Advertisement
ದಿಲ್ಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ದೇಶದ ಇನ್ನಿತರ ರಾಜ್ಯಗಳಲ್ಲಿ ಇರಬಹುದಾದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ದೀಪಕ್ ಗುಪ್ತಾ ಅವರುಳ್ಳ ಪೀಠ, ಎಲ್ಲ ರಾಜ್ಯಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿತು. ಜತೆಗೆ, ದಿಲ್ಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸ್ಮಾಗ್ ಟವರ್ ಸ್ಥಾಪಿಸುವ ಬಗ್ಗೆ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಕೇಂದ್ರಕ್ಕೆ ತಿಳಿಹೇಳಿತು.
ತನ್ನ ಕಟ್ಟುನಿಟ್ಟಿನ ಸೂಚನೆಯ ಹೊರತಾಗಿಯೂ ಪಂಜಾಬ್, ಹರಿಯಾಣಗಳಲ್ಲಿ ಕಳೆಗಳಿಗೆ ಬೆಂಕಿ ಇಡುವ ರೈತರ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಅಲ್ಲಿನ ಸರಕಾರಗಳು ವಿಫಲವಾಗಿರುವುದಕ್ಕೆ ನ್ಯಾಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಮಾಲಿನ್ಯಕ್ಕೆ ಮೂಲ ಕಾರಣವಾದ ಕಳೆಗಳ ದಹನವನ್ನು ತಡೆಯಲು ನಿಮ್ಮಿಂದ (ಸರಕಾರಗಳು) ಸಾಧ್ಯವಾಗುತ್ತಿಲ್ಲ. ಈ ಮೂಲಕ ಜನರನ್ನು ಬಲ ವಂತವಾಗಿ ಗ್ಯಾಸ್ ಚೇಬರ್ ನಲ್ಲಿ ಜೀವಿಸುವಂತೆ ಮಾಡಿದ್ದೀರಿ. ಜನರನ್ನು ಹಾಗೆ ನಿಧಾನವಾಗಿ ಕೊಲ್ಲುವುದಕ್ಕಿಂತ, ಒಂದಿಷ್ಟು ಸ್ಫೋಟಕಗಳನ್ನು ತಂದು ಸ್ಫೋಟಿಸಿ ಜನರನ್ನು ಒಂದೇ ಬಾರಿಗೆ ಕೊಂದುಬಿಡಿ’ ಎಂದು ಸರಕಾರಗಳ ವಿರುದ್ಧ ನ್ಯಾಯ ಮೂರ್ತಿಗಳು ಹರಿಹಾಯ್ದರು.