Advertisement

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

01:55 AM Mar 24, 2022 | Team Udayavani |

ಮಂಗಳೂರು/ಉಡುಪಿ: ಹವಾಮಾನ ಇಲಾಖೆಯಿಂದ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗ ಗಳಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

Advertisement

ಉಡುಪಿ, ಮಣಿಪಾಲ ಸೇರಿದಂತೆ ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲೂ ಮಳೆಯ ಸಿಂಚನವಾಗಿದೆ.

ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನ ತಾಲೂಕಿನ ವಿವಿಧೆಡೆ ಭಾರೀ ಮಳೆ ಬಂದಿದೆ. ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳ ವಿವಿಧ ಭಾಗಗಳಲ್ಲೂ ಮಳೆಯ ಸಿಂಚನವಾಗಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಬುಧವಾರ ವಿಪರೀತ ಸೆಕೆ ಇತ್ತು. ದಿನದ ಉಷ್ಣಾಂಶವು ಕನಿಷ್ಠ 26 ಡಿಗ್ರಿ ಸೆಲ್ಸಿಯಸ್‌ ಮತ್ತು ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಕನಿಷ್ಠ ಉಷ್ಣಾಂಶವು ವಾಡಿಕೆಗಿಂತ 1 ಡಿಗ್ರಿ ಜಾಸ್ತಿ ಇತ್ತು.

ಬೆಳ್ತಂಗಡಿ: ಉತ್ತಮ ಮಳೆ
ಬೆಳ್ತಂಗಡಿ: ತಾಲೂಕಿನ ಬಹುತೇಕ ಕಡೆಗಳಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದೆ. ಸಂಜೆ 5.40ರ ಬಳಿಕ ಗುಡುಗು, ಮಿಂಚು ಸಹಿತ ಅರ್ಧ ತಾಸು ಭಾರಿ ಮಳೆಯಾಗಿದೆ. ರಸ್ತೆ, ಚರಂಡಿಗಳಲ್ಲಿ ಮಳೆಗಾಲದಂತೆ ನೀರು ಹರಿದಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ಇಳೆ ತಂಪಾಗಿದೆ. ವಾರದಲ್ಲಿ 3 ದಿನ ಸಂಜೆ ಮಳೆ ಸುರಿದ ಕಾರಣ
ತೋಟಗಳ ನೀರಿನ ಸಮಸ್ಯೆ ಕೆಲವು ದಿನಗಳ ಮಟ್ಟಿಗೆ ದೂರವಾಗಿದೆ. ನದಿಗಳ ಹರಿವಿನಲ್ಲಿ ಕೊಂಚ ಏರಿಕೆಯಾ ಗಿದೆ. ಬೆಳ್ತಂಗಡಿ, ಧರ್ಮಸ್ಥಳ, ಬೆಳಾಲು, ಉಜಿರೆ, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ, ಮಡಂತ್ಯಾರು, ವೇಣೂರು, ನಾರಾವಿ, ಕಲ್ಮಂಜ ಮೊದಲಾದೆಡೆ ಭಾರೀ ಮಳೆಯಾಗಿದೆ. ಕೆಲವೆಡೆ ಕೃಷಿಕರು ಒಣಗಲು ಹಾಕಿದ್ದ ಅಡಿಕೆ ಮಳೆಗೆ ಒದ್ದೆಯಾಗಿದೆ.

ಇದನ್ನೂ ಓದಿ:ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನ: ಸಿಎಂ ಬೊಮ್ಮಾಯಿ

Advertisement

ಸಿಡಿಲು: ಮನೆಗೆ ಹಾನಿ
ಬಜಪೆ: ಎಕ್ಕಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಮಿಂಚು ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ತೆಂಕ ಎಕ್ಕಾರು ಗ್ರಾಮದ ಜಗನ್ನಾಥ ಪೂಜಾರಿ ಅಲಿಯಾಸ್‌ ಸಂತೋಷ್‌ ಅವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿದೆ.

ಮೋಟರ್‌ನ ಸ್ವಿಚ್‌ ಬೋರ್ಡ್‌ಗೆ ಬೆಂಕಿ ಹತ್ತಿ ಇಡೀ ಮನೆಯ ವಿದ್ಯುತ್‌ ವಯರಿಂಗ್‌ ಸುಟ್ಟು ಹೋಗಿದೆ. ಗೋಡೆ ಸುಟ್ಟು ಕರಕಲಾಗಿದೆ. ಮನೆ ಪೂರ್ತಿ ಹೊಗೆ ತುಂಬಿಕೊಂಡಿತ್ತು. ಎಲ್ಲ ಎಲೆಕ್ಟ್ರಾನಿಕ್‌ ಮತ್ತು ಎಲೆಕ್ಟ್ರಿಕಲ್‌ ಸಾಮಗ್ರಿಗಳು ಹಾನಿಗೀಡಾಗಿವೆ. ಸಮೀಪ ಎರಡು ಮನೆಗಳಿಗೂ ಹಾನಿಯಾಗಿದೆ.

ಯಲ್ಲೋ ಅಲರ್ಟ್‌ ಮುಂದುವರಿಕೆ
ಕರಾವಳಿಯಲ್ಲಿ ಯಲ್ಲೋ ಅಲರ್ಟ್‌ ಮುಂದುವರಿದಿದ್ದು, ಮಾ. 24ರಂದೂ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next