Advertisement

Bengaluru: ನಗರದೆಲ್ಲೆಡೆ ಟ್ರಾಫಿಕ್ ಜಾಮ್‌, ಮೆಜೆಸ್ಟಿಕ್‌ ರಷ್‌! ‌

09:33 AM Sep 07, 2024 | Team Udayavani |

ಬೆಂಗಳೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇರುವ ಕಾರಣ ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಷಾಂತರ ಮಂದಿ ಶುಕ್ರವಾರ ಸಂಜೆ ತಮ್ಮ-ತಮ್ಮ ಊರುಗಳಿಗೆ ಪ್ರಯಾಣಿಸಿದ್ದಾರೆ. ಪರಿಣಾಮ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ (ಮೆಜೆಸ್ಟಿಕ್‌) ಭಾರೀ ಜನಜಂಗುಳಿ, ಸಂಚರ ದಟ್ಟಣೆ ಕಂಡು ಬಂತು.

Advertisement

ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯೋಮಾನದವರೂ ಊರಿಗೆ ತೆರಳಲು ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಗುಂಪು ಗುಂಪಾಗಿ ಬರುತ್ತಿರುವ ದೃಶ್ಯ ಕಂಡು ಬಂತು.

ಲಕ್ಷಾಂತರ ಮಂದಿ ಕೆಎಸ್‌ಆರ್‌ಟಿಸಿ, ರಾಜಹಂಸ, ವೋಲ್ವೋ ಸೇರಿದಂತೆ ಇತರ ಬಸ್‌ಗಳಲ್ಲಿ ತಮ್ಮ-ತಮ್ಮ ಊರುಗಳಿಗೆ ಪ್ರಯಾಣಿಸಿದ್ದಾರೆ. ಪರಿಣಾಮ ಮೆಜೆಸ್ಟಿಕ್‌ ಸುತ್ತ-ಮುತ್ತ ಭಾರೀ ಜನ ಸಂದಣಿ ಉಂಟಾಯಿತು. ಮೆಜೆಸ್ಟಿಕ್‌ ಸುತ್ತ-ಮುತ್ತ ಉಂಟಾದ ಸಂಚಾರ ದಟ್ಟಣೆ ನಿರ್ವಹಿಸಲು ಸಂಚಾರ ಠಾಣೆ ಪೊಲೀಸರು ಹರಸಾಹಸಪಟ್ಟರು. ಗೂಡ್‌ಶೆಡ್‌ ರಸ್ತೆಯಿಂದ ಆನಂದ್‌ರಾವ್‌ ವೃತ್ತದ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂತು. ಅಲ್ಲದೇ ಮೆಜೆಸ್ಟಿಕ್‌ ಸುತ್ತ ಮುತ್ತಲ ಎಲ್ಲ ರಸ್ತೆಗಳಲ್ಲಿ ಶುಕ್ರವಾರ ಸಂಚಾರ ದಟ್ಟಣೆ ಅಧಿಕವಾಗಿತ್ತು. ‌

ಟ್ರಾಫಿಕ್ ಜಾಮ್‌ಗೆ ಸಿಲುಕಿದ ವಾಹನ ಸವಾರರು ಹಿಡಿಶಾಪ ಹಾಕುತ್ತಾ ನಿಧಾನಗತಿಯಲ್ಲಿ ಮುಂದೆ ಸಾಗಿದರು. ಮತ್ತೂಂದೆಡೆ ಬ್ಯಾಗ್‌ ಹಿಡಿದು ತಮ್ಮ ಊರುಗಳಿಗೆ ತೆರಳುವ ಉತ್ಸಾಹದಲ್ಲಿದ್ದ ಜನ ಬಸ್‌ ಹುಡುಕುತ್ತಾ ಅತ್ತಿಂದಿತ್ತ ಸಾಗಿ ಪರದಾಡುವ ದೃಶ್ಯಗಳೂ ಕಂಡು ಬಂದವು. ಇನ್ನು ಎಲ್ಲ ಬಸ್‌ಗಳಲ್ಲೂ ಪ್ರಯಾಣಿಕರು ನಿಂತುಕೊಂಡೇ ಸಾಗಿದರೆ, ಕೆಲವರು ಬಸ್‌ ಸೀಟಿಗಾಗಿ ಹೆಣಗಾಡಿದರು. ಇನ್ನು ಮೆಜೆಸ್ಟಿಕ್‌ ಸುತ್ತ-ಮುತ್ತಲಿನ ಅಂಗಡಿಗಳಿಗೆ ಭರ್ಜರಿ ವ್ಯಾಪಾರವಾದರೆ, ಆಟೋ ಚಾಲಕರು ದುಪ್ಪಟ್ಟು ಬಾಡಿಗೆ ಪಡೆದು ಪ್ರಯಾಣಿಕರನ್ನು ಮೆಜೆಸ್ಟಿಕ್‌ಗೆ ಕರೆತರುತ್ತಿರುವುದು ಕಂಡು ಬಂತು. ಹಬ್ಬಕ್ಕೆ ಊರಿಗೆ ತೆರಳುವ ಭರದಲ್ಲಿದ್ದ ಜನ ಬಾಡಿಗೆಗೆ ಚೌಕಾಸಿ ಮಾಡುವುದಿಲ್ಲ ಎಂಬುದನ್ನು ಅರಿತಿದ್ದ ಆಟೋ ಚಾಲಕರು ಹೆಚ್ಚಿನ ಬಾಡಿಗೆ ಪಡೆದರು.

Advertisement

ರೈಲ್ವೆ ನಿಲ್ದಾಣದಲ್ಲೂ ಗಿಜಿಗುಡುತ್ತಿದ್ದ ಜನ ಜಂಗುಳಿ: ಮೆಜೆಸ್ಟಿಕ್‌ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವು ಪ್ರಯಾಣಿಕರಿಂದ ಗಿಜಿಗುಡುತ್ತಿತ್ತು. ಯಾವುದೇ ಅಹಿತಕರ ಪ್ರಕರಣ ನಡೆಯದಂತೆ ಆರ್‌ ಪಿಎಫ್ ಹಾಗೂ ರೈಲ್ವೆ ಪೊಲೀಸರು ಹದ್ದಿನ ಕಣ್ಣಿಟ್ಟಿರುವುದು ಕಂಡು ಬಂತು. ಇನ್ನು ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲೂ ಹೆಚ್ಚುವರಿ ಪೊಲೀಸರು ಭದ್ರತೆಗಿರುವುದು ಕಂಡು ಬಂತು. ಶುಕ್ರವಾರ ರಾತ್ರಿಯಿಡೀ ಮೆಜೆಸ್ಟಿಕ್‌ ಜನ ಜಂಗುಳಿಯಲ್ಲಿ ತುಂಬಿ ತುಳುಕುತ್ತಿತ್ತು. ಇನ್ನು ದೂರದೂರುಗಳಿಗೆ ತೆರಳುವ ಬಸ್‌ಗಳು ಟ್ರಾಫಿಕ್‌ ಜಾಮ್‌ಗೆ ಸಿಲುಕಿ ಸಮಯಕ್ಕೆ ಸರಿಯಾಗಿ ಬೆಂಗಳೂರಿಂದ ಹೊರಡಲಾಗದೇ ಒದ್ದಾಡುತ್ತಿರುವುದು ಸಾಮಾನ್ಯವಾಗಿತ್ತು.

ವಾಹನ ಸವಾರರ ಪರದಾಟ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ತಮ್ಮ ವಾಹನಗಳಲ್ಲೇ ಲಕ್ಷಾಂತರ ಮಂದಿ ಊರಿಗೆ ತೆರಳಿದ ಹಿನ್ನೆಲೆಯಲ್ಲಿ ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಹೊಸೂರು ರಸ್ತೆಯಲ್ಲಿ ಶುಕ್ರವಾರ ರಾತ್ರಿ ಹೆಚ್ಚಿನ ಸಂಚಾರ ದಟ್ಟಣೆ ಕಂಡು ಬಂತು. ಸಾವಿರಾರು ವಾಹನಗಳು ತಾಸುಗಟ್ಟಲೆ ಟ್ರಾಫಿಕ್‌ನಲ್ಲಿ ಸಾಲುಗಟ್ಟಿ ನಿಂತು ಪರದಾಡಿದವು. ಸಂಚಾರ ಠಾಣೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನಿಸಿದರೂ ಹೆಚ್ಚಿನ ಪ್ರಮಾಣದ ವಾಹನಗಳು ಏಕಕಾಲಕ್ಕೆ ರಸ್ತೆಗಿಳಿದ ಹಿನ್ನೆಲೆಯಲ್ಲಿ ಭಾರಿ ದಟ್ಟಣೆ ಕಂಡು ಬಂತು.

ಸೆಟಲೈಟ್‌, ಶಾಂತಿನಗರದಲ್ಲೂ ಫ‌ುಲ್‌ ರಶ್‌ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕದವರಲ್ಲದೇ ಬೆಂಗಳೂರಿನಲ್ಲಿ ನೆಲೆಸಿರುವ ಹೊರ ರಾಜ್ಯದ ನಿವಾಸಿಗಳೂ ತಮ್ಮ ಊರುಗಳಿಗೆ ಶುಕ್ರವಾರ ಮರಳಿದ್ದಾರೆ. ಹೀಗಾಗಿ ಶಾಂತಿನಗರ, ಸೆಟಲೈಟ್‌ ಬಸ್‌ ನಿಲ್ದಾಣ, ಯಶವಂತಪುರ ಬಸ್‌ ನಿಲ್ದಾಣಗಳಲ್ಲೂ ತಡರಾತ್ರಿವರೆಗೂ ಪ್ರಯಾಣಿಕರದ್ದೇ ಕಾರುಬಾರು ಜೋರಾಗಿತ್ತು. ಪ್ರತಿನಿತ್ಯ ರಾತ್ರಿ ವೇಳೆ ಖಾಲಿ-ಖಾಲಿಯಾಗಿ ಬಿಕೋ ಎನ್ನುತ್ತಿದ್ದ ಸೆಟಲೈಟ್‌ ಹಾಗೂ ಶಾಂತಿನಗರ ಬಸ್‌ ನಿಲ್ದಾಣವು ಶುಕ್ರವಾರ ತಡರಾತ್ರಿವರೆಗೂ ಪ್ರಯಾಣಿಕರಿಂದ ತುಂಬಿತ್ತು. ಬಸ್‌ಗಳು ಒಂದಾದ ಮೇಲೊಂದರಂತೆ ಪ್ರಯಾಣಿಕರನ್ನು ಮುಂಜಾನೆವರೆಗೂ ಕರೆದೊಯ್ಯುತ್ತಿರುವುದು ಕಂಡು ಬಂತು. ಇದರ ನಡುವೆ ಗಾಂಧಿನಗರ, ಪೀಣ್ಯ, ಮಲ್ಲೇಶ್ವರ, ತುಮಕೂರು ರಸ್ತೆಯುದ್ದಕ್ಕೂ ಸಾಲು-ಸಾಲಾಗಿ ಸಾಗುತ್ತಿದ್ದ ಖಾಸಗಿ ಬಸ್‌ಗಳ ಹಾರನ್‌ ಶಬ್ದಗಳು ಕಿವಿಗಡಚ್ಚುತ್ತಿದ್ದವು.

ನೆಲಮಂಗಲದ ಟೋಲ್‌ ಬಳಿ ಸಾಲುಗಟ್ಟಿ ನಿಂತ ವಾಹನಗಳು ನೆಲಮಂಗಲದ ಟೋಲ್‌ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟೋಲ್‌ ದಾಟಲು ಸಾಕಷ್ಟು ಸಮಯ ಹಿಡಿಯಿತು. ಟಿ.ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್‌, ಪೀಣ್ಯ, ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೈಸೂರು ರಸ್ತೆಯಲ್ಲೂ ವಾಹನಗಳು ಸಾಲಾಗಿ ನಿಂತಿದ್ದು ಕಂಡುಬಂತು. ಮೆಟ್ರೋ ಇಲ್ಲದೇ ಹೈರಾಣು: ಶುಕ್ರವಾರ ಪೀಣ್ಯ ಇಂಡಸ್ಟ್ರಿಯ ಮೆಟ್ರೋ ನಿಲ್ದಾಣದಿಂದ ನಾಗಸಂದ್ರವರೆಗೂ ಮೆಟ್ರೊ ಸಂಚಾರ ಇರಲಿಲ್ಲ. ಎಲೆಕ್ಟ್ರಿಕ್‌ ಸಿಗ್ನಲ್‌ ಪರೀಕ್ಷೆಗೆಂದು ಮೆಟ್ರೋ ಸಂಚಾರ ಸ್ಥಗಿತ ಮಾಡಲಾಗಿತ್ತು. ಇದರಿಂದ ಸಾವಿರಾರು ಪ್ರಯಾಣಿಕರು ಹೈರಾಣಾದರು.

Advertisement

Udayavani is now on Telegram. Click here to join our channel and stay updated with the latest news.

Next