Advertisement

ಸೋರುತ್ತಿರುವ ಬೆಟ್ಟಂಪಾಡಿ ಶಾಲಾ ಕಟ್ಟಡ: ಶಾಶ್ವತ ಪರಿಹಾರಕ್ಕೆ ಆಗ್ರಹ

10:42 PM Oct 02, 2019 | mahesh |

 

Advertisement

ಬೆಟ್ಟಂಪಾಡಿ: ನಿಡ್ಪಳ್ಳಿ ಗ್ರಾ.ಪಂ.ನ ತ್ತೈಮಾಸಿಕ ಸಭೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಮತಿ ನೇತೃತ್ವದಲ್ಲಿ ಪಂಚಾಯತ್‌ನಲ್ಲಿ ನಡೆಯಿತು.

ಮಳೆಯ ನೀರು ಕೊಠಡಿಯೊಳಗೆ ಬರುತ್ತದೆ. ಶಾಲೆಗಳಿಗೆ 2 ರಜೆ ಇದ್ದರೆ ಮೂರನೇ ದಿನ ಕೊಠಡಿಯಲ್ಲಿ ತುಂಬಿದ ನೀರನ್ನು ಹೊರ ಚೆಲ್ಲುವ ಕೆಲಸ ವಿದ್ಯಾರ್ಥಿಗಳದ್ದು. ಇದರಿಂದ ಪಾಠ – ಪ್ರವಚನಗಳಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಪಂಚಾಯತ್‌ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುವಂತೆ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ಯಾಮಲಾ ಆಗ್ರಹಿಸಿದರು.

ಶಾಲೆಯಿಂದ ಸ್ವಲ್ಪ ದೂರದಲ್ಲಿ ಕೊಳವೆ ಬಾವಿ ಸ್ವಿಚ್‌ ಇದೆ. ಮಳೆಗಾಲದಲ್ಲಿ ವಿದ್ಯುತ್‌ ಶಾಕ್‌ ಹೊಡೆಯುವ ಸಾಧ್ಯತೆ ಇದೆ. ಅದನ್ನು ಶಾಲೆಯ ಆವರಣದಲ್ಲಿ ಅಳವಡಿಸುವಂತೆ ಮೆಸ್ಕಾಂ ಅಧಿಕಾರಿಗಳನ್ನು ಆಗ್ರಹಿಸಿದರು. ಈ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ನೀಡುವಂತೆ ಮೆಸ್ಕಾಂ ಅಧಿಕಾರಿಗಳು ತಿಳಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು. ಶಾಲೆಯಲ್ಲಿ ಅಂಗವಿಕಲರ ಸಂಖ್ಯೆ ಹೆಚ್ಚು ಇದೆ. ಅವರಿಗೆ ವಿಶೇಷ ಶೌಚಾಲಯದ ಅಗತ್ಯವಿದೆ ಎಂದು ಮುಖ್ಯ ಶಿಕ್ಷಕಿ ಮನವಿ ಮಾಡಿದರು.

ಪಹಣಿ ಪತ್ರ ಆಗಿಲ್ಲ
ಚೂರಿಪದವು ಶಾಲೆಯ ಪಹಣಿ ಪತ್ರ ಇನ್ನೂ ಆಗಿಲ್ಲ. ಹಲವು ವರ್ಷಗಳಿಂದ ಮನವಿಯನ್ನು ಕಂದಾಯ ಇಲಾಖೆಗೆ ನೀಡುತ್ತಾ ಬಂದಿದ್ದೇವೆ. ಇವತ್ತೂ ಮನವಿ ನೀಡಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಭಾರ ಮುಖ್ಯ ಶಿಕ್ಷಕಿ ಆಶಾ ಆಗ್ರಹಿಸಿದರು. ಪಂಚಾಯತ್‌ನಿಂದಲೂ ಪಹಣಿ ಪತ್ರವನ್ನು ನೀಡುವಂತೆ ಹಲವು ಬಾರಿ ನಿರ್ಣಯ ಕಳು ಹಿಸಲಾಗಿದೆ ಎಂದು ಸುಮತಿ ಹೇಳಿದರು.

Advertisement

ಅಕ್ರಮ-ಸಕ್ರಮ ಬಾಕಿ
ಅಕ್ರಮ-ಸಕ್ರಮದ ಅರ್ಜಿಗಳು ಬಾಕಿ ಇವೆ. ಅಂಬೇಡ್ಕರ್‌ ಭವನದ ಗಡಿಗುರುತು ಮಾಡಿಲ್ಲ. ಯಾಕೆ ಬಾಕಿ ಉಳಿದಿದೆ ಎಂದು ಗ್ರಾಮಲೆಕ್ಕಿಗರನ್ನು ಸದಸ್ಯ ಲಕ್ಷ್ಮಣ ನಾಯ್ಕ ಪ್ರಶ್ನಿಸಿದರು. ಬರುವ ತ್ತೈಮಾಸಿಕ ಸಭೆಯ ಒಳಗಡೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಲಾಯಿತು.

ನಿಡ್ಪಳ್ಳಿ ಶಾಲೆಯ ಬಳಿಯೇ ಅಂಗನವಾಡಿ ಕೇಂದ್ರ ಇದೆ. ಇಲ್ಲಿಯ ಮಕ್ಕಳು ಈ ಶಾಲೆಗೆ ಸೇರುತ್ತಾರೆ. ನೂತನ ಅಂಗನವಾಡಿ ಕೇಂದ್ರಕ್ಕೆ ಅನುದಾನ ಬಂದಿದೆ. ಕೇಂದ್ರಕ್ಕೆ ಯಾಕೆ ಒಪ್ಪಿಗೆ ನೀಡುವುದಿಲ್ಲ ಎಂದು ಸಭೆಯಲ್ಲಿ ಬೆಟ್ಟಂಪಾಡಿ ವ್ಯಾಪ್ತಿಯ ಅಂಗನವಾಡಿ ಮೇಲ್ವಿಚಾರಕಿ ನಾಗರತ್ನಾ ಹೇಳಿದರು.

ಶಾಲಾ ಮುಖ್ಯ ಶಿಕ್ಷಕ ತೋಪಯ್ಯ ಮಾತನಾಡಿ, ಶಾಲೆಯ ಬಳಿಯೇ ಅಂಗನ ವಾಡಿ ಕೇಂದ್ರಕ್ಕೆ ಜಾಗ ಇರುವುದರಿಂದ ಅಲ್ಲಿಯೇ ಅಂಗನವಾಡಿ ಕೇಂದ್ರ ನಿರ್ಮಿ ಸುವಂತೆ ಎಸ್‌ಡಿಎಂಸಿ ಸಭೆಯಲ್ಲಿ ನಿರ್ಣಯವಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷರು ಶಾಲೆಯ ಬಳಿಯೇ ನೂತನ ಅಂಗನವಾಡಿ ಕೇಂದ್ರವನ್ನು ಮಾಡಲು ನನ್ನ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ ಎಂದು ಪಂಚಾಯತ್‌ ಸದಸ್ಯ ಲಕ್ಷ್ಮಣ ನಾಯ್ಕ ಹೇಳಿದರು.

ಪಂಚಾಯತ್‌ ಆಡಳಿತ ಮಂಡಳಿ, ಎಸ್‌ಡಿಎಂಸಿ, ಅಂಗನವಾಡಿ ಮೇಲ್ವಿಚಾರಕರು, ಮುಖ್ಯ ಶಿಕ್ಷಕರು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು. ನಿಡ್ಪಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಸೂಕ್ತ ರಸ್ತೆಯ ವ್ಯವಸ್ಥೆಯನ್ನು ಮಾಡುವಂತೆ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದರು.

ಗ್ರಾ.ಪಂ. ಉಪಾಧ್ಯಕ್ಷ ಅವಿನಾಶ್‌ ರೈ, ಸದಸ್ಯ ಲಕ್ಷ್ಮಣ ನಾಯ್ಕ, ಪಶು ಸಂಗೋಪನೆ ಪಾಣಾಜೆ ಕೇಂದ್ರದ ಜಾನುವಾರು ವೈದ್ಯ ಪುಷ್ಪರಾಜ್‌ ಶೆಟ್ಟಿ, ಮೆಸ್ಕಾಂ ಇಲಾಖೆಯ ಬೆಟ್ಟಂಪಾಡಿ ಜೆಇ ಪುತ್ತು, ಅರಣ್ಯ ರಕ್ಷಕ ಮೋಹನ್‌, ಗ್ರಾಮಕರಣಿಕ ಜಂಗಪ್ಪ, ನಿಡ್ಪಳ್ಳಿ ಶಾಲೆಯ ಮುಖ್ಯ ಶಿಕ್ಷಕ ತೋಪಯ್ಯ, ಅಂಗನವಾಡಿ ಮೇಲ್ವಿಚಾರಕಿ ನಾಗರತ್ನಾ, ಪಾಣಾಜೆ ಸಿಎ ಬ್ಯಾಂಕ್‌ನ ಸಿಇಒ ಬಿ. ಲಕ್ಷ್ಮಣ ನಾಯ್ಕ, ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಕುಸುಮಾವತಿ ಎ.ವಿ., ಚೂರಿ ಪದವು ಶಾಲೆ ಮುಖ್ಯ ಶಿಕ್ಷಕಿ ಲಕ್ಷ್ಮೀ ಕೆ., ಅಂಗನವಾಡಿ ಕಾರ್ಯಕರ್ತೆಯರಾದ ಭಾಗೀರಥಿ, ಜಯಂತಿ, ಸುಧಾ, ದೇವಕಿ, ಆಶಾ ಕಾರ್ಯಕರ್ತೆಯರಾದ ದಿವ್ಯಾ ಸಿ.ಎಚ್‌., ಗೀತಾ, ಪಿಡಿಒ ಸಂಧ್ಯಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು. ಸಿಬಂದಿ ವಿನೀತ್‌ ಕುಮಾರ್‌, ಸಂಶೀನಾ, ಜಯಕುಮಾರಿ, ರೇವತಿ ಪಿ. ಸಹಕರಿಸಿದರು.

ಅಧಿಕಾರಿ, ಸದಸ್ಯರ ಗೈರು
ಅಧಿಕಾರಿಗಳು, ಪಂಚಾಯತ್‌ ಸದಸ್ಯರು ಬೆರಳಣಿಕೆಯಲ್ಲಿ ಭಾಗವಹಿಸಿರುವುದು ಕಂಡುಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪಂಚಾಯತ್‌ ಸದಸ್ಯರು ಕಡ್ಡಾಯವಾಗಿ ಭಾಗವಹಿಸುವಂತೆ ಸಭೆ ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next