Advertisement

ದೂರವಾದ ದುರುಪಯೋಗದ ಆತಂಕ: ಸಂತುಲಿತ ತೀರ್ಪು

06:00 AM Sep 27, 2018 | |

ಆಧಾರ್‌ಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್‌ ನೀಡಿರುವ ತೀರ್ಪು ಐತಿಹಾಸಿಕ ಎನ್ನುವುದು ನಿಜ. ಇದರ ಜತೆಗೆ ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚು ಮಹತ್ವದ್ದೂ ಆಗಿದೆ. 12 ಅಂಕಿಗಳ ಆಧಾರ್‌ ಕುರಿತಾಗಿದ್ದ ಬಹುತೇಕ ಅನುಮಾನಗಳು ಮತ್ತು ಗೊಂದಲಗಳನ್ನು ಪಂಚಸದಸ್ಯ ಪೀಠ ನೀಡಿದ ಈ ತೀರ್ಪು ಬಗೆಹರಿಸಿದೆ. ಆಧಾರ್‌ನ ಸಾಂವಿಧಾನಿಕ ಸ್ಥಾನಮಾನವನ್ನು ಎತ್ತಿ ಹಿಡಿಯುವುದರ ಜತೆಗೆ ಅದರ ಬಳಕೆಗೆ ನಿರ್ಬಂಧ ಹೇರುವ ಮೂಲಕ ನ್ಯಾಯಾಲಯ ಒಂದು ಸಂತುಲಿತವಾದ ತೀರ್ಪನ್ನು ನೀಡಿದೆ. 2009ರಲ್ಲಿ ಆಧಾರ್‌ ನೋಂದಣಿ ಪ್ರಾರಂಭವಾದಂದಿನಿಂದ ಅದನ್ನು ಸಮರ್ಥಿಸುವ ಮತ್ತು ವಿರೋಧಿಸುವ ಎರಡು ಗುಂಪುಗಳು ಸೃಷ್ಟಿಯಾಗಿದ್ದವು. ಇದೀಗ ತೀರ್ಪನ್ನು ಈ ಎರಡೂ ಗುಂಪುಗಳು ಸ್ವಾಗತಿಸಿರುವುದನ್ನು ನೋಡಿದಾಗ ಆಧಾರ್‌ ಇನ್ನಷ್ಟು ಚರ್ಚೆಗೆ ಗ್ರಾಸವಾಗುವುದಿಲ್ಲ ಎಂದು ಭಾವಿಸಬಹುದು. 

Advertisement

ಪ್ಯಾನ್‌ ನಂಬರ್‌, ಆದಾಯ ಕರ ಪಾವತಿ, ಸಬ್ಸಿಡಿ ಸೇರಿದಂತೆ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆಧಾರ್‌ ಸಂಯೋಜನೆಯನ್ನು ಕಡ್ಡಾಯಗೊಳಿಸಿದೆ. ಇದೇ ವೇಳೆ ಮೊಬೈಲ್‌ ಸಿಮ್‌ ಪಡೆದುಕೊಳ್ಳಲು , ಸಿಬಿಎಸ್‌ಇ, ನೀಟ್‌, ಯುಜಿಸಿ ಪರೀಕ್ಷೆಗಳಿಗೆ, ಶಾಲಾ ಪ್ರವೇಶಾತಿ, ಬ್ಯಾಂಕ್‌ ಖಾತೆ ಇತ್ಯಾದಿ ವಿಚಾರಗಳಿಗೆ ಆಧಾರ್‌ ಕಡ್ಡಾಯವಲ್ಲ ಎನ್ನುವ ಮೂಲಕ ಆಧಾರ್‌ ಬಳಕೆಗೆ ಸ್ಪಷ್ಟವಾದ ಮಾರ್ಗಸೂಚಿಯೊಂದನ್ನು ಹಾಕಿಕೊಟ್ಟಿದೆ. ಖಾಸಗಿ ಕಂಪೆನಿಗಳು ಆಧಾರ್‌ ದತ್ತಾಂಶ ನೀಡಲು ಒತ್ತಾಯಿಸಬಾರದು ಎನ್ನುವುದು ತೀರ್ಪಿನ ಒಂದು ಮುಖ್ಯ ಅಂಶ. ಟೆಲಿಕಾಂ ಕಂಪೆನಿಗಳು ಸೇರಿದಂತೆ ಹಲವು ಖಾಸಗಿ ಸಂಸ್ಥಾಪನೆಗಳು ತಮ್ಮ ಸೇವೆಗಾಗಿ ಆಧಾರ್‌ ಕೇಳುವ ಪರಿಪಾಠ ಪ್ರಾರಂಭವಾಗಿತ್ತು. ಇದರಿಂದ ಆಧಾರ್‌ ದತ್ತಾಂಶದಲ್ಲಿರುವ ಖಾಸಗಿ ಮಾಹಿತಿಗಳು ಖಾಸಗಿಯವರ ಕೈಗೆ ಸಿಗುವ ಆತಂಕ ಇತ್ತು. ಆಧಾರ್‌ ಕಾಯಿದೆಯ ಸೆಕ್ಷನ್‌ 57ನ್ನು ರದ್ದುಗೊಳಿಸುವ ಮೂಲಕ ಬಹಳ ಕಾಲದಿಂದ ಜನರಲ್ಲಿದ್ದ ಆಧಾರ್‌ ಮಾಹಿತಿ ದುರುಪಯೋಗವಾಗುವ ಆತಂಕವನ್ನು ದೂರಮಾಡಿದೆ. 

ಅಂತೆಯೇ ಸೆಕ್ಷನ್‌ 33(ಜಿಜಿ)ಅನ್ನು ರದ್ದುಮಾಡಿರುವುದು ತೀರ್ಪಿನ ಇನ್ನೊಂದು ಮುಖ್ಯ ಅಂಶ. ಈ ಸೆಕ್ಷನ್‌ ಅಡಿಯಲ್ಲಿ ಜನರ ಆಧಾರ್‌ ಮಾಹಿತಿಯನ್ನು ಬಹಿರಂಗಪಡಿಸುವ ಅಧಿಕಾರ ಸರಕಾರಕ್ಕೆ ಇತ್ತು. ರಾಷ್ಟ್ರೀಯ ಭದ್ರತೆ ಮತ್ತು ಖಾಸಗಿತನದ ಸಂರಕ್ಷಣೆಯ ದೃಷ್ಟಿಯಿಂದ ಇದು ಅಪಾಯಕಾರಿಯಾದ ಕಾರಣ ನ್ಯಾಯಾಲಯ ಈ ಸೆಕ್ಷನ್‌ ಅನ್ನು ರದ್ದುಪಡಿಸಿದೆ. ಹೀಗೆ ಒಂದರ್ಥದಲ್ಲಿ ನ್ಯಾಯಾಲಯ ಆಧಾರ್‌ನ ಲೋಪಗಳನ್ನೆಲ್ಲ ಸರಿಪಡಿಸುವ ಕೆಲಸವನ್ನು ಮಾಡಿದೆ. ಒಟ್ಟಾರೆ ತೀರ್ಪನ್ನು ಅವಲೋಕಿಸಿದಾಗ ಆಧಾರ್‌ ಅನ್ನು ಅದರ ಮೂಲ ಉದ್ದೇಶಕ್ಕಷ್ಟೇ ಸೀಮಿತಗೊಳಿಸಿರುವಂತೆ ಕಾಣಿಸುತ್ತಿದೆ. ಆಧಾರ್‌ನ ಮಹತ್ವವನ್ನು ಎತ್ತಿಹಿಡಿಯುತ್ತಲೇ ಅದರ ಉಪಯೋಗಕ್ಕೆ ನಿರ್ಬಂಧಗಳನ್ನು ಹಾಕುವ ಮೂಲಕ ಜನರಿಗೆ ತಮ್ಮ ಖಾಸಗಿ ಮಾಹಿತಿಗಳು ಎಲ್ಲೆಲ್ಲ ಬಳಕೆಯಾಗುತ್ತಿವೆ ಎನ್ನುವುದನ್ನು ತಿಳಿಯುವ ಅವಕಾಶವನ್ನು ನೀಡಿದೆ ಹಾಗೂ ಇದೇ ವೇಳೆ ಸರಕಾರಕ್ಕೆ ಅದರ ಮಿತಿಯನ್ನು ಮನವರಿಕೆ ಮಾಡಿಕೊಟ್ಟಿದೆ. 

ಇದೇ ವೇಳೆ ಪಂಚ ಪೀಠದ ಸದಸ್ಯರೊಬ್ಬರಾಗಿದ್ದ ನ್ಯಾ| ವೈ. ಚಂದ್ರಚೂಡ ಅವರು ಆಧಾರ್‌ ಕುರಿತಾಗಿ ಎತ್ತಿರುವ ಆಕ್ಷೇಪಗಳು ಗಮನಾರ್ಹ. ಮುಖ್ಯವಾಗಿ ಆಧಾರ್‌ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಮಂಜೂರು ಮಾಡಿಕೊಂಡಿರುವುದನ್ನು ಅವರು ಬಲವಾಗಿ ಆಕ್ಷೇಪಿಸಿ 
ಇದು ಸಂವಿಧಾನಕ್ಕೆ ಎಸಗಿರುವ ದ್ರೋಹ ಎಂದಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಹಣಕಾಸು ಮಸೂದೆಯಾಗಿ ಅಂಗೀಕರಿಸುವ ಮೂಲಕ ಮೇಲ್ಮನೆಯ ಸಾಂವಿಧಾನಿಕ ಅಸ್ತಿತ್ವವನ್ನು ಕಡೆಗಣಿಸಿದಂತಾಗುತ್ತದೆ. ಹಣಕಾಸು ಮಸೂದೆ ರೂಪದಲ್ಲಿರುವುದರಿಂದ ರಾಜ್ಯಸಭೆಗೆ ಅದನ್ನು ತಿರಸ್ಕರಿಸುವ ಅಥವಾ ತಿದ್ದುಪಡಿ ಮಾಡುವ ಅಧಿಕಾರ ಇಲ್ಲ, ಶಿಫಾರಸುಗಳನ್ನು ನೀಡಬಹುದಷ್ಟೆ. 

ಆಧಾರ್‌ಗೆ ಸಂಬಂಧಿಸಿದಂತೆ ರಾಜ್ಯಸಭೆ ಮಾಡಿದ ಶಿಫಾರಸುಗಳನ್ನು ಲೋಕಸಭೆ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಚಂದ್ರಚೂಡ ಎತ್ತಿದ ಆಕ್ಷೇಪ ಮುಖ್ಯವಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next