Advertisement
ಈ ಸ್ಥಿತಿ ನಿರ್ಮಾಣಕ್ಕೆ ಕಾರಣವಾದುದೇ ವಿಚಿತ್ರ. ಒಂದೆಡೆ ತೀವ್ರ ಬರಗಾಲ, ಮತ್ತೂಂದೆಡೆ ಸಾವಿರಾರು ವರ್ಷಗಳಿಂದ ಜಾನುವಾರುಗಳನ್ನು ಪೋಷಿಸಿಕೊಂಡು ಬಂದ ಮಲೆಮಹದೇಶ್ವರ ಬೆಟ್ಟ 2013ರ ಮೇ 6ರಿಂದೀಚೆಗೆ ರಾಷ್ಟ್ರೀಯ ವನ್ಯಧಾಮವಾಗಿ ಘೋಷಣೆಯಾಗಿರುವುದು ಎನ್ನಬಹುದು. ಇದು ಜಾನುವಾರುಗಳನ್ನೇ ಜೀವನಾಧಾರ ವಾಗಿ ನಂಬಿರುವ ರೈತಾಪಿ ವರ್ಗ ಮತ್ತು ಕೃಷಿ ಕೂಲಿ ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಿಬಿಟ್ಟಿದೆ.
Related Articles
Advertisement
ಗೋಶಾಲೆ ತೆರೆಯುವ ಸಂಬಂಧ ಸರಕಾರ ಹೊರಡಿಸಿದ ಸುತ್ತೋಲೆ ಅನ್ವಯ, ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲು ಮಾತ್ರ ಅವಕಾಶವಿದೆ. ಜಾನುವಾರುಗಳ ರಕ್ಷಣೆಗಾಗಲಿ, ನೆರಳಿನ ವ್ಯವಸ್ಥೆ ಕಲ್ಪಿಸಲಾಗಲಿ ಅವಕಾಶ ಇಲ್ಲ ಎಂದು ಉಪವಿಭಾಗಾಧಿಕಾರಿ ನಳಿನ್ ಅತುಲ್ ವಿವರಿಸುತ್ತಾರೆ. ಜಾನುವಾರು ಹೊಂದಿರುವ ರೈತರು ಮೇವನ್ನು ಮನೆಗೆ ಒಯ್ಯಲು ಅವಕಾಶವಿಲ್ಲ.
ಕೊಳ್ಳೇಗಾಲ ತಾಲೂಕಿನಲ್ಲಿ ಇಂಥ 3 ಗೋಶಾಲೆಗಳನ್ನು ತೆರೆಯಲಾಗಿದ್ದು, ಇನ್ನು ಎರಡು ಮೇವು ಬ್ಯಾಂಕ್‌ಗಳನ್ನು ತೆರೆಯಲಾಗುತ್ತಿದೆ. ರೈತರು ಅರ್ಧ ದರದಲ್ಲಿ ಇಲ್ಲಿ ಮೇವು ಖರೀದಿಸಬಹುದಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮೇವು ಲಭ್ಯ ವಾಗದಿದ್ದರೆ, ಗೋಶಾಲೆ ಮುಚ್ಚುವುದು ಅನಿವಾರ್ಯ ವಾಗುತ್ತದೆ. ಗೋಶಾಲೆ ಮುಚ್ಚಿದರೆ ಕೊಳ್ಳೇಗಾಲ ತಾಲೂಕಿನಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಹಸುಗಳ ಸ್ಥಿತಿ ಗಂಭೀರವಾಗಲಿದೆ. ತಾಲೂಕಿನಲ್ಲಿ ಮಿಶ್ರತಳಿ 38 ಸಾವಿರ ಹಸುಗಳು ಮತ್ತು ದೇಸೀ ತಳಿಯ 57 ಸಾವಿರ ಗೋವುಗಳು ಸೇರಿ 95,378 ಹಸುಗಳಿವೆ. ಇವುಗಳಿಗೆ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ತೀವ್ರವಾಗುವ ಸಾಧ್ಯತೆ ಇದೆ ಎಂದು ತಾಲೂಕು ಪಶು ವೈದ್ಯಾಧಿಕಾರಿ ಬಿ.ಎಲ್. ವೆಂಕಟರಾಮನ್ ಅಂಕಿ-ಅಂಶ ನೀಡಿದರು.
ಕಾನೂನು ಅಡ್ಡಿಈ ಬಾರಿಯ ಭೀಕರ ಬರದಿಂದ ಬಚಾವ್ ಆಗಲು ಇರುವ ಏಕೈಕ ಪರಿಹಾರವೆಂದರೆ, ಕಾಡಿನ ಒಳಗೆ ದೊಡ್ಡಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡುವುದು ಎನ್ನುವುದು ರೈತರ ಪ್ರತಿಪಾದನೆ. ಆದರೆ ಇದಕ್ಕೆ ಕಾನೂನು ಅಡ್ಡಿ ಬರುತ್ತದೆ. ದೊಡ್ಡಿಗಳನ್ನು ವನ್ಯಧಾಮದಲ್ಲಿ ನಿರ್ಮಿಸಿ ಕೊಳ್ಳಲು ಅವಕಾಶವಿಲ್ಲ ಎಂದು ಮಲೆಮಹದೇಶ್ವರ ವನ್ಯಧಾಮ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ ಹೇಳುತ್ತಾರೆ. ಹೀಗಿದ್ದೂ ಮಾನವೀಯತೆ ಆಧಾರದಲ್ಲಿ ಪ್ರತಿದಿನ ಅರಣ್ಯಕ್ಕೆ ಜಾನುವಾರುಗಳನ್ನು ಒಯ್ದು ಮೇಯಿಸಿಕೊಂಡು ಬರಲು ಅವಕಾಶ ಮಾಡಿಕೊಡಲಾಗಿದೆ ಎನ್ನುವುದು ಅವರ ಸಮರ್ಥನೆ. ಒಂದೆಡೆ ಮೇವಿಲ್ಲ ಎಂಬ ಕಾರಣಕ್ಕೆ ಗೋಶಾಲೆ ಮುಚ್ಚಲು ಸರಕಾರ ಮುಂದಾಗಿದೆ. ಇನ್ನೊಂದೆಡೆ ಬೆಟ್ಟದಲ್ಲಿ ಇರುವ ಮೇವು ಒಣಗಿ ಹಾಳಾಗುತ್ತಿದೆ. ಸರಕಾರದ ದ್ವಂದ್ವ ನಿಲುವಿನಿಂದ ಬೇಸಗೆ ತೀವ್ರವಾದಂತೆಲ್ಲ ಜಾನುವಾರು ಮೇವು-ನೀರಿಲ್ಲದೇ ಸಾಯು ವುದು ಖಚಿತ ಎಂಬ ಚಿಂತೆ ಇಲ್ಲಿನ ನಾಗರಿಕರದ್ದು. ಬೆಟ್ಟ ಹುಲಿಗಳ ಪಾಲು
ಶತಮಾನಗಳಿಂದ ಜಾನುವಾರುಗಳಿಗೆ ಆಶ್ರಯ ತಾಣವಾಗಿದ್ದ ಮಲೆಮಹದೇಶ್ವರ ಬೆಟ್ಟ ಈಗ ಹುಲಿಗಳ ಪಾಲಾಗಿದೆ. ಸರಕಾರದ ಹೊಸ ನಿಯಮಾವಳಿ ಅನ್ವಯ ಬೆಟ್ಟದಲ್ಲಿ ದೊಡ್ಡಿ ನಿರ್ಮಿಸಿಕೊಳ್ಳಲು ಅವಕಾಶವಿಲ್ಲ. ಇದರಿಂದ ಮೇವಿನ ಕೊರತೆ ಇಮ್ಮಡಿಯಾಗಿದೆ. ಹಿಂದೆ ಬೇಸಗೆ ಆರಂಭವಾಗುತ್ತಿದ್ದಂತೆ ಜಾನುವಾರುಗಳನ್ನು ಕಾಡಿಗೆ ಅಟ್ಟಿಕೊಂಡು ಹೋಗುತ್ತಿದ್ದ ರೈತರು 3-4 ತಿಂಗಳ ಕಾಲ ದೊಡ್ಡಿಗಳನ್ನು ನಿರ್ಮಿಸಿಕೊಂಡು ಅಲ್ಲೇ ಉಳಿದು, ಮಳೆ ಆರಂಭವಾದ ಬಳಿಕ ಊರಿಗೆ ಮರಳುತ್ತಿದ್ದರು. ಬೇಸಗೆಯಲ್ಲಿ ಮೇವು-ನೀರಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ರೈತರು ನಿರಾಳವಾಗಿರುತ್ತಿದ್ದರು. ಆದರೆ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ವನ್ಯಧಾಮಗಳಲ್ಲಿ ಜಾನುವಾರು ಮೇಯುವಂತಿಲ್ಲ. ಇದನ್ನು ಅರಣ್ಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಮೇವಿನ ಸಮಸ್ಯೆ ತೀವ್ರವಾಗಿದೆ. ಕೆಲವೆಡೆ ಇದು ವನಪಾಲಕರು ಹಾಗೂ ರೈತರ ನಡುವಿನ ಚಕಮಕಿ, ಸಂಘರ್ಷಕ್ಕೂ ಕಾರಣವಾಗಿದೆ.