ಟಿ.ದಾಸರಹಳ್ಳಿ: ಕೊರೊನಾದಿಂದ ಗಂಡನನ್ನು ಕಳೆದುಕೊಂಡಿದ್ದ ಗೃಹಿಣಿ ತನ್ನ ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿಯ ಪ್ರಕೃತಿ ಬಡಾವಣೆಯ ನಿವಾಸಿ ವಸಂತ (45), ಆಕೆಯ ಮಗ ಯಶ್ವಂತ್ (15) ಹಾಗೂ ಮಗಳು ನಿಶ್ಚಿತಾ (6) ಮೃತರು.
ವಸಂತ ಅವರ ಪತಿ ಪ್ರಸನ್ನಕುಮಾರ್ ಬಿಎಂಟಿಸಿಯಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದರು, ಕಳೆದ ಆಸ್ಟ್‌ನಲ್ಲಿ ಕೊರೊನಾಗೆ ಬಲಿಯಾಗಿದ್ದರು. ಪತಿಯ ಅಕಾಲಿಕ ಸಾವು ಹಾಗೂ ಸಾಲ ಬಾಧೆಯಿಂದ ಖನ್ನತೆಗೆ ಒಳಗಾಗಿದ್ದರು.
ಪ್ರಕೃತಿ ಬಡಾವಣೆಯಲ್ಲಿ ಮನೆ ನಿರ್ಮಾಣಕ್ಕೆ ಪ್ರಸನ್ನಕುಮಾರ್ 20 ಲಕ್ಷದಷ್ಟು ಸಾಲ ಮಾಡಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರಿಂದ ಸಾಲದ ಹೊರೆ ವಸಂತ ಮೇಲೆ ಬಿದ್ದಿತು.ಪ್ರಸನ್ನಕುಮಾರ್ ಬಿಎಂಟಿಸಿ ನೌಕರನಾಗಿದ್ದರೂ ಸರ್ಕಾರದಿಂದ ಪರಿಹಾರ ಸಿಕ್ಕಿರಲಿಲ್ಲ.
ಖನ್ನತೆಗೆ ಒಳಗಾಗಿದ್ದ ವಸಂತ ಈ ಹಿಂದೆಯೂ ಹೆಸರಘಟ್ಟ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿ ದ್ದರು ಸ್ಥಳೀಯರ ನೆರವಿನಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ನನ್ನ ಸಾವಿಗೆ ನಾನೇ ಕಾರಣ, ಗಂಡನನ್ನ ಕಳೆದುಕೊಂಡ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
ನನ್ನವರು ಅಂತ ಯಾರು ಇಲ್ಲ, ಯಾರಿಗೆ ಯಾರು ಇಲ್ಲ ಪತಿ ಇಲ್ಲದಿರುವುದು ನಾವು ಸತ್ತಂತೆ ಇಂಥಾ ಕೆಟ್ಟ ಪ್ರಪಂಚದಲ್ಲಿ ಬದುಕಿರಬಾರದು ಮನೆ ಮಾರಾಟ ಮಾಡಿ ನಮ್ಮ ಸಾಲ ತೀರಿಸಿಬಿಡಿ ಎಂದು ಮರಣಪತ್ರ ಬರೆದಿಟ್ಟು ವಸಂತ ಇಬ್ಬರೂ ಮಕ್ಕಳೊಂದಿಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತಳ ತಮ್ಮ ನಂದೀಶ್ ವಸಂತ ಅವರಿಗೆ ಫೋನ್ ಮಾಡಿದ್ದು, ಕರೆ ಸ್ವೀಕರಿಸದಿದ್ದಾಗ ನೆರೆಹೊರೆಯವರ ಹತ್ತಿರ ವಿಚಾರಿಸಿದ್ದಾರೆ. ಅನುಮಾನ ಗೊಂಡ ಸ್ಥಳೀಯರು ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.