ಈ ಹಿಂದೆ ಯೋಗಿ ಹಾಗೂ ರಾಗಿಣಿ ಅಭಿನಯದ “ಬಂಗಾರಿ’ ಚಿತ್ರ ನಿರ್ದೇಶಿಸಿದ್ದ ಮಾ. ಚಂದ್ರು, ಈಗ ಮಕ್ಕಳ ಚಿತ್ರವೊಂದಕ್ಕೆ ಚಾಲನೆ ನೀಡಿದ್ದಾರೆ. ಈ ಹಿಂದೆ “ಶಿವನಪಾದ’ ಚಿತ್ರಕ್ಕೂ ಚಾಲನೆ ಕೊಟ್ಟಿದ್ದ ಮಾ. ಚಂದ್ರು, ಆ ಚಿತ್ರದ ಚಿತ್ರೀಕರಣ ಕೊಂಚ ಬಾಕಿ ಇರುವಂತೆಯೇ, “ಬೆಟ್ಟದ ದಾರಿ’ ಎಂಬ ಮಕ್ಕಳ ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ “ಬೆಟ್ಟದ ದಾರಿ’ ಚಿತ್ರಕ್ಕೆ ಇತ್ತೀಚೆಗೆ ಹಂಸಲೇಖ ಅವರ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ವೀರ್‌ಸಮರ್ಥ್ ಸಂಗೀತ ನಿರ್ದೇಶನದಲ್ಲಿ ವಿಭ ರಚಿಸಿರುವ “ಬೆಳ್ಳಕ್ಕಿ ಸಾಲಂತೆ ಹಾರಾಡೋ ಆಸೆ ಈಗ..’ ಹಾಡನ್ನು ಧ್ವನಿಮುದ್ರಿಸಿಕೊಳ್ಳಲಾಯಿತು.
ಇದು ಹಳ್ಳಿಯೊಂದರ ಅಭಿವೃದ್ಧಿಗೆ ತುಂಟ ಮಕ್ಕಳು ಹೇಗೆ ತಮ್ಮ ಕೊಡುಗೆ ನೀಡುತ್ತಾರೆ ಎಂಬ ಕಥೆ ಹೊಂದಿದೆ. ಈ ಚಿತ್ರದ ಮೂಲಕ ನಶಿಸಿಹೋಗುತ್ತಿರುವ ದೇಸೀ ಕ್ರೀಡೆಗಳಾದ ಕುಂಟೆಬಿಲ್ಲೆ, ಬುಗುರಿಯಾಟ, ಚಿನ್ನು ದಾಂಡುನಂತಹ ಗ್ರಾಮೀಣ ಆಟಗಳನ್ನು ನೆನಪಿಸುವ ಅಂಶಗಳಿವೆ.
ಜನವರಿಯಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಬಿಜಾಪುರ, ಬಸವನಬಾಗೇವಾಡಿ, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ಚಂದ್ರಕಲಾ ಟಿ.ಆರ್ ಮತ್ತು ಮಂಜುನಾಥ ಹೆಚ್. ನಾಯ್ಕ ನಿರ್ಮಾಪಕರು. ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣವಿದೆ. ಅರ್ಜುನ್ (ಕಿಟ್ಟಿ) ಸಂಕಲನ ಮಾಡಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್, ವಿಜಯ್ ಭರಮಸಾಗರ, ಕೆ. ಕಲ್ಯಾಣ್ ಅವರ ಸಾಹಿತ್ಯವಿದೆ.
ಕಂಬಿರಾಜ್, ಮುರಳಿ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಮಾಸ್ಟರ್ ನಿಶಾಂತ್ ಟಿ. ರಾಥೋಡ್, ಲಕ್ಷ್ಮೀಶ್ರಿ, ರಂಗನಾಥ್ ಯಾದವ್, ಅಮೋಘ ನವನಿಧಿ ಸೇರಿದಂತೆ ಇತರರು ನಟಿಸುತ್ತಿದ್ದಾರೆ.