ಬೆಂಗಳೂರು: ಮಾದಕವಸ್ತು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರದ ಸೈಯದ್ ಇಮ್ರಾನ್(42) ಮತ್ತು ಕೋಲಾರದ ಜಿಲ್ಲೆ ಕೆಂಡಟ್ಟಿ ಗ್ರಾಮದ ಶ್ರೀಕಾಂತ್(31) ಬಂಧಿತರು.
ಆರೋಪಿಗಳಿಂದ 3.12 ಲಕ್ಷ ರೂ. ಮೌಲ್ಯದ 51 ಕೆ.ಜಿ.ಗಾಂಜಾ ಜಪ್ತಿ ಮಾಡಲಾಗಿದೆ. ಸೆ.24ರಂದು ಕೆ.ಜಿ.ಹಳ್ಳಿ ಸಮೀಪದ ಸಂತೆ ಮೈದಾನದಲ್ಲಿ ಆರೋಪಿಗಳು ಕಾರಿನಲ್ಲಿ ಮಾದಕವಸ್ತು ಇರಿಸಿಕೊಂಡು ಮಾರಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ವೈಜಾಕ್ ನಿಂದ ಗಾಂಜಾ ಸರಬರಾಜು-ಆರೋಪಿಗಳು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಆಂಧ್ರದ ವೈಜಾಕ್‌ನಿಂದ ಪರಿಚಿತ ಡ್ರಗ್ಸ್ ಪೆಡ್ಲರ್ಗಳಿಂದ ಕಡಿಮೆ ಮೊತ್ತಕ್ಕೆ ಗಾಂಜಾ ಖರೀದಿಸಿ ಕಾರಿನಲ್ಲಿ ನಗರಕ್ಕೆ ತಂದಿದ್ದರು. ಇಲ್ಲಿ ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುವಾಗ ಸಿಕ್ಕಿಬಿದ್ದಿದ್ದಾರೆ.
ಆರೋಪಿ ಸೈಯದ್ ಇಮ್ರಾನ್ ವಿರುದ್ಧ ಈ ಹಿಂದೆ ಗೋವಿಂದಪುರ ಮತ್ತು ನೆಲಮಂಗಲ ಠಾಣೆಯಲ್ಲಿ ಎನ್ ಡಿಪಿಎಸ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಆರೋಪಿ ಜಾಮೀನು ಪಡೆದು ಹೊರ ಬಂದ ಬಳಿ ಕವೂ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.