Advertisement

ಬೆಟ್ಟದ ಜೀವ  ಮತ್ತು ಪುತ್ರಶೋಕ ನಿರಂತರಂ ಎಂಬ ಸತ್ಯ 

01:23 PM Jul 10, 2021 | Team Udayavani |

ನನ್ನ ಹುಟ್ಟುಹಬ್ಬಕ್ಕೆ ಜೂನಿಯರ್‌ಒಬ್ಬಳು ಶಿವರಾಮ ಕಾರಂತರು ಬರೆದ “ಬೆಟ್ಟದ ಜೀವ’ ಪುಸ್ತಕವನ್ನು ಉಡುಗೊರೆಯಾಗಿ ನೀಡಿದಳು. ಆ ಕಾದಂಬರಿ ಆಧರಿತ ಸಿನೆಮಾವನ್ನು ಆಗಲೇ ನೋಡಿದ್ದರಿಂದ ಪುಸ್ತಕವನ್ನು ಅವಸರದಲ್ಲಿ ಓದುವ ಗೋಜಿಗೆ ಹೋಗಲಿಲ್ಲ. ಪುಸ್ತಕ ಸಿಕ್ಕಿದ ಖುಷಿಗೆ ಅವಳಿಗೊಂದು ಧನ್ಯವಾದ ತಿಳಿಸಿ ಸುಮ್ಮನಾಗಿದ್ದೆ.

Advertisement

ಕೆಲ ದಿನಗಳ ಬಳಿಕ ಆ ಪುಸ್ತಕ ಓದಲು ಕುಳಿತವನಿಗೆ ಕಂಡಿದ್ದು ದಟ್ಟ ಕಾನನದ ನಡುವೆ ಗೋಪಾಲ ಭಟ್ಟರ ಸಾಹಸಮಯ ಕಥೆ. ಅಲ್ಲಿಗೆ ದಾರಿತಪ್ಪಿ ಬಂದ ಶಿವರಾಮ ಎಂಬ ಯುವಕ. ಆತ ಭಟ್ಟರ ಯೌವ್ವನದ ದಿನಗಳನ್ನು ಕೆದಕುತ್ತಾ ಹೋದಾಗ ತೆರೆದುಕೊಳ್ಳುವ ಕಲ್ಪನೆಗೂ ಮೀರಿದ ಪ್ರಕೃತಿ ಮತ್ತು ಮನುಷ್ಯನ ನಡುವಿನ ಹೋರಾಟ.

ಕುಮಾರ ಪರ್ವತದ ತಪ್ಪಲಿನಲ್ಲಿ ವಾಸವಿದ್ದ ಗೋಪಾಲ ಭಟ್ಟರು ತಂದೆ-ತಾಯಿಯ ಕಾಲವಾದ ಅನಂತರ ಊರೂರು ಅಲೆದು ಒಂದು ಬಡ ಬ್ರಾಹ್ಮಣ ಮನೆಯ ಹುಡುಗಿಯನ್ನು ಮದುವೆಯಾಗಿ ಕೆಳಬೈಲಿನಲ್ಲಿ ನೆಲೆನಿಂತರು. ಕೆಲವು ಸಮಯದ ಅನಂತರ ಗೋಪಾಲ ಭಟ್ಟ ಮತ್ತು ಶಂಕರಮ್ಮ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಾಯಿತು. ಮಕ್ಕಳ ಬಾಲ್ಯದ ಸಂತೋಷಕ್ಕಾಗಿ, ಸಾಹಸಕ್ಕಾಗಲಿ ಪಾರವೇ ಇರಲಿಲ್ಲ. ಕುಮಾರಪರ್ವತದ ತಪ್ಪಲಿನ ಮೂಲೆಮೂಲೆಗಳಿಗೂ ಅಲೆದಾಡಿ ಕಾಟುಮೂಲೆ ಎಂಬ ಅದ್ಭುತ ತೋಟವನ್ನೂ ಭಟ್ಟರು ಮಾಡುತ್ತಾರೆ.

ಸಂತೋಷದ ಹಿಂದೆ ದುಃಖವೂ ಕಾಯುತ್ತಿರುತ್ತದೆ ಎಂಬಂತೆ ಭಟ್ಟರ ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಉಂಟಾಗುತ್ತವೆ. ಬೆಳೆದು ದೊಡ್ಡವಳಾದ ಮಗಳಿಗೆ ಮದುವೆ ಮಾಡಿದರು. ಆದರೆ ಮೊದಲ ಹೆರಿಗೆಯಲ್ಲೇ ಮಗುವಿನೊಂದಿಗೆ ತಾನೂ ಬಾರದ ಲೋಕಕ್ಕೆ ಹೋಗಿಬಿಡುತ್ತಾಳೆ. ಇತ್ತ ಇದ್ದೊಬ್ಬ ಮಗ ವಿದ್ಯಾಭ್ಯಾಸಕ್ಕಾಗಿ ಪರವೂರಿಗೆ ಹೋದವನು ಬರಲೇ ಇಲ್ಲ. ಹೀಗೆ ಒಂಟಿ ಜೀವನ ಸಾಗಿಸುತ್ತಿದ್ದ ದಂಪತಿ, ನಾರಾಯಣ ಎಂಬ ಹುಡುಗನಿಗೆ ಇರಲು ಜಾಗ ಕೊಟ್ಟು ಅತ್ತೆ ಮಾವಂದಿರ ಸ್ಥಾನದಲ್ಲಿ ನಿಂತು ಮದುವೆ ಮಾಡಿ ಕಾಟುಮೂಲೆಯ ತೋಟವನ್ನು ಅವನಿಗೆ ಕೊಟ್ಟು ನಾರಾಯಣನ ಮಕ್ಕಳ ಪಾಲಿನ ಪ್ರೀತಿಯ ಅಜ್ಜಿ-ತಾತ ಅನಿಸಿಕೊಂಡರೂ ಅವರಿಗೆ ಬಿಟ್ಟುಹೋದ ಮಗನ  ನೆನಪಂತೂ ಕಾಡುತ್ತಲೇ ಇತ್ತು..

ಹೀಗೆ ಶಿವರಾಮನ ಮುಂದೆ ಭಟ್ಟರು ತಮ್ಮ ಜೀವನ ಕಥನವನ್ನು ಬಿಚ್ಚಿಡುತ್ತ ಸಾಗುತ್ತಾರೆ. ಬಿಟ್ಟುಹೋದ ಮಗನ ಬಗ್ಗೆಯೂ ಹೇಳುತ್ತಾರೆ. ಶಿವರಾಮ, ಭಟ್ಟರ ಮನೆಯಲ್ಲಿ ಇದ್ದಷ್ಟು ದಿನ ಗೋಪಾಲ ಭಟ್ಟರು ಅವನನ್ನು ಕರೆದುಕೊಂಡು ಸುತ್ತಮುತ್ತಲಿನ ಕಾಡನ್ನೆಲ್ಲ ಪರಿಚಯಿಸಿದರು. ಆನೆ ಬರುವ ಕಿಂಡಿಯಿಂದ ಹಿಡಿದು ಕಾಟಿ ಮೇಯುವ ಬಯಲಿನವರೆಗೆ ಶಿವರಾಮನಿಗೆ ಭಟ್ಟರು ತೋರಿಸಿದರು. ಅವರ ದನ ತಿನ್ನುತ್ತಿದ್ದ ಹುಲಿಯನ್ನು ಕೊಂದ ಸನ್ನಿವೇಶವಂತೂ ಶಿವರಾಮನ ನಿದ್ದೆಗೆಡಿಸಿತ್ತು. ಶಿವರಾಮ, ಭಟ್ಟರ ಮನೆಯಿಂದ ಹೊರಡುವಾಗ ಅವರ ಮನೆಯ ಊಟ-ಉಪಚಾರವೇನೋ ಇತ್ತು, ಆದರೆ ವೃದ್ಧ ದಂಪತಿಯ ಮಗ ದೂರವಾದ ನೋವು ಕಾಡುತ್ತಲೇ ಇತ್ತು.  ಕಥಾನಾಯಕನಿಗೆ ಭಟ್ಟರ ಮಗನನ್ನು ತಾನು ಎಲ್ಲೋ ಸಂಧಿಸಿದ್ದೇನೆ ಎಂಬ ಅರಿವಾಗುತ್ತದೆ. ಆದರೆ ಕೊನೆಗೂ ವೃದ್ಧ ದಂಪತಿ ಪಯಣ ಮಾತ್ರ ಹಾಗೆಯೇ ಸಾಗುತ್ತದೆ. ಕಾದಂಬರಿಯ ಪಾತ್ರಗಳು ಮನುಷ್ಯತ್ವದ ಮೇಲೆ ಮತ್ತೆ ಪ್ರೀತಿಯನ್ನು ಹುಟ್ಟಿಸುತ್ತದೆ. ಜತೆಗೆ ಬೆಟ್ಟದ ಜೀವನ ನಮ್ಮನ್ನು ಮತ್ತೆ ಮತ್ತೆ ಕಾಡಲಾರಂಭಿಸುತ್ತದೆ.  ಈ ಪುಸ್ತಕದಿಂದ ಹಲವಾರು ಪ್ರಶ್ನೆಗಳು ಕಾಡಿದವು.  ಜತೆಗೆ ಆ ವೃದ್ಧ ದಂಪತಿ ಅನುಭವಿಸುತ್ತಿದ್ದ ನೋವು ಮತ್ತು ಎದುರಿಸುತ್ತಿದ್ದ ನಿತ್ಯ ಸವಾಲುಗಳನ್ನು ಊಹಿಸಲು ಕಷ್ಟವಾಯಿತು. ಓದಿ ಮುಗಿಸಿದಾಗಲಂತೂ ಮನಸ್ಸಿನಲ್ಲಿ ತಳಮಳ ಮತ್ತು ಭಾರವಾದ ಅನುಭವವಾದದ್ದಂತು ಸತ್ಯ.

Advertisement

 

ಸುರೇಶ್‌ ರಾಜ್‌

ಮಂಗಳೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next