Advertisement

ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್‌ ದಂಧೆ ಜೋರು ?

09:54 PM May 21, 2019 | mahesh |

ಮಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ದೇಶಾದ್ಯಂತ ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಕುತೂಹಲ ಹೆಚ್ಚಾಗುತ್ತಿದೆ. ಗಮನಾರ್ಹವೆಂದರೆ, ಸಾರ್ವಜನಿಕ ಸ್ಥಳ, ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳಲ್ಲೂ ಅಭ್ಯರ್ಥಿಗಳ ಸೋಲು – ಗೆಲುವಿನ ಲೆಕ್ಕಾಚಾರ ಹಾಕುವುದರಲ್ಲಿ ಜನ ತೊಡಗಿದ್ದಾರೆ. ಈ ನಡುವೆ, ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಬೆಟ್ಟಿಂಗ್‌ ಜಾಲ ಸಕ್ರಿಯವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

Advertisement

ಜಿಲ್ಲೆಯಲ್ಲಿ ಬೆಟ್ಟಿಂಗ್‌ ದಂಧೆ ನಡೆಯುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ನಡೆದಿರುವ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಸಾಕ್ಷಿಯಾಗಿದ್ದು, ಆಗ ನಗರದಲ್ಲಿ ಬೆಟ್ಟಿಂಗ್‌ ನಡೆಸುತ್ತಿದ್ದ ನೆಟ್‌ವರ್ಕ್‌ ಅನ್ನು ಪೊಲೀಸ್‌ ಆಯುಕ್ತರು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದರು.

ಹೀಗಾಗಿ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿರುವ ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿಯೂ ತೆರೆಮರೆಯಲ್ಲಿ ಬೆಟ್ಟಿಂಗ್‌ ನಡೆಯಬಹುದು ಎನ್ನುವ ಅನುಮಾನ ಮೂಡಿದ್ದು, ಆ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯೂ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಹೆಚ್ಚು ದಿನ ಉಳಿದಿಲ್ಲ. ಈಗಾಗಲೇ ವಿವಿಧ ಮಾಧ್ಯಮಗಳು ಮತದಾನೋತ್ತರ ಸಮೀಕ್ಷೆ ನಡೆಸಿದ್ದು, ಫಲಿತಾಂಶದ ಕಾತರವನ್ನು ಇನ್ನಷ್ಟು ಹೆಚ್ಚಿಸಿವೆ. ಫೇಸ್‌ಬುಕ್‌, ವಾಟ್ಸಪ್‌, ಟ್ವಿಟರ್‌ಗಳಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ಅಂತರದ ಲೆಕ್ಕಾಚಾರದಲ್ಲಿ ನೆಟ್ಟಿಗರು ತೊಡಗಿಸಿಕೊಂಡಿದ್ದಾರೆ.

ದ.ಕ. ದಲ್ಲೂ ಮಂಡ್ಯದ್ದೇ ಮಾತು!
ರಾಜ್ಯದಲ್ಲಿ ಹೈ ಟೆನ್ಶನ್‌ ಸೃಷ್ಟಿಸಿರುವ ಲೋಕಸಭಾ ಕ್ಷೇತ್ರವೆಂದರೆ ಮಂಡ್ಯ. ಅಲ್ಲಿ ಗೆಲುವು ಯಾರದ್ದು ಎಂಬ ಲೆಕ್ಕಾಚಾರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ದಿನದಿಂದಲೇ ಆರಂಭವಾಗಿತ್ತು. ಈಗ ಫಲಿತಾಂಶ ಘೋಷಣೆಯ ದಿನ ಹತ್ತಿರ ಬರುತ್ತಿದ್ದಂತೆಯೇ ಕೇವಲ ಮಂಡ್ಯದ ಜನತೆ ಮಾತ್ರವಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯವರಿಗೂ ಅಲ್ಲಿನ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಅಂದಾಜು ಗೆಲುವಿನ ಅಂತರ ಎಷ್ಟಿರಬಹುದು ಎಂಬ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.

ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಬ್ಬರ ನಡುವೆ 1 ಲಕ್ಷ, ಒಂದೂವರೆ ಲಕ್ಷ, ಎರಡು ಲಕ್ಷಗಳ ಅಂತರದ ಗೆಲುವು ಬರಲಿದೆ ಎಂಬುದಾಗಿ ಬೆಟ್‌ ಕಟ್ಟಲಾಗುತ್ತಿದೆ. ಲಕ್ಷ ರೂ. ಗಳಿಗೂ ಮಿಕ್ಕಿ ಬೆಟ್‌ ಕಟ್ಟಲಾಗುತ್ತಿದೆ ಎಂದು ಕೆಲವು ಸಾರ್ವಜನಿಕರು ಹೇಳುತ್ತಾರೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Advertisement

ಎಷ್ಟು ಲೀಡ್‌ ಬರಬಹುದು?
ಬಸ್‌, ಬಸ್‌ ನಿಲ್ದಾ ಣ, ಅಂಗಡಿ ಮುಂಗಟ್ಟುಗಳು, ಶಾಪಿಂಗ್‌ ಮಾಲ್‌, ವಿವಿಧ ಕಾರ್ಯಕ್ರಮಗಳು ಸಹಿತ ಎಲ್ಲೆಡೆ ಸೋಲು- ಗೆಲುವಿನ ಅಂತರದ ಲೆಕ್ಕಾಚಾರ.
ಜನರು ಮತದಾನೋತ್ತರ ಸಮೀಕ್ಷೆಗಳನ್ನು ಆಧಾರವಾಗಿಸಿ ಸ್ಥಳೀಯವಾಗಿ, ಕರ್ನಾಟಕದಲ್ಲಿ ಮತ್ತು ದೇಶದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಎಷ್ಟು ಅಂತರದಲ್ಲಿ ಗೆಲುವಾಗಬಹುದು, ರಾಜಕೀಯ ಪಕ್ಷಗಳಿಗೆ ಎಷ್ಟು ಸೀಟುಗಳು ಸಿಗಬಹುದು, ಪೂರ್ಣ ಬಹುಮತ ದೊರೆಯಬಹುದೇ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

 ಬೆಟ್ಟಿಂಗ್‌ ಮೇಲೆ ನಿಗಾ
ಲೋಕಸಭಾ ಚುನಾವಣೆ ಫಲಿತಾಂಶ ಸಂಬಂಧಿಸಿದಂತೆ ಬೆಟ್ಟಿಂಗ್‌ ನಡೆಸುತ್ತಿರುವುದರ ಬಗ್ಗೆ ಪೊಲೀಸ್‌ ಇಲಾಖೆ ಗಮನಕ್ಕೆ ಬಂದಿಲ್ಲ. ಆದಾಗ್ಯೂ ಪೊಲೀಸ್‌ ಇಲಾಖೆ ಈ ಬಗ್ಗೆ ಗಮನಿಸುತ್ತಿದೆ. ಒಂದು ವೇಳೆ ಯಾರಾದರು ಬೆಟ್ಟಿಂಗ್‌ ನಡೆಸಿದ ಬಗ್ಗೆ ತಿಳಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಸಂದೀಪ್‌ ಪಾಟೀಲ್‌, ಪೊಲೀಸ್‌ ಆಯುಕ್ತರು, ಮಂಗಳೂರು ನಗರ

Advertisement

Udayavani is now on Telegram. Click here to join our channel and stay updated with the latest news.

Next