Advertisement

ಕೊಂಬೆ ಬಿದ್ದು ವ್ಯಕ್ತಿ ಸಾವು, ಬಾಲಕಿ ಸ್ಥಿತಿ ಗಂಭೀರ

11:15 AM Mar 13, 2020 | Suhan S |

ಬೆಂಗಳೂರು: ಕೆ.ಆರ್‌.ಪುರ ಮತ್ತು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮರದ ಕೊಂಬೆ ಬಿದ್ದು ಜಲಮಂಡಳಿ ಉದ್ಯೋಗಿಯೊಬ್ಬರು ಮೃತಪಟ್ಟರೆ, ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡು ಎಚ್‌ಎಎಲ್‌ನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಕೆ.ಆರ್‌.ಪುರದ ಕೊಡಿಗೇಹಳ್ಳಿ ನಿವಾಸಿ ಶ್ರೀನಿವಾಸ್‌ (48) ಮೃತ ಜಲಮಂಡಳಿ ಉದ್ಯೋಗಿ. ರಾಮಮೂರ್ತಿ ನಗರದ ಕೌದೇನಹಳ್ಳಿ ನಿವಾಸಿ ರೆಚೆಲ್‌ ಪ್ರಿಷಾ (7) ಗಂಭೀರವಾಗಿ ಗಾಯಗೊಂಡಿರುವ ವಿದ್ಯಾ ರ್ಥಿನಿ. ಹಲಸೂರಿನ ಲಿಡೋ ಮಾಲ್‌ ಸಮೀಪ ದಲ್ಲಿರುವ ಜಲಮಂಡಳಿಯಲ್ಲಿ ಶ್ರೀನಿವಾಸ್‌ ಹಲವು ವರ್ಷಗಳಿಂದ ಅಟೆಂಡರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ಶ್ರೀನಿವಾಸ್‌ ಶಸ್ತ್ರಚಿಕಿತ್ಸೆಗೊಳಗಾಗಿ ಅವರ ಬಲಗಾಲನ್ನು ವೈದ್ಯರು ತೆಗೆದಿದ್ದಾರೆ. ಹೀಗಾಗಿ ಸುದೀರ್ಘ‌ ರಜೆಯಲ್ಲಿದ್ದರು. ಗುರುವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಕರ್ತವ್ಯಕ್ಕೆ ಹಾಜರಾಗಲು ಪತ್ನಿ ಹಾಗೂ ಪುತ್ರ ರಾಕೇಶ್‌ ಜತೆ ಕಾರಿನಲ್ಲಿ ಕಚೇರಿಗೆ ಬಂದಿದ್ದು, ಕಚೇರಿ ಆವರಣದಲ್ಲಿಯೇ ಕಾರು ನಿಲ್ಲಿಸಿದ್ದರು. ಪುತ್ರ ಹಾಗೂ ಪತ್ನಿ ಕಾರಿನಿಂದ ಇಳಿದು ಕಚೇರಿಯೊಳಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಹಳ ವರ್ಷಗಳಿಂದ ಕಚೇರಿ ಆವರಣದಲ್ಲಿರುವ ಮರದ ಭಾರೀ ಗಾತ್ರದ ಕೊಂಬೆಯೊಂದು ಕಾರಿನ ಮೇಲೆ ಬಿದ್ದಿದ್ದೆ. ಕೊಂಬೆ ಬಿದ್ದ ರಭಸಕ್ಕೆ ಕಾರಿನೊಳಗೆ ಕುಳಿತಿದ್ದ ಶ್ರೀನಿವಾಸ್‌ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಜಲಮಂಡಳಿ ಅಧಿಕಾರಿಗಳು ಅಗ್ನಿಶಾಮಕ ಸಿಬ್ಬಂದಿ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಕೊಂಬೆಯನ್ನು ತೆರವುಗೊಳಿಸಿ ಶ್ರೀನಿವಾಸ್‌ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿ ಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು. ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀವ್ರ ನಿಗಾಘಟಕದಲ್ಲಿ ಮುಂದುವರಿದ ಚಿಕಿತ್ಸೆ  :  ಮತ್ತೂಂದು ಪ್ರಕರಣದಲ್ಲಿ ತಂದೆ ಜತೆ ದ್ವಿಚಕ್ರ ವಾಹನದಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ರಚೆಲ್‌ ಪ್ರಿಷಾ(8) ಮೇಲೆ ಒಣಗಿದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್‌.ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಪ್ರಿಷಾ ಎಚ್‌ಎಎಲ್‌ನಲ್ಲಿರುವ ಮಣಿಪಾಲ್‌ ಆಸ್ಪತ್ರೆಯ ತುರ್ತಾನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿ ರಾಮಮೂರ್ತಿನಗರದ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕೊರೋನಾ ವೈರಸ್‌ ಭೀತಿ ಸಂಬಂಧ ಶಾಲೆಗೆ ರಜೆ ನೀಡಲಾಗಿತ್ತು. ಆದರೆ, ಬುಧವಾರ ಶಾಲೆಯಲ್ಲಿ ಪರೀಕ್ಷಾ ಪ್ರವೇಶ ಪತ್ರ(ಹಾಲ್‌ಟಿಕೆಟ್‌) ಕೊಡುವುದಾಗಿ ತಿಳಿಸಿದ್ದರು. ಹೀಗಾಗಿ ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ತಂದೆ ರಾಜು ಜತೆ ಬೈಕ್‌ನಲ್ಲಿ ಶಾಲೆಗೆ ಹೋಗುತ್ತಿದ್ದಳು. ಈ ವೇಳೆ ಕೌದೇನಹಳ್ಳಿಯ ಅಶ್ವತ್ಥಕಟ್ಟೆಯಲ್ಲಿರುವ ಮರದ ಒಣ ಕೊಂಬೆ ಪ್ರಿಷಾ ಮೇಲೆ ಬಿದ್ದಿದ್ದೆ. ಬಾಲಕಿ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಮೆದುಳಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು,ತುರ್ತಾನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬಿಬಿಎಂಪಿ ಮೂಲಕ ಬಾಲಕಿಗೆ ಪರಿಹಾರ ಸಿಎಂ ಭರವಸೆ : ವಿಧಾನ ಪರಿಷತ್‌: ರಾಮಮೂರ್ತಿ ನಗರದಲ್ಲಿ ಅರಳಿ ಮರದ ರೆಂಬೆ ಮುರಿದು ಗಾಯಗೊಂಡಿರುವ ಬಾಲಕಿ ಪ್ರಿಷಾ ಎಂಬುವರಿಗೆ ಬಿಬಿಎಂಪಿಯಿಂದ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಶೂನ್ಯ ವೇಳೆಯಲ್ಲಿ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಕೇಳಿದ ಪ್ರಶ್ನೆಗೆ ಲಿಖೀತ ರೂಪದ ಉತ್ತರ ನೀಡಿರುವ ಮುಖ್ಯಮಂತ್ರಿಯವರು, ರಸ್ತೆಯಲ್ಲಿದ್ದ ಮರದ ರೆಂಬೆ ಮುರಿದು ಬಿದ್ದು ಬಾಲಕಿ ಗಾಯಗೊಂಡಿರುವುದು ವಿಷಾದನೀಯ. ವಿಷಯ ತಿಳಿದ ತಕ್ಷಣ ಪಾಲಿಕೆ ಅಧಿಕಾರಿ ಗಳು ಸ್ಥಳಕ್ಕೆ ಧಾವಿಸಿ ಬಾಲಕಿಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಗಳನ್ನು ಕೈಗೊಂಡಿದ್ದಾರೆ ಎಂದರು.ಅರಳಿ ಮರದ ರೆಂಬೆಗಳು ಒಣಗಿದ್ದು, ಅವುಗಳನ್ನು ತೆರವುಗೊಳಿ ಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ಈ ಮರವನ್ನು ಪೂಜೆ ಮಾಡುತ್ತಿದ್ದು, ದೈವೀ ಅಂಶದಿಂದ ಕೂಡಿದೆ. ಆದ್ದರಿಂದ ಒಣಗಿದ ರಂಬೆಗಳನ್ನು ತೆರವುಗೊಳಿಸದಂತೆ ಸ್ಥಳೀಯರು ಅಡ್ಡಿಪಡಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಬಾಲಕಿ ಆರೋಗ್ಯ ವಿಚಾರಿಸಿದ ಮೇಯರ್‌ : ಮಣಿಪಾಲ್‌ ಆಸ್ಪತ್ರೆಗೆ ಮೇಯರ್‌ ಎಂ.ಗೌತಮ್‌ಕುಮಾರ್‌ ಹಾಗೂ ಬಿಬಿಎಂಪಿ ಆಯುಕ್ತ  ರಾದ ಬಿ.ಎಚ್‌ ಅನಿಲ್‌ಕುಮಾರ್‌ ಗುರುವಾರ ಭೇಟಿ ನೀಡಿ ಪ್ರಿಷಾ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ತಲೆ ಮೇಲೆ ಕೊಂಬ ಬಿದ್ದ ಪರಿಣಾಮ ಬಾಲಕಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು ಎಂದು ತಿಳಿಸಿದರು. ಪಾಲಿಕೆ ಅರಣ್ಯ ವಿಭಾಗದ ಸಿಬ್ಬಂದಿ ಕಳೆದ ವಾರವೇ ಮರದ ಭಾಗವನ್ನು ತೆರವುಗೊಳಿಸಲು ಮುಂದಾಗಿದ್ದರು.ಆದರೆ, ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಅನಾಹುತ ಸಂಭವಿಸಿದೆ. ಪಾಲಿಕೆ ಜೊತೆ ಸಾರ್ವಕನಿಕರು ಕೂಡ ಸಹಕಾರ ನೀಡಬೇಕು ಎಂದರು.

“ಪ್ರತಿ ನಿತ್ಯ ಓಡಾಡುವ ದಾರಿಯಲ್ಲಿ ಪುತ್ರಿ ಜತೆ ಬೈಕ್‌ನಲ್ಲಿ ಶಾಲೆಗೆ ಹೋಗುತ್ತಿದ್ದೆ. ಅದು ಹೇಗೆ ಬಿತ್ತೂ ಗೊತ್ತಿಲ್ಲ. ನನ್ನ ಮಗಳು ಬಹಳ ಸೂಕ್ಷ್ಮ. ಓದಿನಲ್ಲಿ ಅವಳು ಮೊದಲ ಸ್ಥಾನ. ಈ ಬಾರಿಯೂ ಮೊದಲ ಸ್ಥಾನದಲ್ಲಿ ಬರುವುದಾಗಿ ಹೇಳಿದ್ದಳು. ಆದರೆ, ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ನನ್ನ ಮಗಳು ಬದುಕಿ ಬಂದರೆ ಸಾಕು’ ರಾಜು, ಪ್ರಿಷಾ ತಂದೆ.

Advertisement

Udayavani is now on Telegram. Click here to join our channel and stay updated with the latest news.

Next