ಬೆಂಗಳೂರು: ಪೋಷಕರನ್ನು ನೋಡಲು ನಗರಕ್ಕೆ ಬಂದಿದ್ದ ಹಾಂಕಾಂಗ್ ಏರ್ಹೋಸ್ಟೆಸ್(ಗಗನಸಖ) ಉದ್ಯೋಗಿ ಯೊಬ್ಬ ಬೈಕ್ನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದುಕೊಂಡು ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರ್.ಆರ್.ನಗರ ನಿವಾಸಿ ಪ್ರಖ್ಯಾತ್ (26) ಮೃತ ಯುವಕ.
ಬುಧವಾರ ತಡರಾತ್ರಿ 1 ಗಂಟೆ ಸುಮಾರಿಗೆ ಆರ್.ಆರ್.ನಗರ ಮುಖ್ಯರಸ್ತೆಯಿಂದ ಜಯಣ್ಣ ಸರ್ಕಲ್ ಕಡೆ ಹೋಗುವಾಗ ದುರ್ಘಟನೆ ನಡೆದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಮೃತ ಪ್ರಖ್ಯಾತ್ ನಾಲ್ಕು ತಿಂಗಳಿಂದ ಹಾಂಕಾಂಗ್ ನ ವಿಮಾನವೊಂದರಲ್ಲಿ ಏರ್ಹೋಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದಷ್ಟೇ ಪೋಷಕರ ನೋಡಲು ಬೆಂಗಳೂರಿಗೆ ಬಂದಿದ್ದಾನೆ.
ಬುಧವಾರ ಬೆಳಗ್ಗೆ ಪೋಷಕರಿಗೆ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದಾನೆ. ರಾತ್ರಿ ಆರ್.ಆರ್.ನಗರ ಗೇಟ್ ಬಳಿ ಸ್ನೇಹಿತರ ಭೇಟಿಗೆಂದು ಹೋಗಿ, ತಡರಾತ್ರಿ 1 ಗಂಟೆ ಸುಮಾರಿಗೆ ವಾಪಸ್ ಬೈಕ್ನಲ್ಲಿ ಬರುವಾಗ ಜಯಣ್ಣ ಸರ್ಕಲ್ ಬಳಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಇರುವ ಮರಕ್ಕೆ ಡಿಕ್ಕಿ ಹೊಡೆದುಕೊಂಡಿದ್ದಾನೆ. ಪರಿಣಾಮ ತಲೆ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ಪೊಲೀಸರು, ಮಾರ್ಗ ಮಧ್ಯೆಯೇ ಪ್ರಖ್ಯಾತ್ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ.
ಇನ್ನು ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದರು. ಗುರುವಾರ ಕಾನೂನು ಪ್ರಕ್ರಿಯೆ ಮುಗಿಸಿ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.