Advertisement

ಗ್ರಾಮಕ್ಕೆ ಭೇಟಿ ನೀಡಿದ ಬಿಇಒ; ಶಾಸಕರ ಭರವಸೆಯಿಂದಾಗಿ ಮಕ್ಕಳನ್ನು ಶಾಲೆಗೆ ಕಳಿಸಿದ ಪಾಲಕರು

01:22 PM Jun 01, 2024 | Team Udayavani |

ದೋಟಿಹಾಳ: ಮೇಗೂರ ಗ್ರಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿ, ಅವರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ವಿದ್ಯಾರ್ಥಿಗಳು ಮರಳಿ ಶಾಲೆಗೆ ಆಗಮಿಸಿದರು.

Advertisement

ದೋಟಿಹಾಳ ಸಮೀಪದ ಮೇಗೂರ ಗ್ರಾಮದಲ್ಲಿ ಶಿಥಿಲಗೊಂಡ ಶಾಲಾ ಕೊಠಡಿಯನ್ನು ತೆರವುಗೊಳಿಸಿ ಹೊಸ ಕೊಠಡಿ ನಿರ್ಮಾಣ ಮಾಡಬೇಕು. ಅಲ್ಲಿಯವರೆಗೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಲು ಒಪ್ಪಲಿಲ್ಲ.

ಶುಕ್ರವಾರ ರಾಜ್ಯದಲ್ಲಿ ಅನೇಕ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ನಡೆದರೆ. ಈ ಶಾಲೆಯಲ್ಲಿ ಮಕ್ಕಳು ಬರದೇ ಬಿಕೋ ಎನ್ನುವಂತಿತ್ತು. ಶಾಲಾ ಶಿಕ್ಷಕರು ಶಾಲೆಯನ್ನು ಶೃಂಗರಿಸಿ ಶಾಲಾ ಆರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಗ್ರಾಮಸ್ಥರು ಮಕ್ಕಳನ್ನು ಶಾಲೆಗೆ ಕಳಿಸಲಿಲ್ಲ.

ಕೊನೆಗೆ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ, ಮೇಗೂರ ಗ್ರಾಮದ ಶಾಲಾ ಕೊಠಡಿಗಳು ಶೀಥಿಲಗೊಂಡಿರುವುದು ನಮಗೆ ಮನವರಿಕೆಯಾಗಿದೆ. ಇದರ ಬಗ್ಗೆ ಶಾಸಕರ ಜೊತೆ ಮಾತನಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಶಾಸಕರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಬಿಇಒ ಸುರೇಂದ್ರ ಕಾಂಬಳೆ ಅವರು ಗ್ರಾಮಸ್ಥರಿಗೆ ಮನವಿ ಮಾಡಿಕೊಂಡರು.

ಶಾಸಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭರವಸೆ ನೀಡಿದ ಕಾರಣ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಒಪ್ಪಿಗೆ ನೀಡಿದರು. ಹೀಗಾಗಿ ಶನಿವಾರ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದರು.

Advertisement

ಇದೇ ವೇಳೆ ಅಧಿಕಾರಿಗಳ ಹಾಗೂ ಶಿಕ್ಷಕರು, ಗ್ರಾಮಸ್ಥರ ಸಮ್ಮುಖದಲ್ಲಿಯೇ ಶಾಲಾ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ವರದಿ: ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ.

Advertisement

Udayavani is now on Telegram. Click here to join our channel and stay updated with the latest news.

Next