Advertisement

ಅತ್ಯುತ್ತಮ ಪ್ರಯತ್ನ: ರೋಹಿತ್‌ ಸಂತಸ

05:52 PM May 08, 2019 | Sriram |

ಚೆನ್ನೈ: “ಇದೊಂದು ಅತ್ಯುತ್ತಮ ಪ್ರಯತ್ನ. ನಾವು ಫೈನಲ್‌ ತಲುಪಿದ್ದೇವೆ ಎಂಬ ಸಂಗತಿ ಬಹಳ ಖುಷಿ ಕೊಡುವಂಥದ್ದು. ಇನ್ನೂ 3 ದಿನಗಳ ಸಮಯವಿದೆ. ನಾವು ಪ್ರಶಸ್ತಿ ಸಮರಕ್ಕೆ ಸೂಕ್ತ ಕಾರ್ಯತಂತ್ರಗಳೊಂದಿಗೆ ಸಜ್ಜಾಗಬೇಕಿದೆ’ ಎಂಬುದು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಅನಿಸಿಕೆ.

Advertisement

“ನಮ್ಮ ಬೌಲರ್‌ಗಳು ಚೆನ್ನೈ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವರೆಂಬ ವಿಶ್ವಾಸವಿತ್ತು. ಹಾಗೆಯೇ ಬ್ಯಾಟಿಂಗ್‌ ಸರದಿಯ ಮೇಲೂ ನಂಬಿಕೆ ಇತ್ತು. ಅವರನ್ನು ಸಾಧ್ಯವಾದಷ್ಟು ಸಣ್ಣ ಮೊತ್ತಕ್ಕೆ ಹಿಡಿದು ನಿಲ್ಲಿಸಿ, ಬಳಿಕ ಸ್ಪಿನ್ನರ್‌ಗಳಿಗೆ ದಿಟ್ಟ ಉತ್ತರ ನೀಡುವುದು ನಮ್ಮ ಯೋಜನೆಯಾಗಿತ್ತು. ಇದು ಯಶಸ್ವಿಯಾಯಿತು’ ಎಂದು ರೋಹಿತ್‌ ಹೇಳಿದರು.

ಜಯಂತ್‌ ಆಯ್ಕೆಗೆ ಕಾರಣ…
“ನಾವು ಫಿಂಗರ್‌ ಸ್ಪಿನ್ನರ್‌ ಜಯಂತ್‌ ಯಾದವ್‌ ಅವರನ್ನು ಸೇರಿಸಿಕೊಳ್ಳಲು ಮುಖ್ಯ ಕಾರಣವೆಂದರೆ, ಚೆನ್ನೈ ತಂಡದ ಕೆಲವು ಬಲಗೈ ಆಟಗಾರರನ್ನು ನಿಯಂತ್ರಿಸುವುದಾಗಿತ್ತು. ಇಂಥ ಸಂದರ್ಭದಲ್ಲಿ ರಿಸ್ಟ್‌ ಸ್ಪಿನ್ನರ್‌ಗಿಂತ ಫಿಂಗರ್‌ ಸ್ಪಿನ್ನರ್‌ ಹೆಚ್ಚು ಪರಿಣಾಮ ಬೀರುತ್ತಾರೆ. ನಮ್ಮ ಈ ಯೋಜನೆ ಕೂಡ ಕ್ಲಿಕ್‌ ಆಯಿತು’ ಎಂದರು.

“ತಂಡವೊಂದನ್ನು 140 ರನ್‌ ಒಳಗೆ ನಿಯಂತ್ರಿಸುವುದು ನಿಜಕ್ಕೂ ಅಮೋಘ ಸಾಧನೆ. ಇದರ ಎಲ್ಲ ಶ್ರೇಯಸ್ಸು ನಮ್ಮ ಬೌಲರ್‌ಗಳಿಗೆ ಸಲ್ಲಬೇಕು. ಹಾಗೆಯೇ ಸೂರ್ಯಕುಮಾರ್‌ ಯಾದವ್‌ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿದರು. ಯಾದವ್‌ ಸ್ಪಿನ್ನರ್‌ಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಬಲ್ಲ ಆಟಗಾರ. ಅವರ ಬಿಹೈಂಡ್‌ ದ ವಿಕೆಟ್‌ ಶಾಟ್ಸ್‌ ಅವರಿಂದಷ್ಟೇ ಬಾರಿಸಲು ಸಾಧ್ಯವಾಗುವಂಥದ್ದಾಗಿತ್ತು. ನಮ್ಮದೊಂದು ಸಂತುಲಿತ ತಂಡ. ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳಬಲ್ಲ ಆಟಗಾರರ ಪಡೆ ನಮ್ಮಲ್ಲಿದೆ’ ಎಂದು ರೋಹಿತ್‌ ಹೇಳಿದರು.

“ಇದು ನಿಧಾನ ಗತಿಯಿಂದ ಕೂಡಿದ ಟರ್ನಿಂಗ್‌ ಟ್ರ್ಯಾಕ್‌ ಆಗಿತ್ತು. ಅಗ್ರ ಮೂವರಲ್ಲಿ ಯಾರಾದರೊಬ್ಬರು ಕೊನೆಯ ತನಕ ಕ್ರೀಸ್‌ ಆಕ್ರಮಿಸಿಕೊಳ್ಳುವುದು ಮುಖ್ಯವಾಗಿತ್ತು. ಚೆನ್ನೈ ಬ್ಯಾಟಿಂಗನ್ನು ಗಮನಿಸುತ್ತಲೇ ಇದ್ದೆ. ಚೆಂಡನ್ನು ಗಾಳಿಯಲ್ಲಿ ಬಾರಿಸಲು ಕಷ್ಟವಾಗುತ್ತಿತ್ತು. ಹೀಗಾಗಿ ನಾನು ಸಿಂಗಲ್ಸ್‌-ಡಬಲ್ಸ್‌ ತೆಗೆಯುವುದರತ್ತ ಹೆಚ್ಚಿನ ಗಮನ ನೀಡಿದೆ’
-ಸೂರ್ಯಕುಮಾರ್‌ ಯಾದವ್‌ (ಪಂದ್ಯಶ್ರೇಷ್ಠ ಆಟಗಾರ)

Advertisement
Advertisement

Udayavani is now on Telegram. Click here to join our channel and stay updated with the latest news.

Next