2020 ಅಂದುಕೊಂಡಾಗ ನೆನಪಿಗೆ ಬರುವುದು ಕೋವಿಡ್ ಅದರ ಜತೆಗೆ ಬಳುವಳಿ ಆಗಿ ಬಂದ ಸುದೀರ್ಘ ಲಾಕ್ ಡೌನ್ ಮತ್ತು ಬಂಧನದಿಂದ ಮುಕ್ತವಾಗಲು ಹಾತೊರೆಯುತ್ತಿದ್ದ ನಮ್ಮ ನಿಮ್ಮ ಗೊಂದಲ-ಗದ್ದಲದ ಮನಸ್ಥಿತಿ ಹಾಗೂ ಪರಿಸ್ಥಿತಿ. ಎಲ್ಲಾ ಕ್ಷೇತ್ರದ ಮೇಲೂ ಕರಿಛಾಯೆ ಬೀರಿದ ಲಾಕ್ ಡೌನ್ ಮನರಂಜನೆಯ ಖುಷಿಯನ್ನು ಕಸಿದುಕೊಂಡು ಬಿಟ್ಟಿತ್ತು. ಈ ನಡುವೆ ಮನರಂಜನೆಯ ಕ್ಷೇತ್ರ ಓಟಿಟಿಯಂಥ ಆನ್ಲೈನ್ ತಾಣದಲ್ಲಿ ಸಕ್ರಿಯಾವಾಗಿ ಇಲ್ಲದಿರುತ್ತಿದ್ದರೆ, ಖಂಡಿತ ನಾವು ನೀವೂ ಪಂಜರದೊಳಗಿನ ಗಿಳಿಯ ಮೌನಕ್ಕೆ ಜಾರಿ ಬಿಡುತ್ತಿದ್ದೇವೇನೋ..?
ಓಟಿಟಿ ಪ್ಲ್ಯಾಟ್ ಫಾರ್ಮ್ ಲಾಕ್ ಡೌನ್ ಅವಧಿಯಲ್ಲಿ ಅತೀ ಹೆಚ್ಚು ಜನಮನಕ್ಕೆ ಮನರಂಜನೆಯ ಆಧಾರದಲ್ಲಿ ಆಯ್ಕೆ ಆದದ್ದು ಸುಳ್ಳಲ್ಲ. ಸಿನಿಮಾ, ವೆಬ್ ಸರಣಿ, ಹೀಗೆ ಓಟಿಟಿಯ ನಿತ್ಯ ನೂತನದ ಕಾನ್ಸೆಪ್ಟ್ ಗಳ ಮೂಲಕ ಮನರಂಜನೆಯನ್ನು ಹುಡುಕಲು ಪರದಾಡುತ್ತಿದ್ದ ಸಿನಿ ಪ್ರಿಯರಿಗೆ ಉತ್ತಮ ಕಂಟೇಟ್ ಗಳ ಬೋಜನವನ್ನು ಉಣಬಡಿಸಿದ್ದು ನಿಜ.
2020 ರಲ್ಲಿ ಥಿಯೇಟರ್ ಗಳು ಹೆಚ್ಚು ತೆರೆಯದೆ ಇದ್ರು, ಓಟಿಟಿ ಮೂಲಕ ಮನರಂಜನೆ ಜನರಿಗೆ ತಲುಪಿದೆ. ಬಾಲಿವುಡ್ ನಲ್ಲಿ ಈ ಸಲಿ ಓಟಿಟಿಯಲ್ಲೇ ಬಿಡುಗಡೆಯಾಗಿ ಸದ್ದು ಮಾಡಿದ ಕೆಲ ಸಿನಿಮಾಗಳ ಪಟ್ಟಿ ಇಲ್ಲಿವೆ.
ಲೂಡೋ : 2020 ರಲ್ಲಿ ನೆಟ್ ಪ್ಲೆಕ್ಸ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದ ಸಿನಿಮಾದಲ್ಲಿ ಲೂಡೋ ಸಿನಿಮಾವೂ ಒಂದು. ಜೀವನ ಒಂದು ಲೂಡೋ ಆಟದ ಹಾಗೆ. ಇಲ್ಲಿ ನಮ್ಮ ನಿಮ್ಮ ಹಾಗೆಯೇ ಬದುಕಿನ ಸವಾಲು-ಸಮಸ್ಯೆಗಳ ದಾರಿಯಲ್ಲಿ ಸಾಗುವ ಲಕ್ಷಾಂತರ ಮಂದಿ ಸಿಗುತ್ತಾರೆ. ಎಲ್ಲರ ಅಂತ್ಯ- ಆರಂಭ ಬೇರೆಯಷ್ಟೇ. ಇದನ್ನು ನಿರ್ದೇಶಕ ಅನುರಾಗ್ ಬಸು ನಾಲ್ಕು ಪಾತ್ರಗಳ ಮೂಲಕ ಭಿನ್ನವಾಗಿ ತೆರೆಯಮೇಲೆ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಗಮನ ಸೆಳೆಯೋದು ಅಭಿಷೇಕ್ ಬಚ್ಚನ್ ರ ‘ಬಿಟ್ಟು’ ಪಾತ್ರ. ಪಂಕಜ್ ತ್ರಿಪಾಠಿ, ರಾಜ್ ಕುಮಾರ್ ರಾವ್ಎ ಲ್ಲಾ ಪಾತ್ರವೂ ಭಿನ್ನ. ಸ್ಕ್ರೀನ್ ಪ್ಲೇ ವಿಭಿನ್ನ.!
ದಿಲ್ ಬೇಚಾರ : ಈ ಸಿನಿಮಾವನ್ನು ನೋಡಲು ಇರುವ ಏಕೈಕ ಕಾರಣ ಅದು ಸುಶಾಂತ್ ಸಿಂಗ್ ರಜಪೂತ್. ಈ ವರ್ಷ ಬಿಡುಗಡೆಯಾದ ಚಿತ್ರದಲ್ಲಿ ಮನಸ್ಸಿಗೆ ತಟ್ಟಿ, ಕಣ್ಣುಗಳು ತೇವಗೊಳಿಸಿ,ಪ್ರೇಮದ ಪಯಣವನ್ನು ನೆನಪಿಸುವ ಚಿತ್ರದಲ್ಲಿ ‘ದಿಲ್ ಬೇಚಾರ’ ಚಿತ್ರವೂ ಒಂದು. ಈ ಚಿತ್ರ ಜಾನ್ ಗ್ರೀನ್ ಹೌಸ್ ‘The Fault in Our Stars’ ಕಾದಂಬರಿಯ ಮೇಲೆ ಆಧಾರಿತವಾಗಿದೆ. ನಿರ್ದೇಶಕ ಮುಖೇಶ್ ಚಬ್ರಾ ಈ ಚಿತ್ರವನ್ನು ಉಚಿತವಾಗಿ ನೋಡಲು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದ್ದಷ್ಟು ದಿನ ಪ್ರೀತಿಸಿ, ಬದುಕು ನಿನ್ನೆ ಹುಟ್ಟಿ ನಾಳೆ ಸಾಯುವ ಕ್ಷಣಿಕ ಭರವಸೆಯ ಅಕ್ಷಯ ಪಾತ್ರೆ.! ಎರಡು ಹೃಯಯದ ಪ್ರೇಮ ಪಯಣದ ಕಥೆ ಈ ದಿಲ್ ಬೇಚಾರ. ಸಿನಿಮಾದಲ್ಲಿ ಕೆಲವೊಂದು ಕ್ಷಣಗಳು ಭಾವುಕತೆಯನ್ನು ಉಕ್ಕುವಂತೆ ಮಾಡುತ್ತವೆ. 2020 ರಲ್ಲಿ ಅತೀ ಹೆಚ್ಚು ಜನ ಗೂಗಲ್ ನಲ್ಲಿ ಹುಡುಕಾಡಿದ ಚಿತ್ರ ಇದು. ಚಿತ್ರವನ್ನು ಡಿಸ್ನಿ ಪ್ಲೆಸ್ ಹಾಟ್ ಸ್ಟಾರ್ ನಲ್ಲಿ ನೋಡಬಹುದು.
ಗುಲಾಬೋ ಸಿತಾಬೋ : ಎಲ್ಲವೂ ಲಾಕ್ ಡೌನ್ ನಲ್ಲಿರುವಾಗ ಬಾಲಿವುಡ್ ನಲ್ಲಿ ಧೈರ್ಯವಾಗಿ ಓಟಿಟಿ ವೇದಿಕೆಯಲ್ಲಿ ನೇರವಾಗಿ ಬಿಡುಗಡೆಗೊಂಡ ಮೊದಲ ಚಿತ್ರ ಗುಲಾಬ್ ಸಿತಾಬೋ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿವೆ. ಒಂದು ಹಿರಿಯ ಜೀವ, ಅವರ ಹಳೆಯ ಮನೆಯಲ್ಲಿ ಒಂದೆರೆಡು ಕುಟುಂಬಗಳು ಬಾಡಿಗೆಯ ಆಧಾರದಲ್ಲಿ ನೆಲೆಸಿರುತ್ತವೆ. ಈ ಮಧ್ಯ ಒಬ್ಬ ಯುವಕ ಬಾಡಿಗೆಯನ್ನು ಸರಿಯಾಗಿ ನೀಡಲು ಹಿಂಜರಿಯುತ್ತಾನೆ ಇಷ್ಟೇ. ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗೂ ಆಯುಷ್ಮಾನ್ ಖುರಾನ ಕಾಂಬಿನೇಷನ್ ಚಿತ್ರದಲ್ಲಿ ಗಮನ ಸೆಳೆಯುತ್ತದೆ, ಅದು ಬಿಟ್ಟರೆ ಹೆಚ್ಚೇನಿಲ್ಲ. ಒಂದು ಬಾರಿ ನೋಡಿದರೆ ವ್ಯರ್ಥವಿಲ್ಲ. ಚಿತ್ರವನ್ನು ಅಮೇಜಾನ್ ಪ್ರೈಮ್ ನಲ್ಲಿ ನೋಡಬಹುದು.
ಲಕ್ಷ್ಮೀ ಬಾಂಬ್ : ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಲಕ್ಷ್ಮೀ ಬಾಂಬ್ ಚಿತ್ರವೂ ಒಂದಾಗಿತ್ತು. ಚಿತ್ರ ನಿರೀಕ್ಷೆ ಹೆಚ್ಚಿದ್ದಷ್ಟು ಸದ್ದು ಮಾಡದೆ ಇದ್ರು, ಒಂದು ಬಾರಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ಸಾಗಿತ್ತು. ಲಕ್ಷ್ಮೀ ಬಾಂಬ್ ತೆಲುಗಿನ ‘ ಕಾಂಚನ’ ಚಿತ್ರದ ಹಿಂದಿ ರಿಮೇಕ್. ಚಿತ್ರದ ಬುರ್ಜ್ ಖಲಿಫಾ ಹಾಡು ಹಿಟ್ ಆಗಿ ಗಡಿದಾಟಿ ಜನಮನವನ್ನು ತಲುಪಿತ್ತು ವಿನಃ ಚಿತ್ರ ಅಷ್ಟಾಗಿ ಗಮನ ಸೆಳೆಯಲಿಲ್ಲ.
ಲೂಟ್ ಕೇಸ್ : ಸರಳ ಕಥೆ, ಮಧ್ಯಮ ವರ್ಗದ ಬದುಕು, ಆಸೆ, ದುರಾಸೆ ಮತ್ತು ಕಣ್ಣು ತುಂಬ ಕನಸು. ಲೂಟ್ ಕೇಸ್ ಚಿತ್ರದ ಒನ್ ಲೈನ್ ಕಥೆಯಿದು. ದಾರಿಯಲ್ಲಿ ಹೋಗುವವನಿಗೆ ಆಕಸ್ಮಾತ್ ಆಗಿ ಕೈತುಂಬಾ ಹಣ ಸಿಕ್ಕರೆ ಏನು ಆಗಬಹುದು ಮತ್ತು ಅದರಿಂದ ಏನೇನೆಲ್ಲಾ ಮಾಡಬಹುದು ಎನ್ನುವುದನ್ನು ಲೂಟ್ ಕೇಸ್ ಚಿತ್ರ ಹೇಳುತ್ತದೆ. ನಾಯಕನಾಗಿ ಕಾಣಿಸಿರುವ ಕುನಾಲ್ ಅಭಿನಯ ಮತ್ತು ಸಹ ನಟರ ಸಹಕಾರ, ಚಿತ್ರವನ್ನು ಎಲ್ಲೂ ಬೋರಾಗಿಸದೆ ನೋಡುವಂತೆ ಮಾಡುತ್ತದೆ. ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ಚಿತ್ರವನ್ನು ವೀಕ್ಷಿಸಬಹುದು.
ಗುಂಜನ್ ಸೆಕ್ಸೇನಾ : ನೈಜ ಕಥೆಯನ್ನು ಕಣ್ಣಂಚು ಒದ್ದೆಯಾಗುವಂತೆ, ಕೊನೆಗೆ ಮೈಯೆಲ್ಲಾ ರೋಮಾಂಚನವಾಗಿ ಸ್ಫೂರ್ತಿಗೊಳ್ಳುವಂತೆ ಮಾಡುವ ಚಿತ್ರ ಗುಂಜನ್ ಸೆಕ್ಸೇನಾ. ಕಾರ್ಗಿಲ್ ಯುದ್ಧದಲ್ಲಿದ್ದ ಏಕೈಕ ಮಹಿಳಾ ಪೈಲಟ್ ಗುಂಜನ್ ಸೆಕ್ಸೇನಾ ಬದುಕಿನ ಕಥೆಯಿದು. ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿರುವ ಜಾಹ್ನವಿ ಕಪೂರ್ ಅಭಿನಯ ನೋಡಗರನ್ನು ಸೆಳೆಯುತ್ತದೆ. ಪಾತ್ರಕ್ಕೆ ಭರ್ತಿಯಾಗಿ ಜೀವ ತುಂಬಿದ ಅವರ ನಟನೆ ಸ್ಕ್ರೀನ್ ಮೇಲೆ ಚೆನ್ನಾಗಿ ಮೂಡಿ ಬಂದಿದೆ. ತಂದೆಯ ಪಾತ್ರದಲ್ಲಿ ಕಾಣಿಸಿರುವ ಪಂಕಜ್ ತ್ರಿಪಾಠಿಯೊಂದಿಗೆ ಬಾಂಧವ್ಯ ಪ್ರೇಕ್ಷರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಇಷ್ಟು ಮಾತ್ರವಲ್ಲದೆ ‘ಖುದಾ ಹಫೀಜ್’, ‘ಶಕುಂತಲಾ ದೇವಿ’, ‘ಸಡಕ್ -2’, ‘ಖಾಲಿ-ಪೀಲಿ’, ‘ದುರ್ಗಾಮತಿ, ಚಿತ್ರಗಳು ಸಹ ಓಟಿಟಿಯಲ್ಲಿ ನೇರವಾಗಿ ಬಿಡುಗಡೆಗೊಂಡಿವೆ.