಿದ್ದೆ. ದೊಡ್ಡವನಾದ ಮೇಲೂ ನನ್ನ ತಮ್ಮ ನನಗೆ ಹತ್ತಿರವಾಗದಿರುವುದಕ್ಕೆ ಅಪ್ಪ-ಅಮ್ಮರ ಈ ವರ್ತನೆ ಕಾರಣ ಅಂತ ದುಃಖವಾಗುತ್ತದೆ”
ಏನು ಕಾರಣ?ಪೋಷಕರು ತಮ್ಮದೇ ಮಕ್ಕಳಲ್ಲಿ ಹೀಗೆಲ್ಲ ವ್ಯತ್ಯಾಸವನ್ನು ತೋರುವ ಹಲವು ಕಾರಣಗಳಿವೆ. ಹೆಚ್ಚಿನ ಸಂದರ್ಭಗಳಲ್ಲಿ ಈ ವರ್ತನೆ ಉದ್ದೇಶಪೂರ್ವಕವಾಗಿರುವುದಿಲ್ಲ. ಮೊದಲ ಬಾರಿ ಅಪ್ಪ-ಅಮ್ಮರಾಗುವುದು ವಿಶೇಷ ಅನುಭವ. ಹಾಗಾಗಿ, ಕುತೂಹಲ, ಆತಂಕ, ಸಡಗರ ಎಲ್ಲವೂ ಹೆಚ್ಚೇ. ಏರು ಪ್ರಾಯದ ಅಪ್ಪ-ಅಮ್ಮರಿಗೆ ಮೊದಲ ಕಂದನನ್ನು ಸಾಕುವಾಗ ಅದೇ ಸರ್ವಸ್ವ. ದುಡ್ಡು , ಸಮಯ, ಗಮನ ಎಲ್ಲವೂ ಅದರತ್ತಲೇ! ಆದರೆ, ಎರಡನೆಯ ಕಂದ ಬರುವಾಗ ಮಗು ಹೊಸತಾದರೂ ಅಪ್ಪ-ಅಮ್ಮರಾಗುವ ಅನುಭವ ಹಳೆಯದಾಗಿರುತ್ತದೆ. ಏನಾಗುತ್ತದೆ ಎಂಬ ಸ್ಪಷ್ಟ ಕಲ್ಪನೆ ಮೂಡಿರುತ್ತದೆ. ವಯಸ್ಸು ಹೆಚ್ಚುವುದರ ಜತೆಗೆ ದೊಡ್ಡ ಮಗುವಿನ ಜವಾಬ್ದಾರಿ ಹೆಗಲೇರಿರುತ್ತದೆ. ಕೆಲಮಟ್ಟಿಗೆ ಭಾವುಕತೆ ಕಡಿಮೆಯಾಗಿ ಪ್ರಾಯೋಗಿಕತೆ ಮೂಡುತ್ತದೆ. ಅಂದರೆ, ಎರಡನೇ ಮಗುವಿನ ಆಗಮನ ಬೇಡ ಅಥವಾ ಅದನ್ನು ಕಂಡರೆ ಕಡಿಮೆ ಪ್ರೀತಿ ಎಂದಲ್ಲ. ಅನುಭವ ಕಲಿಸಿದ ಜೀವನ ಪಾಠ ಅದು. ಸೆಕೆಂಡ್ ಚೈಲ್ಡ್ ಸಿಂಡ್ರೋಮ್
ಪೋಷಕರು ಮೊದಲನೇ ಮಗುವಿಗೆ ಅತೀ ಹೆಚ್ಚಿನ ಗಮನಕೊಟ್ಟು ಎರಡನೆಯದನ್ನು ನಿರ್ಲಕ್ಷಿಸಿದಾಗ ಆ ಮಗುವಿನಲ್ಲಿ ಕಂಡುಬರುವ ಸಮಸ್ಯೆಗಳಿಗೆ “ಸೆಕೆಂಡ್ ಚೈಲ್ಡ್ ಸಿಂಡ್ರೋಮ್’ ಎಂದು ಗುರುತಿಸಲಾಗುತ್ತದೆ. ಆತ್ಮವಿಶ್ವಾಸದ ಕೊರತೆ, ಒಡಹುಟ್ಟಿದವರ ಬಗ್ಗೆ ಅಸೂಯೆ, ಸಾಮಾಜಿಕವಾಗಿ ಬೆರೆಯದೇ ಹಿಂಜರಿಯುವುದು, ಒಂಟಿಯಾಗಿರುವುದು ಮಗುವಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪ್ರತೀ ಮಗುವೂ ವಿಶಿಷ್ಟ ಮತ್ತು ವಿಭಿನ್ನ. ಮಗುವಿಗೆ ಕಲಿಸುತ್ತ, ತಾವೂ ಕಲಿಯುತ್ತ ಸಂಬಂಧಗಳು ರೂಪುಗೊಳ್ಳಬೇಕು. ಹೀಗಾಗಿ, ಎರಡನೆಯ ಮಗು ಹುಟ್ಟುವ ಮೊದಲೇ ಪೋಷಕರಿಗೆ ಆಪ್ತ ಸಮಾಲೋಚನೆ, ಮಾನಸಿಕ ತರಬೇತಿ ಒಳ್ಳೆಯದು. ಯಾವುದೇ ಮಗುವಿನ ಹೋಲಿಕೆ ಇನ್ನೊಬ್ಬರೊಂದಿಗೆ ಮಾಡುವುದರ ಬದಲಾಗಿ ಸರಿ-ತಪ್ಪು ಯಾವುದು ಎಂಬುದನ್ನು ಕಲಿಸಬೇಕು. ತಂದೆ-ತಾಯಿಗೆ ಎರಡನೇ ಮಗುವಾದರೂ, ಮಗುವಿಗೆ ಒಂದೇ ತಂದೆ-ತಾಯಿ ಎಂಬುದು ನೆನಪಿರಲಿ. ತಪ್ಪು ಯಾರೇ ಮಾಡಿದರೂ ತಿದ್ದುವ ಕೆಲಸ ನಡೆಯಬೇಕು. ದೊಡ್ಡವರು-ಸಣ್ಣವರು ಎಂದು ಸಮರ್ಥಿಸುವುದು ಸಲ್ಲ. ಪ್ರೀತಿಯನ್ನು ಅಳೆದು ತೂಗಿ ಸಮಾನವಾಗಿ ಹಂಚಲು ಸಾಧ್ಯವಿಲ್ಲ. ಆದರೆ, ಪೋಷಕರು ಪ್ರತೀ ಮಗುವಿಗೂ ಅಪ್ಪ-ಅಮ್ಮರಿಗೆ ತಾನೆಂದರೆ ಪ್ರೀತಿ ಎಂಬ ಭಾವನೆ ಮೂಡಿಸುವ ಸಣ್ಣಪುಟ್ಟ ಕ್ರಿಯೆಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಎರಡನೆಯ ಮಗು ತನ್ನ ತಮ್ಮ-ತಂಗಿ, ಪ್ರತಿಸ್ಪರ್ಧಿಯಲ್ಲ ಎಂಬ ಭಾವ ಮೊದಲ ಮಗುವಿನಲ್ಲಿ ಮೂಡಿದಾಗ ಆತ್ಮೀಯತೆ ಬೆಳೆಯುತ್ತದೆ. ಹೂಮುತ್ತು, ಬೆಚ್ಚಗಿನ ಅಪ್ಪುಗೆ, ಒಟ್ಟಿಗೇ ಊಟ, ಕತೆ ಹೇಳುವುದು, ಹಳೇ ಫೋಟೋ ನೋಡುವುದು… ಇವೆಲ್ಲ ಭಾವನಾತ್ಮಕವಾಗಿ ಬೆಸೆಯುವಿಕೆಗೆ ಸಹಕಾರಿ. ಒಟ್ಟಿನಲ್ಲಿ ಮಕ್ಕಳನ್ನು ಬೆಳೆಸಲು ಸಿದ್ಧ ಸೂತ್ರ ಎಂಬುದಿಲ್ಲ, ಹಾಗಾಗಿ ಅದು ಸುಲಭವೂ ಅಲ್ಲ ! ಡಾ. ಕೆ. ಎಸ್. ಚೈತ್ರಾ