Advertisement

ಬೆಟ್ಟಂಪಾಡಿ: ಡಾಮರು ಕಾಮಗಾರಿಗೆ ಒತ್ತಾಯ

03:10 PM Oct 14, 2018 | Team Udayavani |

ನಿಡ್ಪಳ್ಳಿ : ಇರ್ದೆ, ಬೆಟ್ಟಂಪಾಡಿ,ನಿಡ್ಪಳ್ಳಿ ಗ್ರಾಮದ ಮಕ್ಕಳಿಗೆ ಹೈಸ್ಕೂಲ್‌ ಮಟ್ಟದ ಶಿಕ್ಷಣ ಪಡೆಯಲು ಇರುವ ಏಕೈಕ ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆ. ಈ ಶಾಲೆಗೆ ತೆರಳುವ ರಸ್ತೆಗೆ ಡಾಮರು ಹಾಕಬೇಕು ಎನ್ನುವ ಒತ್ತಾಯ ಸಾರ್ವಜನಿಕವಾಗಿ ಕೇಳಿಬಂದಿದೆ.

Advertisement

ರೆಂಜದ ಮುಖ್ಯ ರಸ್ತೆಯಿಂದ ನವೋದಯ ಪ್ರೌಢಶಾಲೆಗೆ ಹೋಗುವ ರಸ್ತೆಗೆ ಕೆಲವು ವರ್ಷಗಳ ಹಿಂದೆ ಡಾಮರು ಹಾಕಲಾಗಿದೆ. ಅದೇ ಮುಖ್ಯ ರಸ್ತೆಯಿಂದ ಮುಂದೆ ಹೋದಾಗ ಬಲಕ್ಕೆ ಸರಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ತಿರುಗುವಲ್ಲಿಂದ ಅಂದಾಜು 100 ಮೀಟರ್‌ ಉದ್ದದ ರಸ್ತೆ ಕಚ್ಚಾ ರಸ್ತೆಯಾಗಿಯೇ ಉಳಿದಿದೆ. ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಮಕ್ಕಳಿಗೆ ನಡೆದಾಡಲು ಕಷ್ಟಕರವಾಗಿದೆ. ರಸ್ತೆಗೆ ಕಾಂಕ್ರೀಟ್‌ ಅಥವಾ ಡಾಮರು ಹಾಕಬೇಕು ಎನ್ನುವ ಬೇಡಿಕೆ ಹಿಂದಿನಿಂದಲೂ ಇದೆ. 

 ಶಾಸಕರಿಗೆ ಮನವಿ
ಶಾಲೆಯಲ್ಲಿ ಕೂಡ ಕೆಲ ಮೂಲ ಸೌಕರ್ಯಗಳ ಕೊರತೆ ಇದೆ. ಒಂದು ನೂತನ ಕೊಠಡಿ ಕಾಮಗಾರಿ ಕೂಡ ಅರ್ಧದಲ್ಲಿ ನಿಂತಿದೆ. ಈ ಬಗ್ಗೆ ಶಾಸಕರಿಗೆ ಮನವಿ ನೀಡಲಾಗುವುದು. ಹಾಗೆಯೇ ಪ್ರೌಢಶಾಲೆಗೆ ಬರುವ ರಸ್ತೆಗೆ ಡಾಮರ್‌ ಹಾಕಿಸಲು ಕೂಡ ಶಾಸಕರ ಗಮನ ಸೆಳೆಯಲು ಪ್ರಯತ್ನಿಸಲಾಗುವುದು.
– ಸುಂದರ ನಾಯಕ್‌ ಬಾಳೆಗುಳಿ,
ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ 

 ರಸ್ತೆಗೆ ಕಾಂಕ್ರೀಟ್‌ ಆಗಬೇಕು

ಶಾಲೆ ಆರಂಭವಾಗಿ ಸುಮಾರು 22 ವರ್ಷ ಕಳೆದರೂ ಇಲ್ಲಿಗೆ ಬರುವ ರಸ್ತೆ ಮಾತ್ರ ಕಾಂಕ್ರೀಟ್‌ ಆಗದೆ ಇದ್ದ ಹಾಗೆಯೇ ಇದೆ. ಶಾಲೆಯಲ್ಲಿ ಇರುವ ಕೆಲ ಸಣ್ಣ ಮಟ್ಟದ ಮೂಲ ಸೌಕರ್ಯಗಳ ಕೊರತೆಯನ್ನು ನೀಗಿಸುವುದರೊಂದಿಗೆ ರಸ್ತೆಯೂ ಅಭಿವೃದ್ಧಿ ಆಗಬೇಕು. ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯಲ್ಲಿ ಪ್ರಸ್ತಾವನೆ ಸಿದ್ಧವಾಗಿದೆ. ಹಂತಹಂತವಾಗಿ ಇದರ ಅಭಿವೃದ್ಧಿಗೆ ಜನಪ್ರತಿನಿಧಿಗಳ ಸಹಕಾರದ ನಿರೀಕ್ಷೆಯಲ್ಲಿದ್ದೇವೆ.
 - ಶ್ಯಾಮಲಾ ಎಂ., ಪ್ರಭಾರ ಮುಖ್ಯಶಿಕ್ಷಕ,
    ಬೆಟ್ಟಂಪಾಡಿ ಪ್ರೌಢಶಾಲೆ 

Advertisement

Udayavani is now on Telegram. Click here to join our channel and stay updated with the latest news.

Next