ಹೊಸದಿಲ್ಲಿ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸಿರುವ ವಿಶ್ವದ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 114ನೇ ಸ್ಥಾನ ಸಿಕ್ಕಿದೆ.
ಲಂಡನ್ ಮೂಲದ ಕ್ಯು.ಎಸ್. ಸಂಸ್ಥೆ ನಡೆಸಿರುವ ಅಧ್ಯಯನದ ವರದಿ ಬುಧವಾರ ಪ್ರಕಟಗೊಂಡಿದ್ದು, ಅದರಲ್ಲಿ ಬೆಂಗಳೂರು ಸೇರಿದಂತೆ ಭಾರತದ ನಾಲ್ಕು ನಗರಗಳು ಸ್ಥಾನ ಪಡೆದಿವೆ. ಮುಂಬಯಿಗೆ 103ನೇ ಸ್ಥಾನ ಲಭ್ಯವಾಗಿದ್ದರೆ, ಚೆನ್ನೈಗೆ 125 ಹಾಗೂ ದಿಲ್ಲಿಗೆ 129ನೇ ಸ್ಥಾನ ಸಿಕ್ಕಿದೆ.
ಕೈಗೆಟಕುವ ಬೆಲೆಯಲ್ಲಿ ಶಿಕ್ಷಣ, ವಿದ್ಯಾರ್ಥಿಗಳ ಮುಕ್ತ ಬೆರೆಯುವಿಕೆಗೆ ಇರುವ ಅವಕಾಶ ಹಾಗೂ ವಿದ್ಯಾರ್ಥಿಗಳ ಅಪೇಕ್ಷೆಯನ್ನು ಮುಟ್ಟುವಂಥ ವಾತಾವರಣ – ವಿಷಯಗಳನ್ನು ಇಟ್ಟುಕೊಂಡು ಸಮೀಕ್ಷೆ ನಡೆಸಲಾಗಿದೆ. ಕಳೆದ ವರ್ಷದ ಪಟ್ಟಿಯಲ್ಲಿ ಭಾರತದ ಬೆಂಗಳೂರು, ಮುಂಬಯಿ ಮಾತ್ರವೇ ಸ್ಥಾನ ಪಡೆದಿದ್ದವು. ಮುಂಬಯಿ 106ನೇ ಸ್ಥಾನದಲ್ಲಿದ್ದರೆ, ಬೆಂಗಳೂರು 110ನೇ ಸ್ಥಾನದಲ್ಲಿತ್ತು.
ಈ ವರ್ಷ, ಚೆನ್ನೈ ಮತ್ತು ದೆಹಲಿ ನಗರಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಅಂದಹಾಗೆ, ಪಟ್ಟಿ ಯಲ್ಲಿ ಬ್ರಿಟನ್‌ನ ರಾಜಧಾನಿ ಲಂಡನ್‌ಗೆ ಮೊದಲ ಸ್ಥಾನ ಸಿಕ್ಕಿದ್ದರೆ, 2ನೇ ಸ್ಥಾನವನ್ನು ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್ ಹಾಗೂ ಜರ್ಮನಿಯ ಮ್ಯೂನಿಚ್ ನಗರ ಗಳಿವೆ. ಅನಂತರದ ಸ್ಥಾನಗಳಲ್ಲಿ ಸ್ವಿಜರ್ಲೆಂಡ್‌ನ ಜ್ಯೂರಿಚ್, ಆಸ್ಟ್ರೇಲಿಯಾದ ಮೆಲ್ಬರ್ನ್ ನಗರಗಳಿವೆ.