ಬೆಂಗಳೂರು: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜ್ಯೋತಿ ಬೆಳಗುವ ಮೂಲಕ ಮೊದಲ ಹಂತದ ಮೆಟ್ರೋವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗಿನ ಮಾರ್ಗಕ್ಕೆ ಹಸಿರು ಹಸಿರು ನಿಶಾನೆ ತೋರಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಅನಂತಕುಮಾರ್, ಡಿ.ವಿ. ಸದಾನಂದಗೌಡ, ವಿಧಾನಸಭೆ ಸ್ಪೀಕರ್ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಬಿಬಿಎಂಪಿ ಮೇಯರ್ ಪದ್ಮಾವತಿ, ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಸಂಸದ ಪಿ.ಸಿ. ಮೋಹನ್, ಭಾರತಕ್ಕೆ ಜಪಾನ್ ರಾಯಭಾರಿ ಕೆಂಜಿ ಹಿರಮಟ್ಸು ಉಪಸ್ಥಿತರಿದ್ದರು.
12ಕಿಲೋ ಮೀಟರ್ ಉದ್ದದ ಹಸಿರು ಮಾರ್ಗದ ಚಾಲನೆಯೊಂದಿಗೆ ಒಂದನೇ ಹಂತದ ಪೂರ್ಣ ಮಾರ್ಗದ ಸಂಚಾರಕ್ಕೆ ಚಾಲನೆ ಸಿಕ್ಕಂತಾಗಿದೆ. ಒಟ್ಟು 42.30 ಕಿ.ಮೀ ಉದ್ದದ ಮಾರ್ಗದಲ್ಲಿ ಈ ಮಾರ್ಗದ ಕಾಮಗಾರಿ ಮಾತ್ರ ಬಾಕಿ ಉಳಿದಿತ್ತು. ಇದೀಗೆ ಏಷ್ಯಾದ ಬೃಹತ್ ಮೆಟ್ರೋ ನಿಲ್ದಾಣ ಹೊಂದಿರುವ ಖ್ಯಾತಿ ಬೆಂಗಳೂರಿನದ್ದಾಗಿದೆ.
ತುಮಕೂರು ರಸ್ತೆಯ ನಾಗಸಂದ್ರದಿಂದ ಕನಸಪುರ ರಸ್ತೆಯ ಯಲಚೇನಹಳ್ಳಿಯವರೆಗಿನ 24.20 ಕಿ.ಮೀ. ಹಸಿರು ಬಣ್ಣದ ರೈಲು ಮಾರ್ಗ ಭಾನುವಾರ ಸಾಂಕೇತಿಕವಾಗಿ ಆರಂಭವಾಗಲಿದೆ. ಜತೆಗೆ ಸೋಮವಾರ ಮಧ್ಯಾಹ್ನದಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಮಾರ್ಗದಲ್ಲಿ ಒಟ್ಟಾರೆಯಾಗಿ 36 ರೈಲುಗಳು ಸಂಚಾರ ನಡೆಸಲಿವೆ.
ಇಂಟರ್‌ಚೇಂಚ್ ನಿಲ್ದಾಣವನ್ನು ಸುಮಾರು 70 ಅಡಿಗಳ ಆಳದಲ್ಲಿ ನಿರ್ಮಿಸಲಾಗಿದ್ದು, ಈ ನಿಲ್ದಾಣದವು ಒಟ್ಟು ನಾಲ್ಕು ಕೆಳ ಅಂತಸ್ತುಗಳನ್ನು ಒಳಗೊಂಡಿದೆ. ನಾಲ್ಕನೇ ಕೆಳ ಅಂತಸ್ತಿನಲ್ಲಿ ನಾಗಸಂದ್ರ – ಯಲಚೇನಹಳ್ಳಿ ನಡುವಿನ ರೈಲುಗಳು ಸಂಚಾರ ನಡೆಸಲಿದ್ದು, ಮೂರನೇ ತಳ ಅಂತಸ್ತಿನಲ್ಲಿ ಬೈಯಪ್ಪನಹಳ್ಳಿ – ಮೈಸೂರು ರಸ್ತೆ ನಡುವಿನ ರೈಲುಗಳ ಸಂಚಾರ ನಡೆಸಲಿವೆ .
ಮೂರನೇ ಅಂತಸ್ತಿನಲ್ಲಿ ಕೇವಲ ಒಂದು ಭಾಗದಲ್ಲಿ ಮಾತ್ರ ರೈಲು ಸಂಚಾರ ನಡೆಸಲಿದ್ದು, ನಾಲ್ಕನೇ ತಳ ಅಂತಸ್ತಿನ (ಐಲ್ಯಾಂಡ್) ಎರಡೂ ಕಡೆಗಳಲ್ಲಿ ನಾಗಸಂದ್ರ ಹಾಗೂ ಯಲಚೇನಹಳ್ಳಿ ಕಡೆಗೆ ಹೋಗುವ ರೈಲುಗಳು ಸಂಚಾರ ನಡೆಸಲಿವೆ. ಹೀಗಾಗಿ ಬೈಯಪ್ಪನಹಳ್ಳಿ ಹಾಗೂ ಮೈಸೂರು ರಸ್ತೆಯಿಂದ ಬರುವ ಪ್ರಯಾಣಿಕರು ನಾಗಸಂದ್ರ ಹಾಗೂ ಯಲಚೇನಹಳ್ಳಿ ಕಡೆಗೆ ಹೋಗಬೇಕಿದ್ದರೆ ಮೂರನೇ ತಳ ಅಂತಸ್ತಿನಲ್ಲಿ ಇಳಿದು, ನಾಲ್ಕನೇ ತಳ ಅಂತಸ್ತಿಗೆ ಬರಬೇಕಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದರು.