Advertisement

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

10:37 AM May 03, 2024 | Team Udayavani |

ಬೆಂಗಳೂರು: ಹಣಕಾಸಿನ ವಿಚಾರವಾಗಿ ದೂರು ನೀಡಲು ಬಂದ ಮಹಿಳೆಯರ ಗುಂಪು ಕರ್ತವ್ಯ ನಿರತ ಪಿಎಸ್‌ಐ ಮತ್ತು ಇತರೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಜ್ಞಾನಭಾರತಿ ಠಾಣೆಯಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.

Advertisement

ಈ ಸಂಬಂಧ ಆಯೇಷಾ ತಾಜ್‌ (32), ಫೌಜಿಯಾ (34) ಹಾಗೂ ಆರ್ಬಿನ್‌ ತಾಜ್‌(34) ಎಂಬುವರನ್ನು ಬಂಧಿಸಲಾಗಿದೆ.

ಕೃತ್ಯದಲ್ಲಿ ಭಾಗಿಯಾಗಿದ್ದ ಶೊಯೇಬ್‌ ಹಾಗೂ ನಾಸೀರ್‌ ಎಂಬುವರು ಪರಾರಿಯಾಗಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಆರೋಪಿಗಳು ಮಹಿಳಾ ಪಿಎಸ್‌ಐ ಸುರೇಖಾ ಹಾಗೂ ಇತರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕಾಸಿನ ವಿಚಾರಕ್ಕಾಗಿ ಮೂವರು ಮಹಿಳೆಯರು ಹಾಗೂ ಶೊಯೇಬ್‌ ನಡುವೆ ಗಲಾಟೆಯಾಗಿತ್ತು ಎಂದು ಹೇಳಲಾಗಿದೆ. ಮೇ 1ರಂದು ಈ ಸಂಬಂಧ ಫೈನಾನ್ಸಿಯರ್‌ ನಾಸೀರ್‌ ಜತೆ ಎಲ್ಲರೂ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಆದರೆ, ದೂರು ನೀಡಲು ಹಿಂದೇಟು ಹಾಕಿ, ಠಾಣೆ ಮುಂಭಾಗವೇ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅದನ್ನು ಗಮನಿಸಿದ ಪಿಎಸ್‌ಐ ಸುರೇಖಾ, ದೂರು ನೀಡಬೇಕಾದರೆ, ಬಂದು ದೂರು ನೀಡಿ, ಇಲ್ಲವಾದರೆ ಪಕ್ಕಕ್ಕೆ ಹೋಗಿ ಗಲಾಟೆ ಮಾಡಿಕೊಳ್ಳಿ ಎಚ್ಚರಿಕೆ ನೀಡಿದ್ದಾರೆ.

ಕೆಲ ಹೊತ್ತು ಸುಮ್ಮನಾದ ಆರೋಪಿಗಳು ಬಳಿಕ ಮತ್ತೆ ಗಲಾಟೆ ಆರಂಭಿಸಿದ್ದು, ಅದರಿಂದ ಠಾಣಾ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಪಿಎಸ್‌ಐ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಅದರಿಂದ ಕೋಪಗೊಂಡ ಆರೋಪಿಗಳು ಪಿಎಸ್‌ಐ ಜತೆ ಜಗಳ ಆರಂಭಿಸಿದ್ದಾರೆ. ಅದು ವಿಕೋಪಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ್ದಾರೆ. ಅದನ್ನ ತಡೆಯಲು ಬಂದ ಮಹಿಳಾ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ ಮೇಲೆಯೂ ಕೈ ಮಾಡಿ ಪರಚಿ ಹಲ್ಲೆ ಮಾಡಿ ಅನುಚಿತವಾಗಿ ವರ್ತಿಸಿದ್ದಾರೆ.

ಅದನ್ನು ಪ್ರಶ್ನಿಸಿದಾಗ “ನಾವು ಮಾನವ ಹಕ್ಕುಗಳ ಸಂಘಟನೆಯವರಾಗಿದ್ದು, ನಮ್ಮ ಮೇಲೆ ಕೈ ಮಾಡಿದರೆ ಸರಿಯಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಆಗ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿ, ಎಫ್ಐಆರ್‌ ದಾಖಲಿಸಿಕೊಂಡು ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.

ಆರಂಭದಲ್ಲಿ ಆರೋಪಿಗಳು ತಪ್ಪು ಹೆಸರು ಮತ್ತು ವಿಳಾಸ ನೀಡಿದ್ದರು. ಅವರ ಬ್ಯಾಗ್‌ ಪರಿಶೀಲಿಸಿ ಆಧಾರ್‌ ಕಾರ್ಡ್‌ ಪಡೆದಾಗ ಅಸಲಿ ಹೆಸರು ಮತ್ತು ವಿಳಾಸ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ಮತ್ತೂಂದೆಡೆ ಘಟನೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಗಲಾಟೆ ನಿಯಂತ್ರಿಸಲು ಬಂದ ಠಾಣಾಧಿಕಾರಿ ರವಿ ಅವರ ಮೇಲೂ ಹಲ್ಲೆಗೆ ಮುಂದಾಗಿದ್ದರು ಎಂಬ ಮಾಹಿತಿಯಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next