ನವದೆಹಲಿ: ಭಾರತೀಯ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಬಲವಾದ ಬದಲಾವಣೆ ತರಬಲ್ಲ “ನ್ಯಾವ್‌ಐಸಿ ಚಿಪ್” ಅನ್ನು ಬೆಂಗಳೂರು ಮೂಲದ ಎಲೆನಾ ಜಿಯೊ ಸಿಸ್ಟಮ್ಸ್ ಸಿದ್ಧಪಡಿಸಿದೆ. ಈ ಚಿಪ್ಪನ್ನು ವಾಹನಗಳು, ಶಸ್ತ್ರಾಸ್ತ್ರಗಳನ್ನು ಟ್ರ್ಯಾಕ್ ಮಾಡಲು ಬಳಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಅಮೆರಿಕದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಮೇಲಿನ ಭಾರತೀಯರ ಅವಲಂಬನೆಯನ್ನು ತಪ್ಪಿಸಬಹುದು. ಈ ಚಿಪ್ ಅನ್ನು ಗುರುವಾರ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್‌ಗೆ ಹಸ್ತಾಂತರಿಸಲಾಗಿದೆ.
ಈ ವೇಳೆ ಡಿಆರ್‌ಡಿಒ ಮುಖ್ಯಸ್ಥ ಸಮೀರ್ ವಿ. ಕಾಮತ್, ವಾಯಸೇನಾ ಮುಖ್ಯಸ್ಥ ವಿ.ಆರ್.ಚೌಧರಿ ಹಾಜರಿದ್ದರು.
ಮೊಬೈಲ್‌ಗಳು, ಕೈಯಲ್ಲಿ ಬಳಸಬಹುದಾದ ಇತರೆ ಸಾಧನಗಳಲ್ಲಿ ಈ ಚಿಪ್ ಅಳವಡಿಸಬಹುದು. ಸಾಫ್ಟ್ವೇರ್ ಆಧಾರಿತ ಈ ಚಿಪ್‌ಗೆ ಬಹಳ ಕಡಿಮೆ ವಿದ್ಯುತ್ ಸಾಕು. ಶಾಲಾ ಬಸ್‌ಗಳು, ಶಸ್ತ್ರಾಸ್ತ್ರಗಳು ಎಲ್ಲಿ ಹೋಗುತ್ತಿವೆ ಎಂದು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಕೇವಲ 12 ನ್ಯಾನೊಮೀಟರ್ ಗಾತ್ರದ ಚಿಪ್ ಅನ್ನು ಒಮ್ಮೆ ಅಳವಡಿಸಿದರೆ ಅದು ನ್ಯಾವ್‌ಐಸಿ, ಭಾರತದ ಐಆರ್‌ಎನ್‌ಎಸ್‌ಎಸ್, ಅಮೆರಿಕದ ಜಿಪಿಎಸ್, ರಷ್ಯಾದ ಗ್ಲೊನಾಸ್‌ನಿಂದ ಸಂಕೇತಗಳನ್ನು ಗ್ರಹಿಸಬಲ್ಲದು!
ತೈವಾನ್ ಕಂಪನಿ ಉತ್ಪಾದನೆ:
ಈ ಚಿಪ್‌ಗ್ಳ ಉತ್ಪಾದನೆಗೆ ಎಲೆನಾ ಜಿಯೊ ಸಿಸ್ಟಮ್ಸ್ ಕಂಪನಿ ತೈವಾನಿನ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದೆ. ಆ ಕಾರ್ಖಾನೆಯನ್ನು ಸ್ವತಃ ಎಲೆನಾ ಜಿಯೊ ಸಿಸ್ಟಮ್ಸ್ ನಿಯಂತ್ರಿಸಲಿದೆ. ಈಗಾಗಲೇ 10000 ಚಿಪ್‌ಗ್ಳು ಭಾರತಕ್ಕೆ ಬಂದಿವೆ ಎಂದು ಎಲೆನಾ ಮುಖ್ಯಸ್ಥ ಲೆ.ಕರ್ನಲ್ ವಿ.ಎಸ್.ವೇಲನ್ ಹೇಳಿದ್ದಾರೆ.