Advertisement

“ಕೂಚಿ’ಕು ಗೆಳೆಯ

12:30 AM Feb 20, 2019 | |

“ವಲಸೆ; ಎಂಬ ಅರ್ಥ ಬರುವ ಈ ಆಭರಣ ಕೂಡ ನಮ್ಮ ದೇಶಕ್ಕೆ ಅಫ್ಘಾನಿಸ್ತಾನದಿಂದ ವಲಸೆ ಬಂದಿದ್ದೇ. ಅಲ್ಲಿನ “ಕೂಚಿ’ ಎಂಬ ಬುಡಕಟ್ಟು ಜನಾಂಗದವರ ಪಾರಂಪರಿಕ ಆಭರಣಗಳು ಇಂದು ನಮ್ಮ ಫ್ಯಾಷನ್‌ ಲೋಕದಲ್ಲಿ ಘಲ್‌ ಘಲ್‌ ಸದ್ದು ಮಾಡುತ್ತಿವೆ…

Advertisement

ಅಫ್ಘಾನಿಸ್ತಾನದ ಅಲೆಮಾರಿ ಬುಡಕಟ್ಟು ಜನಾಂಗದಲ್ಲಿ ಕೂಚಿಯೂ ಒಂದು. ಪರ್ಷಿಯನ್‌ ಭಾಷೆಯಲ್ಲಿ “ವಲಸೆ’ ಎಂಬ ಅರ್ಥವಿರುವ ಪದದಿಂದಲೇ ಈ ಕೂಚಿ ಎಂಬ ಪದ ಹುಟ್ಟಿಕೊಂಡಿತು. ಈ ಜನರು ತೊಡುವ ಆಭರಣಗಳೇ ಕೂಚಿ ಆಭರಣ. ಇವುಗಳನ್ನು ಆಕ್ಸಿಡೀಕೃತ ಜರ್ಮನ್‌ ಬೆಳ್ಳಿ ಮತ್ತು ಬಣ್ಣದ ಗಾಜಿನಿಂದ ತಯಾರಿಸಲಾಗುತ್ತದೆ. ಕೆಲವೊಮ್ಮೆ ಇವುಗಳಲ್ಲಿ ಬಣ್ಣದ ಕಲ್ಲುಗಳನ್ನೂ ಬಳಸಲಾಗುತ್ತದೆ. 

ಸಿನಿಮಾ ನಟಿಯರು ಮತ್ತು ಧಾರಾವಾಹಿ ನಟಿಯರು, ಚಿತ್ರಗಳಲ್ಲಿ ಮಾತ್ರವಲ್ಲದೆ ತಮ್ಮ ನಿಜ ಜೀವನದಲ್ಲೂ ಈ ಆಭರಣಗಳನ್ನು ತೊಟ್ಟು ಆಫ್ಘಾನ್‌ ಕೂಚಿ ಆಭರಣದ ಬಗ್ಗೆ ಮಹಿಳೆಯರಲ್ಲಿ ಒಲವು ಹುಟ್ಟಿಸಿದ್ದಾರೆ. ಇವುಗಳು ಸದ್ಯ ಕಾಲೇಜು ವಿದ್ಯಾರ್ಥಿನಿಯರ ಹಾಟ್‌ ಫೇವರಿಟ್‌. ಈ ಆಫ್ಘಾನ್‌ ಕೂಚಿ ಆಭರಣಗಳಲ್ಲಿ ಕಿವಿಯೋಲೆ, ಜುಮ್ಕಿ, ಉಂಗುರ, ಸರ, ಸೊಂಟಪಟ್ಟಿ, ಬಳೆ, ಬ್ರೇಸ್‌ಲೆಟ್‌, ಕಾಲ್ಗೆಜ್ಜೆ… ಹೀಗೆ ಅನೇಕ ಆಯ್ಕೆಗಳಿವೆ. ಹಣೆ ಮುಚ್ಚುವಂಥ ಬಟ್ಟೆಯ (ಶಾಲು) ಅಂಚಿನಲ್ಲೂ ಇಂಥ ಕೂಚಿ ಗೆಜ್ಜೆಯ ಗೊಂಚಲುಗಳನ್ನು ಕಟ್ಟಿ, ಆ ಬಟ್ಟೆಯನ್ನೂ ಆಭರಣದ ಅಂಗವಾಗಿಸುತ್ತಿದ್ದರು, ಆಫ್ಘಾನಿ ಕೂಚಿ ಮಹಿಳೆಯರು. ಈ ಆಭರಣಗಳು ರಸ್ತೆ ಬದಿಯ ಫ್ಯಾನ್ಸಿ ಅಂಗಡಿಗಳಲ್ಲಿ ಲಭ್ಯ. ಇವುಗಳನ್ನು ಆನ್‌ಲೈನ್‌ ಮೂಲಕವೂ ಖರೀದಿಸಬಹುದು. 

ವೈವಿಧ್ಯಮಯ ಆಕೃತಿ
ಕನ್ನಡಿ, ದೀಪ, ಅರ್ಧ ಚಂದ್ರ, ಪೂರ್ಣ ಚಂದ್ರ ಅಲ್ಲದೆ, ಇವುಗಳಲ್ಲಿ ಕಮಲಾ, ಮತ್ಸ (ಮೀನು), ನಕ್ಷತ್ರ, ನಾಣ್ಯ ಹಾಗೂ ಇನ್ನೂ ಅನೇಕ ಆಕೃತಿಗಳನ್ನು ಅಳವಡಿಸಲಾಗುತ್ತದೆ. ಕೇವಲ ವೃತ್ತಾಕಾರಕ್ಕೆ ಸೀಮಿತವಾಗದೆ ತ್ರಿಕೋನ, ಚೌಕ, ಪಂಚಕೋನಾಕೃತಿ, ಷಡು ಜಾಕೃತಿ, ಅಷ್ಟಭುಜದಂಥ ಜ್ಯಾಮಿತೀಯ ಆಕಾರದಲ್ಲೂ ಈ ಅಫ್ಘಾನ್‌ ಕೂಚಿ ಆಭರಣಗಳು ಲಭ್ಯ ಇವೆ.. ಇಂಥ ಚಿತ್ರ-ವಿಚಿತ್ರ ಆಕಾರದ ಆಫ್ಘಾನ್‌ ಕೂಚಿ ಆಭರಣಗಳಿಗೆ ಬಹು ಬೇಡಿಕೆಯೂ ಇದೆ! 

“ನಾಣ್ಯ’ ಚಿಲ್ಲರೆಯಲ್ಲ…
ಮೂಲ ಆಫ್ಘಾನ್‌ ಕೂಚಿ ಆಭರಣ ಸ್ವಲ್ಪ ದುಬಾರಿ. ಆದರೆ, ಇವುಗಳ ನಕಲು ಪ್ರತಿಗಳು ಬಹಳ ಕಡಿಮೆ ದರಕ್ಕೆ ಬಹುತೇಕ ಎಲ್ಲೆಡೆಯೂ ಸಿಗುತ್ತವೆ. ಹಿಂದಿನ ಕಾಲದಲ್ಲಿ ಈ ಆಫ್ಘಾನಿ ಕೂಚಿ ಮಹಿಳೆಯರು ತಮ್ಮ ಆಭರಣಗಳಲ್ಲಿ ನಾಣ್ಯಗಳನ್ನೂ ಬಳಸುತ್ತಿದ್ದರು. ಇದೀಗ ಅದೇ ನಾಣ್ಯ ಉಳ್ಳ ಆಫ್ಘಾನ್‌ ಕೂಚಿ ಆಭರಣಗಳು ಟ್ರೆಂಡ್‌ ಆಗುತ್ತಿವೆ. ಇಂದಿನ ಆಭರಣ ತಯಾರಕರು ಮತ್ತು ವಿನ್ಯಾಸಕರು ಹಳೆ ಕಾಲದ ನಾಣ್ಯಗಳಿಗೆ ಹೋಲುವಂಥ ವಸ್ತುಗಳನ್ನು ಬಳಸಿ ಹೊಸ-ಹೊಸ ಬಗೆಯ ಬುಗುಡಿ, ಮೂಗುತಿ ಮತ್ತು ಇನ್ನಿತರ ಆಭರಣಗಳನ್ನು ತಯಾರಿಸಲು ಮುಂದಾಗಿದ್ದಾರೆ. 

Advertisement

ಬೆಲ್ಲಿ ಡ್ಯಾನ್ಸರ್‌ಗಳಿಗೆ ಅಚ್ಚುಮೆಚ್ಚು
ಬೆಲ್ಲಿ ಡ್ಯಾನ್ಸರ್‌ಗಳು ಬಳಸುವ ಸೊಂಟಪಟ್ಟಿಯಲ್ಲೂ ಈ ಆಫ್ಘಾನ್‌ ಕೂಚಿ ಶೈಲಿಯ ಆಯ್ಕೆಗಳಿವೆ. ಈ ಆಫ್ಘಾನಿ ಕೂಚಿ ಆಭರಣಗಳ ಪೈಕಿ ದೊಡ್ಡ – ದೊಡ್ಡ ಗಾತ್ರದ ಪದಕಗಳಂತಿರುವ ಪೆಂಡೆಂಟ್‌ಗಳು, ಬಟ್ಟಲು, ನಾಣ್ಯ ಮತ್ತು ಕನ್ನಡಿಗಳನ್ನು ಕಿವಿಯೋಲೆ, ಉಂಗುರ, ಸರ, ಸೊಂಟಪಟ್ಟಿ ಮತ್ತು ಹಣೆಯ ಸುತ್ತ ಕಟ್ಟುವ ಪಟ್ಟಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈ ದೊಡ್ಡ ಪದಕಗಳೇ ಆಫ್ಘಾನಿ ಕೂಚಿ ಆಭರಣಗಳ ವೈಶಿಷ್ಟ. ಇಂಥ ದೊಡ್ಡ ಪದಕಗಳಿಂದ ಆಭರಣಗಳು ಎದ್ದು ಕಾಣುತ್ತವೆ. ಇವುಗಳನ್ನು ತೊಟ್ಟವರೂ ಎದ್ದು ಕಾಣುತ್ತಾರೆ.

ಘಲ್ಲು ಘಲ್ಲೆನ್ನುತ್ತೆ!
ಕೈಗಳಲ್ಲಿ ತಯಾರಾಗುವ ಇವು ಒಂದರಂತೆ ಇನ್ನೊಂದು ಇರುವುದು ಅಪರೂಪ. ಗಾತ್ರದಲ್ಲಿ ದೊಡ್ಡಕಿದ್ದರೂ, ತೂಕವಿರುವುದಿಲ್ಲ. ಹಗುರವಾಗಿರುತ್ತವೆ. ಇವುಗಳಲ್ಲಿ ಮಣಿ ಮತ್ತು ಗೆಜ್ಜೆಯಂಥ ವಸ್ತುಗಳನ್ನು ಬಳಸಲಾಗುತ್ತದೆ. ಹಾಗಾಗಿ, ಇವುಗಳು ಗೆಜ್ಜೆಯಂತೆ “ಘಲ್‌ ಘಲ್‌’ ಸದ್ದು ಕೂಡ ಮಾಡುತ್ತವೆ.

– ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next