ಭುವನೇಶ್ವರ: ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿ ಭಾರತ ತಂಡದ ಮೀಸಲು ಆಟಗಾರರಿಗೆ ಉತ್ತಮ ತಳಹದಿ ಆಗಲಿದೆ ಎಂಬುದಾಗಿ ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ. ಈ ಪಂದ್ಯಾವಳಿಗಾಗಿ ಶುಕ್ರವಾರ ಭಾರತ ತಂಡ ಢಾಕಾಕ್ಕೆ ವಿಮಾನ ಏರುವ ಮುನ್ನ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
“ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ ಸುಮಾರು 10 ಮಂದಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ತಂಡದ ಮೀಸಲು ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಲು ಇದೊಂದು ಉತ್ತಮ ಅವಕಾಶ. ಅವರ ಮುಂದಿನ ಪಯಣಕ್ಕೆ ಇದೊಂದು ತಳಹದಿ ಆಗಲಿದೆ’ ಎಂಬುದಾಗಿ ಮನ್‌ಪ್ರೀತ್ ಸಿಂಗ್ ಹೇಳಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ಭಾರತ ಪಾಲ್ಗೊಳ್ಳುತ್ತಿರುವ ಮೊದಲ ಹಾಕಿ ಪಂದ್ಯಾವಳಿ ಇದಾಗಿದೆ. ಭಾರತ ಈ ಕೂಟದ ಹಾಲಿ ಜಂಟಿ ಚಾಂಪಿಯನ್ ಎಂಬುದನ್ನು ಮರೆಯುವಂತಿಲ್ಲ. 2018ರ ಮಸ್ಕತ್ ಕೂಟದ ಭಾರತ-ಪಾಕಿಸ್ಥಾನ ನಡುವಿನ ಫೈನಲ್ ಪಂದ್ಯ ಭಾರೀ ಮಳೆಯಿಂದ ರದ್ದುಗೊಂಡಿತ್ತು.
“ಭುವನೇಶ್ವರದಲ್ಲಿ ಉತ್ತಮ ಮಟ್ಟದ ಅಭ್ಯಾಸ ಮಾಡಲಾಗಿದೆ. ಇಲ್ಲಿನ ಹಾಗೂ ಢಾಕಾ ವಾತಾ ವರಣಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಮುಂದಿನ ವರ್ಷ ಏಶ್ಯಾಡ್ ಮತ್ತು ಏಶ್ಯ ಕಪ್ ಪಂದ್ಯಾವಳಿ ಇರುವುದರಿಂದ ನಮ್ಮ ಪಾಲಿಗೆ ಇದೊಂದು ಮಹತ್ವದ ಸರಣಿ’ ಎಂದರು ಮನ್‌ಪ್ರೀತ್.
ಇದನ್ನೂ ಓದಿ:ವಾಸ್ತುಶಿಲ್ಪಿ ಬಾಲಕೃಷ್ಣ ಜೋಷಿಗೆ ರಾಯಲ್ ಗೋಲ್ಡ್ ಮೆಡಲ್ 2022 ಗೌರವ
ಕೊರಿಯಾ ಮೊದಲ ಎದುರಾಳಿ
ಭಾರತ ತನ್ನ ಮೊದಲ ಪಂದ್ಯವನ್ನು ಡಿ. 14ರಂದು ಕೊರಿಯಾ ವಿರುದ್ಧ ಆಡಲಿದೆ. ಬಳಿಕ ಬಾಂಗ್ಲಾದೇಶ (ಡಿ. 15), ಪಾಕಿಸ್ಥಾನ (ಡಿ. 17), ಮಲೇಶ್ಯ (ಡಿ. 18) ಮತ್ತು ಜಪಾನ್ (ಡಿ. 19) ವಿರುದ್ಧ ಸೆಣಸಲಿದೆ.ಲೀಗ್ ಹಂತದ 4 ಅಗ್ರ ತಂಡಗಳು ಸೆಮಿ ಪ್ರವೇಶಿಸಲಿವೆ. ಡಿ. 21ರಂದು ಸೆಮಿ, ಡಿ. 22ರಂದು ಫೈನಲ್ ನಡೆಯಲಿದೆ.