ಬೇತಮಂಗಲ: ಕೆರೆ ಒತ್ತುವರಿ ತೆರವು ಕೈಬಿಟ್ಟಿದ್ದಕ್ಕೆ ಹೋಬಳಿಯ ಬ್ಯಾಟರಾಯನಹಳ್ಳಿ, ಬೊಮ್ಮಾಂಡಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬೇತಮಂಗಲ-ಕ್ಯಾಸಂಬಳ್ಳಿ ಮುಖ್ಯ ರಸ್ತೆಯಲ್ಲಿರುವ 60 ಎಕರೆ ಪ್ರದೇಶದ ಈ ಕೆರೆಯನ್ನು ಸುತ್ತಮುತ್ತಲಿನ ರೈತರು ಒತ್ತುವರಿ ಮಾಡಿಕೊಂಡಿದ್ದು, ಸ.ನಂ.21ರಲ್ಲಿ 25 ಎಕರೆ ಮತ್ತು ಸ.ನಂ.97ರಲ್ಲಿ 31 ಎಕರೆ ಪ್ರದೇಶವನ್ನು ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸುವಂತೆ 2 ತಿಂಗಳ ಹಿಂದೆ ಮನವಿ ಮಾಡಲಾಗಿತ್ತು ಎಂದು ಗ್ರಾಮಸ್ಥರು ಹೇಳಿದರು.
ಆದರೆ, ಸರ್ವೆ ನಂಬರ್ 97 ಅನ್ನು ಸರ್ವೆ ನಡೆಸದೆ ಕೈ ಬಿಟ್ಟಿದ್ದಾರೆ. ಈ ಬಗ್ಗೆ ಕಂದಾಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ತಹಶೀಲ್ದಾರ್ ಮೂಲಕ ಸರ್ವೆ ನಂಬರ್ 21 ಮಾತ್ರ ತೆರವುಗೊಳಿಸಲು ಆದೇಶ ಬಂದಿದೆ. ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರಲಾಗುತ್ತದೆ. ತಾವು ಸಹ ಈ ಬಗ್ಗೆ ಕೇಳಿ ಎನ್ನುತ್ತಾರೆ ಎಂದರು.
ಕೆರೆಯ ಒತ್ತುವರಿ ತೆರವುಗೊಳಿಸುವಾಗ ಸಂಪೂರ್ಣ ಕೆರೆ ಸರ್ವೆ ಮಾಡದೆ ಕೇವಲ ಸ.ನಂ 21 ಮಾತ್ರ ತೆರವುಗೊಳಿಸಿದ್ದು, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೂಡಲೇ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಇತ್ಯರ್ಥ ಪಡಿಸಬೇಕೆಂದು ಆಗ್ರಹಿಸಿದರು.
ಶುಕ್ರವಾರ ಇನ್ನುಳಿದ ಸ.ನಂ 97ನ್ನು ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಕೆರೆಯ ಸುತ್ತಮುತ್ತಲಿನ ರೈತರೆಲ್ಲರಿಗೂ ಒಂದೇ ನ್ಯಾಯ ಕಲ್ಪಿಸಬೇಕು. ಕೆಲವು ರಾಜಕೀಯ ಕಾರಣ ಗಳಿಂದ ಕೆಲವರು ಸರ್ವೆ ನಂಬರ್ ತೋರಿಸಿ ಸಂಪೂರ್ಣ ಕೆರೆ ಒತ್ತುವರಿ ತೆರವಿಗೆ ಶ್ರಮಿಸದೆ ಅಧಿಕಾರಿಗಳನ್ನು ದಾರಿತಪ್ಪಿಸುವ ಹುನ್ನಾರ ಮಾಡಿದ್ದಾರೆ ಎನ್ನಲಾಗಿದೆ.