ಕೆಜಿಎಫ್: ತಾಲೂಕಿನ ಬೇತಮಂಗಲ ಕೆರೆ ಕೋಡಿ ಹರಿಯಲು ಕೇವಲ ಒಂದು ಅಡಿ ಮಾತ್ರವೇ ಬಾಕಿ ಇದ್ದು, ಈ ಸಂತಸದ ಕ್ಷಣವನ್ನು ಕಣ್ತುಂಬಿಕೊಳ್ಳಲು ಹೋಬಳಿಯ ಜನರು ಕಾತರದಿಂದ ಕಾಯುತ್ತಿದ್ದಾರೆ.
2017ರಲ್ಲಿ ಕೋಡಿ ಹರಿದಿದ್ದ ಕೆರೆ ಈಗ ಬಹುತೇಕ ಭರ್ತಿಯಾಗಿದೆ. ಶನಿವಾರದವರೆಗೆ ಕೋಡಿ ಹರಿಯಲು ಕೇವಲ ಒಂದು ಅಡಿ ಮಾತ್ರವೇ ಬಾಕಿ ಇತ್ತು. ಈವರೆಗೂ ಒಳ ಹರಿವು ಕಡಿಮೆ ಇದ್ದು ನೀರು ನಿಧಾನವಾಗಿ ಬೇರೆಕೆರೆಗಳಿಂದ ಹರಿದು ಬರುತ್ತಿದೆ. ಆದರೆ, ಶನಿವಾರಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಬಿದ್ದಿರುವುದರಿಂದ ಹಾಗೂ ಹೊಳಲಿ ಕೆರೆ ಕೋಡಿ ಬಿದ್ದಿರುವ ಕಾರಣ, ನೀರು ಹೆಚ್ಚಾಗಿ ಹರಿದು ಯಾವುದೇ ಕ್ಷಣದಲ್ಲಾದರೂ ಕೋಡಿ ಹರಿಯುವ ಸಾಧ್ಯತೆ ಇದೆ. ಇದಕ್ಕಾಗಿ ಜಲಮಂಡಳಿ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.
ನೋಡುವುದೇ ಖುಷಿ: ಬೇತಮಂಗಲ ಕೆರೆ (ಪಾಲಾರ್ ಕೆರೆ) ನೀರು ಹೆಚ್ಚಾದರೆ ಬೇತಮಂಗಲದ ವಿಜಯೇಂದ್ರ ಸ್ವಾಮಿ ದೇವಾಲಯದ ಹಿಂಭಾಗ ದಲ್ಲಿರುವ ಕಾಲುವೆಯಲ್ಲಿ ಹರಿದುಹೋಗುತ್ತದೆ. ಮತ್ತೂಂದೆಡೆ ಕೋಡಿಹಳ್ಳಿಯಲ್ಲಿರುವ ಕೋಡಿಯ ನೀರು ಹರಿದುಹೋಗುತ್ತದೆ. ಈ ಸ್ಥಳ ಅತ್ಯಂತ ಪ್ರೇಕ್ಷಣೀಯವಾಗಿದ್ದು, ಕೆರೆಯಲ್ಲಿ ನೀರು ತುಂಬಿದರೆ ನೋಡುವುದೇ ಒಂದು ಸೊಬಗು, ಇದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಕೋಡಿ ನೀರು ಬಂಡೆಕಲ್ಲುಗಳ ಮೇಲೆ ಹರಿದು ಹೋಗುವುದು ನೋಡಲು ರಮಣೀಯವಾಗಿರುತ್ತದೆ.
ಕೆರೆ ನೋಡಲು ಜನ ಸಾಗರ: 2017ರಲ್ಲಿ ಕೆರೆ ತುಂಬಿದಾಗ ಪ್ರತಿನಿತ್ಯ ಸಾವಿರಾರು ಮಂದಿ ಕುಟುಂಬ ಸಮೇತರಾಗಿ ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದರು. ಕೋಡಿಹಳ್ಳಿಯ ಸಣ್ಣ ರಸ್ತೆ ವಾಹನಗಳಿಂದ ತುಂಬಿ ಹೋಗಿತ್ತು. ಕಿ.ಮೀ. ಗಟ್ಟಲೆ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಈಗ ಕೆರೆ ಕೋಡಿ ಹೋಗುವ ಸನ್ನಿವೇಶ ಉದ್ಭವವಾಗಿರುವುದರಿಂದ ಕೋಡಿಹಳ್ಳಿಗೆ ಜನಸಾಗರ ಹರಿದುಬರುವ ನಿರೀಕ್ಷೆ ಇದೆ.
ಸುಗಮ ರಸ್ತೆ ಅಗತ್ಯ: ಶನಿವಾರದಂದೇ ನೂರಾರು ಜನ ಕೋಡಿ ಹರಿಯುವುದಕ್ಕೆ ಇನ್ನು ಎಷ್ಟು ನೀರು ಬರಬೇಕು ಎಂದು ತವಕದಿಂದ ಬಂದು ನೋಡುತ್ತಿದ್ದರು. ಆದರೆ, ಈ ಗ್ರಾಮ ಸೇರುವ ಹುಲ್ಕೂರು ಗ್ರಾಪಂನವರು ಇನ್ನೂ ರಸ್ತೆ ದುರಸ್ತಿ ಮಾಡಿಲ್ಲ. ಸಾವಿರಾರು ಜನ ಮತ್ತು ನೂರಾರು ಸಂಖ್ಯೆಯ ವಾಹನಗಳು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಟ್ಟಿಲ್ಲ. ಕಳೆದ ಬಾರಿ ಗ್ರಾಪಂನಿಂದ ಕೋಡಿವರೆಗೂ ಕಾಂಕ್ರೀಟ್ ಹಾಕಲಾಗಿತ್ತು. ಇನ್ನೂ ಸ್ವಲ್ಪ ಕಾಮಗಾರಿ ಬಾಕಿ ಇತ್ತು ಎಂದು ಹುಲ್ಕೂರು ಗ್ರಾಪಂ ಮಾಜಿ ಅಧ್ಯಕ್ಷ ಪ್ರಸನ್ನ ಹೇಳುತ್ತಾರೆ. ಕೆರೆ ಕೋಡಿ ನೀರು ನೋಡಲು ಬರುವವರುತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಕಳೆದ ಬಾರಿ ಇಡೀ ಪ್ರದೇಶ ತ್ಯಾಜ್ಯಮಯ ವಾಗಿತ್ತು. ಈ ಬಾರಿ ಪಂಚಾಯ್ತಿ ಅಧಿಕಾರಿಗಳು ಎಚ್ಚರವಹಿಸ ಬೇಕೆಂದು ಪರಿಸರವಾದಿಗಳು ಹೇಳುತ್ತಾರೆ.
-ಬಿ.ಆರ್.ಗೋಪಿನಾಥ್