ಸಿದ್ದಾಪುರ: ಶೈಕ್ಷಣಿಕ ಗ್ರಾಮ ವಾಸ್ತವ್ಯ ಸಮುದಾಯದ ಜೊತೆಗೆ ಮಕ್ಕಳ ಕಲಿಕೆಯ ಬಗ್ಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ ಎಂದು ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ ಹೇಳಿದರು.
ಅವರು ಸಮೀಪದ ಈಳಿಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸಾಮುದಾಯಿಕ ತೊಡಗಿಸಿಕೊಳ್ಳುವಿಕೆ ಹಾಗೂ ಮಕ್ಕಳ ಕಲಿಕೆಯ ಉತ್ತೇಜನಕ್ಕಾಗಿ ಬಿಇಒ ಸೋಮಶೇಖರಗೌಡ ಅವರು ಹಮ್ಮಿಕೊಂಡಿರುವ ಶೈಕ್ಷಣಿಕ ಗ್ರಾಮ ವಾಸ್ತವ್ಯದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿಇಒ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿಗಳ ಬುದ್ಧಿಮಟ್ಟ ಹೆಚ್ಚಿಸುವ ಹಾಗೂ ಶಾಲೆಗೆ ಸಂಬಂಧಿ ಸಿದ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಕ್ರಮಗಳು ರಾಜ್ಯಮಟ್ಟದಲ್ಲಿ ಮುಂದುವರಿಯಬೇಕು. ಆಗ ಮಾತ್ರ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬರು ಇವುಗಳ ಸದುಪಯೋಗ ಪಡೆಯಬೇಕು. ಜಿಪಂನಿಂದ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.
ಬಿಇಒ ಸೋಮಶೇಖರಗೌಡ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ ಕುಮಾರ ವಿವಿಧೆಡೆ ಮಾಡಿರುವ ಶಾಲಾ ವಾಸ್ತವ್ಯಗಳಿಂದ ಪ್ರೇರಣೆಗೊಂಡು, ನಾವು ಸಹ ಶೈಕ್ಷಣಿಕ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇವೆ. ಈ ಮೂಲಕ ಶಾಲೆಯೊಂದಿಗೆ ಸಮುದಾಯ, ವಿವಿಧ ಇಲಾಖೆಗಳನ್ನು ಬೆಸೆಯುವುದು ಮತ್ತು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ನಂತರ ಉಳೇನೂರ ತಾಪಂ ಸದಸ್ಯ ಗವಿಸಿದ್ದಪ್ಪ, ಶ್ರೀರಾಮನಗರ ತಾಪಂ ಸದಸ್ಯ ಮಹ್ಮದ್ ರಫಿ, ಗಂಗಾವತಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶರಣೇಗೌಡ, ಗಂಗಾವತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಮರೇಶ ಮೈಲಾಪುರ ಮಾತನಾಡಿದರು. ಉಳೇನೂರು ಗ್ರಾಪಂ ಅಧ್ಯಕ್ಷೆ ಶಾರದಮ್ಮ ಗವಿಸಿದ್ಧಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಕುರುಬರ, ಕ್ಷೇತ್ರ ಸಮನ್ವಯ ಅ ಧಿಕಾರಿ ವೀರಭದ್ರಪ್ಪ ಗೊಂಡಬಾಳ, ಬಿಆರ್‌ಪಿ ಶಂಕ್ರಪ್ಪ, ಸಿಆರ್‌ಪಿ ನಜೀರ್ ಅಹ್ಮದ್, ಕಸಾಪ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ್, ತಿಮ್ಮಣ್ಣ ನಾಯಕ, ಬಸವರಾಜ ರ್ಯಾವಳದ್, ಶರಣಪ್ಪ ಹಕ್ಕಂಡಿ ಸೇರಿ ಇತರರಿದ್ದರು.