ಬೆಂಗಳೂರು: ವಿದ್ಯುತ್ ತಂತಿ ತುಳಿದ ಸ್ಥಳದಲ್ಲೇ ಸುಟ್ಟು ಕರಕಲಾದ ತಾಯಿ- ಮಗು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಿರುವ ತಾಂತ್ರಿಕ ತಜ್ಞರ ಸಮಿತಿ, ಘಟನೆಗೆ ತಾಂತ್ರಿಕ ಲೋಪಗಳೇ ಕಾರಣ ಎಂದು ಉಲ್ಲೇಖೀಸಿದೆ. ಈ ಮೂಲಕ ಬೆಸ್ಕಾಂ ನಿರ್ಲಕ್ಷ್ಯದತ್ತ ಬೊಟ್ಟು ಮಾಡಿದೆ.
2023ರ ನವೆಂಬರ್ 19ರಂದು ಬೆಳಗಿನಜಾವ ಸಂಭವಿಸಿದ್ದ ಹೃದಯವಿದ್ರಾವಕ ಘಟನೆಯನ್ನು ಬೆಸ್ಕಾಂ ಅಧಿಕಾರಿಗಳು ಇಲಿ ಮೇಲೆ ಎತ್ತಿ ಹಾಕಿದ್ದರು. “11 ಕೆವಿ ಎತ್ತರಿಸಿದ ವಿದ್ಯುತ್ ಎಚ್‌ಟಿ ಮಾರ್ಗವು ಹಾದುಹೋದ ಅನತಿ ದೂರದಲ್ಲೊಂದು ಅಪಾರ್ಟ್‌ಮೆಂಟ್ ಇದೆ. ಅದು ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಂಡಿದೆ. ಅದಕ್ಕೆ ಪೂರಕವಾಗಿ 11 ಕೆವಿ ಮಾರ್ಗದ ಎಲ್‌ಬಿಎಸ್ (ಲೋಡ್ ಬ್ರೇಕ್ ಸ್ವಿಚ್) ಇದ್ದು, ಅದಕ್ಕೆ ಇಲಿ ಬಾಯಿ ಹಾಕಿದೆ. ವೈರ್‌ಗಳನ್ನು ಕಚ್ಚಿದ್ದರಿಂದ ಶಾರ್ಟ್ ಸರ್ಕಿಟ್ ಆಗಿದೆ. ಪರಿಣಾಮ ಎಚ್‌ಟಿ ಲೈನ್‌ನ ದುರ್ಬಲ ಪಾಯಿಂಟ್‌ನಲ್ಲಿ ತಂತಿ ತುಂಡಾಗಿ ಬಿದ್ದಿದೆ ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ’ ಅಧಿಕಾರಿಗಳು ಹೇಳಿದ್ದರು.
ಆದರೆ, ಘಟನೆಯ ತನಿಖೆಗೆ ಸಂಬಂಧಿಸಿದಂತೆ ಸ್ವತಃ ಸರ್ಕಾರ ನೇಮಿಸಿದ್ದ ತಾಂತ್ರಿಕ ತಜ್ಞರ ಸಮಿತಿ ನೀಡಿದ ತನಿಖಾ ವರದಿಯಲ್ಲಿ ಇಲಿ ಕಚ್ಚಿದ್ದರ ಬಗ್ಗೆ ಪ್ರಸ್ತಾಪವೇ ಇಲ್ಲ. ಬದಲಿಗೆ ಕೆಲವು ಗುರುತರ ತಾಂತ್ರಿಕ ಲೋಪಗಳನ್ನು ಎತ್ತಿತೋರಿಸಿದೆ. ಅದರಲ್ಲಿ ಮುಖ್ಯವಾಗಿ ಕೊಯೆr- ರ್ಯಾಬಿಟ್ ಕಂಡಕ್ಟರ್ ಜೋಡಿಸಿರುವುದು ಸರಿಯಲ್ಲ. ಇದು ಒಂದು ರೀತಿ ದೊಡ್ಡ ಪೈಪ್‌ಗೆ ಸಣ್ಣ ಪೈಪ್ ಜೋಡಿ ಸಿದಂತೆ. ಇದರಿಂದ ಜಾಯಿಂಟ್ ಬಿಚ್ಚಿಕೊಳ್ಳುವುದು ಸಹಜ. ತಂತಿ ಹಾಕುವಾಗ ಹೆಚ್ಚು ಜಾಯಿಂಟ್‌ಗಳು ಇಲ್ಲದಂತೆ ನೋಡಿಕೊಳ್ಳಬೇಕು. ಇನ್ನು ಅಪಘಾತ ನಡೆದ ಸ್ಥಳದಲ್ಲಿ ಜಾಯಿಂಟ್ ಗಳನ್ನು ಎರಡು ವರ್ಷದಿಂದ ಪರಿಶೀಲಿಸಿಲ್ಲ. ಎಲ್ಲ ಕಡೆ ಅರ್ಥ್ಗಾರ್ಡ್ ಸ್ಟಿರಪ್‌ಗ್ಳನ್ನು ಬಳಸಿಲ್ಲ. ಇದರಿಂದ ವಿದ್ಯುತ್ ಪ್ರವಾಹವನ್ನು ಸುರಕ್ಷಿತಗೊಳಿಸಲು ಸಾಧ್ಯವಾಗಿಲ್ಲ ಎಂದು ಉಲ್ಲೇಖೀಸಲಾಗಿದೆ.
ಅಷ್ಟೇ ಅಲ್ಲ, ಕೇಂದ್ರೀಯ ವಿದ್ಯುತ್ ಆಯೋಗ ನೀಡಿರುವ ಮಾರ್ಗದರ್ಶಿ ಸೂತ್ರಗಳ ಪಾಲನೆ ಯಾಗಿಲ್ಲ. ಅತಿ ಸೂಕ್ಷ್ಮ ರಿಲೇ ಬಳಸಿದ್ದರೆ, ಎಲ್ಲಿಯೇ ವಿದ್ಯುತ್ ತಂತಿ ಕಳಚಿ ಬಿದ್ದರೂ ಟ್ರಿಪ್ ಆಗುತ್ತಿತ್ತು. ವಿದ್ಯುತ್ ಪರಿವೀಕ್ಷಕರು ಕಾಲಕಾಲಕ್ಕೆ ಪರಿಶೀಲಿಸಿ ಸೂಚನೆ ನೀಡಿಲ್ಲ. ಲೈನ್‌ಮನ್‌ಗಳಿಗೆ ತರಬೇತಿ ಸಾಲದು ಎಂದೂ ಹೇಳಿದೆ.
ಘಟನೆ ಹಿನ್ನೆಲೆ: ವೈಟ್ ಫೀಲ್ಡ್‌ನಲ್ಲಿ ನವೆಂಬರ್ 19ರಂದು ಬೆಳಿಗ್ಗೆ 6ರ ಸುಮಾರಿಗೆ ಬಸ್ಸಿನಲ್ಲಿ ಬಂದಿಳಿದು, ಮನೆಗೆ ನಡೆದುಕೊಂಡು ಹೋಗುವಾಗ ವಿದ್ಯುತ್ ಸಜೀವ ತಂತಿ ತುಳಿದು ಸೌಂದರ್ಯ (23) ಆಕೆಯ ಕಂಕುಳದಲ್ಲಿದ್ದ ಎಂಟು ತಿಂಗಳ ಮಗು ಸುವಿಕ್ಷ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದರು. ಕೆಪಿಟಿಸಿಎಲ್ ನಿವೃತ್ತ ನಿರ್ದೇಶಕ ಎಸ್. ಸುಮಂತ್ ನೇತೃತ್ವದಲ್ಲಿ ವರದಿಯನ್ನು ಸಿದ್ಧಪಡಿಸಲಾಗಿದೆ. ಸಮಿತಿ ಯಲ್ಲಿ ಪ್ರಧಾನ ವಿದ್ಯುತ್ ಪರಿವೀಕ್ಷಕ ರವಿಕುಮಾರ್ ಹಾಗೂ ಬಿ.ವಿ. ಗಿರೀಶ್ ಹಾಗೂ ಸಿಪಿಆರ್‌ಐ ತಜ್ಞ ಪ್ರಭಾಕರ್ ಇದ್ದರು. ಈ ಪ್ರಕರಣದಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ.
ಎಚ್ಚರಿಸಿದರೂ ನಿದ್ದೆಯಿಂದೇಳದ ಸಿಬ್ಬಂದಿ! : ವಿದ್ಯುತ್ ತಂತಿ ಕಡಿದು ಬಿದ್ದಾಗ, ಬೆಳಗಿನಜಾವ 3.49 ಹಾಗೂ 3.58 ಮತ್ತು 3.59ಕ್ಕೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ಎಚ್ಚರಿಸಿದ್ದಾರೆ. ಯಾರೂ ಗಮನ ಹರಿಸಲಿಲ್ಲ. 3.50ಕ್ಕೆ ವಿದ್ಯುತ್ ಸಂಪರ್ಕ ಕಡಿದು ಹೋಗಿದೆ. 3.55 ಕ್ಕೆ ವಿದ್ಯುತ್ ಸಂಪರ್ಕ ಮತ್ತೆ ಕಲ್ಪಿಸಲಾಗಿದೆ. 4.07ಕ್ಕೆ ಹಿರಿಯ ಅಧಿಕಾರಿಗಳಿಗೂ ಮಾಹಿತಿ ಹೋಗಿದೆ. ಸಿಬ್ಬಂದಿ ಎಚ್ಚರವಹಿಸಿ ಸ್ಥಳಕ್ಕೆ ಹೋಗಿದ್ದರೆ ಜೀವ ಉಳಿಸಬಹುದಾಗಿತ್ತು. ಓದುಂಬರ ಅಪಾರ್ಟ್ ಮೆಂಟ್‌ನಲ್ಲಿ 3.45ಕ್ಕೆ ಶಾರ್ಟ್ ಸರ್ಕಿಟ್ ಆಗಿದೆ.