Advertisement

ನನ್ನ ಜೀವನದ ಅತ್ಯುತ್ತಮ ಸಾಧನೆ: ಕೊಹ್ಲಿ

12:30 AM Jan 08, 2019 | Team Udayavani |

ಸಿಡ್ನಿ: ಮೊದಲ ಬಾರಿಗೆ ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, “ಇದು ತನ್ನ ಜೀವನದ ಅತ್ಯುತ್ತಮ ಸಾಧನೆ; ಈ ಜಯ 2011ರ ವಿಶ್ವಕಪ್‌ಗಿಂತಲೂ ಮಿಗಿಲಾದುದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Advertisement

“ಇಂದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದೆ. 2011ರ ವಿಶ್ವಕಪ್‌ ಸಂದರ್ಭದಲ್ಲಿ ನಾನು ತಂಡದಲ್ಲಿದ್ದೆ. 28 ವರ್ಷಗಳ ಬಳಿಕ ವಿಶ್ವಕಪ್‌ ಗೆದ್ದ ಭಾವುಕತೆ ತಂಡದ ಉಳಿದೆಲ್ಲ ಹಿರಿಯ ಆಟಗಾರರಲ್ಲಿ ಇತ್ತು. ಆದರೆ ಆ ಭಾವುಕತೆ ನನ್ನಲ್ಲಿರಲಿಲ್ಲ. ವೈಯಕ್ತಿಕವಾಗಿ ಈ ಸರಣಿ ಜಯ ನನ್ನ ವೃತ್ತಿಜೀವನದ ಅತ್ಯುತ್ತಮ ಸಾಧನೆ. ಆಸ್ಟ್ರೇಲಿಯ ನೆಲದಲ್ಲಿ ದೊರೆತ ಸರಣಿ ಗೆಲುವು ವಿಶ್ವಕಪ್‌ ಗೆದ್ದ ಖುಷಿಗಿಂತಲೂ ದೊಡ್ಡದು. ಒಂದು ವೇಳೆ ಯಾವ ಕ್ಷಣ ಹೆಚ್ಚು ಭಾವನಾತ್ಮಕ‌ವಾಗಿದೆ ಎಂದು ಪ್ರಶ್ನಿಸಿದರೆ, ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿ ಗೆದ್ದ ಕ್ಷಣ ಎಂದು ಉತ್ತರಿಸುತ್ತೇನೆ. ಏಕೆಂದರೆ ಇಲ್ಲಿಗೆ ನಾನು 3 ಬಾರಿ ಪ್ರವಾಸ ಕೈಗೊಂಡಿದ್ದೇನೆ. ಈ ನೆಲದಲ್ಲಿ ಜಯಿಸುವುದು ಎಷ್ಟು ಕಷ್ಟ ಎಂಬುದನ್ನು ನನ್ನ ಅನುಭವದಿಂದ ಅರಿತುಕೊಂಡಿದ್ದೇನೆ. ಹೀಗಾಗಿ ಆಸ್ಟ್ರೇಲಿಯದಲ್ಲಿ ಸರಣಿ ಗೆದ್ದಿರುವುದು ಹೆಚ್ಚು ಭಾವನಾತ್ಮಕ ಕ್ಷಣ’ ಎಂದು ಕೊಹ್ಲಿ ತಮ್ಮ ಖುಷಿಯನ್ನು ಹಂಚಿಕೊಂಡರು.

“ಈ ಸರಣಿ ಗೆಲುವಿಗೆ ಒಬ್ಬರ ಕೊಡುಗೆಯ ಬಗ್ಗೆ ಕೇಳಿದರೆ ನನ್ನ ಉತ್ತರ ಹನುಮ ವಿಹಾರಿ. ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ನ‌ಲ್ಲಿ ಹೊಸ ಚೆಂಡಿನ 70 ಎಸೆತಗಳನ್ನು ಎದುರಿಸುವುದು ಅಷ್ಟು ಸುಲಭದ ವಿಚಾರವಲ್ಲ. ಅದು ಶತಕ ಅಥವಾ 70-80 ರನ್‌ ಗಳಿಸುವುದಕ್ಕೆ ಸಮ’ಎಂದರು.

“ಖಂಡಿತವಾಗಿಯೂ ಇದು ವಿಶೇಷ ದಿನ. ವಿದೇಶಿ ನೆಲಗಳಲ್ಲಿ ಒಂದು ಪಂದ್ಯ ಗೆಲ್ಲುವುದಕ್ಕಿಂತ ಸರಣಿ ಗೆಲ್ಲುವುದು ಅಗತ್ಯವಿತ್ತು. ಹೀಗಾಗಿ ನಮ್ಮ ಕಾರ್ಯಯೋಜನೆಯಂತೆ ಆಡಿ ಸರಣಿಯನ್ನು ಜಯಿಸಿದ್ದೇವೆ. ತಂಡವಾಗಿ ಈಗ ನಾವು ಪರಿಪೂರ್ಣರಾಗಿದ್ದೇವೆ. ಇದಕ್ಕಾಗಿ ನಮ್ಮೆಲ್ಲರಿಗೂ ಇದು ಅತ್ಯಂತ ವಿಶೇಷ ಸಂದರ್ಭವಾಗಿದೆ’ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next