ಧಾರವಾಡ : ಎಪಿಎಂಸಿ ವ್ಯಾಪ್ತಿಯ ಮಾಳಾಪೂರ ಶಹರ ಜಾನುವಾರುಗಳ ಮಾರುಕಟ್ಟೆ ಪ್ರಾಂಗಣ ನಿರ್ಮಾಣಗೊಂಡು ಬರೋಬ್ಬರಿ ಎರಡು ವರ್ಷಗಳೇ ಗತಿಸಿದರೂ ಉದ್ಘಾಟನೆ ಕಾಣದ ಮೂರು ಮುಚ್ಚು ಹರಾಜು ಕಟ್ಟೆಗಳು ಇದೀಗ ಅನೈತಿಕ ಚಟುವಟಿಕೆಗಳಿಗೆ ಮುಕ್ತವಾಗಿವೆ ಎನ್ನುವಂತಾಗಿದೆ.
ಹೌದು. ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿಯೇ ಹೋಲ್‌ಸೇಲ್ ಎಲೆ ವ್ಯಾಪಾರಕ್ಕಾಗಿಯೇ 2017-18ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅಂದಾಜು 55 ಲಕ್ಷ ರೂ.
ಗಳಲ್ಲಿ ಮೂರು ಮುಚ್ಚು ಹರಾಜು ಕಟ್ಟೆ ನಿರ್ಮಿಸಲಾಗಿದೆ. ಈಗ ಹಳೇ ಎಪಿಎಂಸಿಯಲ್ಲಿ ನಡೆಯುತ್ತಿರುವ ಹೋಲ್ ಸೇಲ್ ಎಲೆ ವ್ಯಾಪಾರ ಮಾರುಕಟ್ಟೆ ಈ ಕಟ್ಟೆಗೆ ಸ್ಥಳಾಂತರ ಆಗಬೇಕಿದೆ. ಆದರೆ ಈ ಹರಾಜು ಕಟ್ಟೆಗಳು ಉದ್ಘಾಟನೆ ಕಾಣದೆ ಇರುವುದು, ಎಪಿಎಂಸಿಯ ಇಚ್ಛಾಶಕ್ತಿಯ ಕೊರತೆ ವೀಳ್ಯದೆಲೆ ಮಾರುಕಟ್ಟೆ ಸ್ಥಳಾಂತರಕ್ಕೆ ವಿಳಂಬವಾಗಿದೆ.
ಸ್ಥಳಾಂತರಕ್ಕಿಲ್ಲ ಇಚ್ಚಾಶಕ್ತಿ : ನೆಹರೂ ಮಾರುಕಟ್ಟೆಯಲ್ಲಿದ್ದ ಹೋಲ್‌ಸೇಲ್ ಕಾಯಿಪಲ್ಲೆ ಮಾರುಕಟ್ಟೆ ಹೊಸ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ತೋರಿದ ಇಚ್ಛಾಶಕ್ತಿ ಈಗಿನ ಎಪಿಎಂಸಿ ಆಡಳಿತ ಮಂಡಳಿಗಿಲ್ಲ. ಈ ಹಿನ್ನೆಲೆಯಲ್ಲಿ ಹಳೇ ಎಪಿಎಂಸಿ ಆವರಣದಲ್ಲಿ ನಡೆದಿರುವ ಹೋಲ್‌ಸೇಲ್ ವೀಳ್ಯದೆಲೆ ಮಾರುಕಟ್ಟೆ ಸ್ಥಳಾಂತರ ಆಗುತ್ತಿಲ್ಲ. ಧಾರವಾಡ ಎಪಿಎಂಸಿ ಆಡಳಿತ ಮಂಡಳಿ ಇಚ್ಛಾಶಕ್ತಿ ಕೊರತೆ ಹಾಗೂ ನಿರ್ಲಕ್ಷದಿಂದ ಈ ಸ್ಥಳಾಂತರ ಕೆಲಸವಾಗದೇ ಆ ಕಟ್ಟೆಗಳ ಉದ್ಘಾಟನೆಯೂ ಕಾಣದಂತಾಗಿದೆ. ಇದಲ್ಲದೇ ಹಳೇ ಎಪಿಎಂಸಿ ಆವರಣದಲ್ಲಿಯೇ ಸಾಗಿರುವ ವೀಳದ್ಯೆಲೆ ಮಾರುಕಟ್ಟೆ ಮೂಲಸೌಕರ್ಯಗಳ ಕೊರತೆಗಳಿಲ್ಲದೇ ಸೊರಗುವಂತಾಗಿದೆ.
ಅನೈತಿಕ ತಾಣವಾದ ಕಟ್ಟೆಗಳು: ಈ ಪ್ರಾಂಗಣದಲ್ಲಿಯೇ ಇರುವ ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರ ಕಚೇರಿ ಹಿಂಬದಿಯೇ ಈ ಹರಾಜು ಕಟ್ಟೆಗಳಿವೆ. ಧಾರವಾಡ ಎಪಿಎಂಸಿ ಆಡಳಿತ ಮಂಡಳಿ ನಿರ್ಲಕ್ಷéದಿಂದ ಅಧಿಕೃತ ಉದ್ಘಾಟನೆ ಕಾಣದ ಕಾರಣ ಈ ಕಟ್ಟೆಗಳು ಅನೈತಿಕ ಚಟುವಟಿಕೆಗಳ ತಾಣದ ಕಟ್ಟೆಗಳಾಗಿ ಮಾರ್ಪಟ್ಟಿವೆ. ಹೀಗಾಗಿ ಮದ್ಯದ ಬಾಟಲಿ ರಾರಾಜಿಸುತ್ತಿದ್ದು, ಪ್ರತಿದಿನ ರಾತ್ರಿ ಎಣ್ಣೆ ಪಾರ್ಟಿಗಳು ನಡೆಯುತ್ತಿರುವುದಕ್ಕೆ ಪುಷ್ಟಿ ನೀಡುತ್ತಿವೆ. ಈ ಕಟ್ಟೆಗಳ ಆವರಣದಲ್ಲಿ ಅಷ್ಟೇ ಅಲ್ಲ ಜಾನುವಾರು ಮಾರುಕಟ್ಟೆಯೂ ಅನೈತಿಕ
ಚಟುವಟಿಕೆಯ ತಾಣವಾಗಿದೆ. ಈ ಮಾಳಾಪೂರ ಶಹರ ಜಾನುವಾರುಗಳ ಮಾರುಕಟ್ಟೆ 11 ಎಕರೆ 23 ಗುಂಟೆ ಜಾಗ ಹೊಂದಿದ್ದು, ಈಗಾಗಲೇ 2 ಎಕರೆಯಲ್ಲಿ ಅಗ್ನಿಶಾಮಕದಳ ಕಚೇರಿ ಇದ್ದು, ಒಟ್ಟು ಈ ಜಾಗಕ್ಕೆ ಕಟ್ಟಿರುವ ಕಾಂಪೌಂಡ್ ಒಂದೆರಡು ಕಡೆ ಹೊಡೆದು ಹೋಗಿದೆ. ಹೀಗಾಗಿ ರಾತ್ರಿ ಅಕ್ರಮ ಚಟುವಟಿಕೆಗಳಿಗೆ ತಾಣ ಆಗುತ್ತಿದ್ದು, ಹಗಲು-ರಾತ್ರಿಯ ಬೇಧವಿಲ್ಲದೇ ಎಣ್ಣೆ ಪಾರ್ಟಿ ಸೇರಿದಂತೆ ನೈತಿಕ ಚಟುವಟಿಕೆಗಳಿಗೆ ಸೂಕ್ತ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಪ್ರಾಂಗಣದಲ್ಲಿ ಸಾರಾಯಿ ಬಾಟಲಿಗಳು ರಾರಾಜಿಸುವಂತಾಗಿದೆ.
ಸೊರಗುತ್ತಿದೆ ಜಾನುವಾರು ಸಂತೆ: ಈ ಮಾರುಕಟ್ಟೆಯಲ್ಲಿ ದನಗಳನ್ನು ಕಟ್ಟಲು ಕಲ್ಲು ಹೂತಿದ್ದು, ಒಂದಿಷ್ಟು ಕಡೆ ಕಲ್ಲುಗಳೇ ಇಲ್ಲದ ಕಾರಣ ರೈತರೇ ತಾವೇ ಕಲ್ಲು ತಂದಿಟ್ಟು ದನಗಳನ್ನು ಕಟ್ಟುವ ಪರಿಸ್ಥಿತಿ ಇದೆ. ಇಲ್ಲಿ ರೈತರ ದಾಹ ನೀಗಿಸಲು ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಜಾನುವಾರುಗಳ ನೀರಿನ ದಾಹ ನೀಗಿಸಲು ಕಟ್ಟಿರುವ ತೊಟ್ಟಿಗಳಲ್ಲಿ ಮಳೆಯ ನೀರೇ ನಿಂತು ಗಬ್ಬೇದು ನಾರುತ್ತಿದ್ದು, ಇದರ ಮಧ್ಯೆ ಮದ್ಯದ ಪಾಕೇಟ್, ಬಾಟಲಿಗಳು ತೊಟ್ಟಿಯಲ್ಲಿ ರಾರಾಜಿಸುತ್ತಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಶುಚಿತ್ವದ ಕೊರತೆ ಎದ್ದು ಕಾಣುತ್ತಿದ್ದು, ಈ ಮಾರುಕಟ್ಟೆಯ ನಿರ್ವಹಣೆ ಮಾಡಬೇಕಾದ ಎಪಿಎಂಸಿಯ ನಿರ್ಲಕ್ಷದಿಂದ ಮಾರುಕಟ್ಟೆ ದಿನದಿಂದ ಸೊರಗುತ್ತ ಸಾಗಿದೆ.
– ಶಶಿಧರ್ ಬುದ್ನಿ