Advertisement

Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!

01:50 AM Sep 16, 2024 | Team Udayavani |

ಉಡುಪಿ: ಜಿಲ್ಲೆಯಾದ್ಯಂತ ಹಮ್ಮಿಕೊಂಡ ಮಾನವ ಸರಪಳಿಗೆ ಸಾರ್ವಜನಿಕರು ಸಹಿತ ವಾಹನ ಸವಾರರು ಹೈರಾಣಾದ ಘಟನೆ ರವಿವಾರ ನಡೆಯಿತು.
ಕನ್ನರ್ಪಾಡಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬಳಿಯೇ ವೇದಿಕೆ ನಿರ್ಮಿಸಿದ ಕಾರಣ ಉಡುಪಿ ನಗರದೊಳಗೆ ಹೋಗುವ ವಾಹನಗಳು ಕರಾವಳಿ ಬೈಪಾಸ್‌ ಮೂಲಕ ತೆರಳಬೇಕಾಯಿತು. ಇದರಿಂದಾಗಿ ಉಡುಪಿ-ಕನ್ನರ್ಪಾಡಿ ಸಂಪರ್ಕ ಸಂಪೂರ್ಣ ಸ್ತಬ್ಧವಾಗಿತ್ತು.

Advertisement

ಸುಮಾರು 1 ಗಂಟೆಗೂ ಅಧಿಕ ಕಾಲ ರಸ್ತೆ ಬ್ಲಾಕ್‌ ಮಾಡಿದ ಕಾರಣ ಕೆಲವೆಡೆ ಸಾರ್ವಜನಿಕರು ಹಾಗೂ ಪೊಲೀಸರೊಂದಿಗೆ ಮಾತಿನ ಚಕಮಕಿಯೂ ನಡೆಯಿತು. ರವಿವಾರ ಆದ ಕಾರಣ ನಗರ ಸಹಿತ ಜಿಲ್ಲೆಯ ವಿವಿಧೆಡೆ ಹಲವಾರು ಕಾರ್ಯಕ್ರಮಕ್ಕೆ ತೆರಳಬೇಕಿದ್ದವರು ವಿಳಂಬವಾಗಿ ತೆರಳಿದರೆ ಮತ್ತೆ ಕೆಲವು ಮಂದಿ ಸಂಚಾರವನ್ನೇ ಮೊಟಕುಗೊಳಿಸಿದ ಘಟನೆಯೂ ನಡೆಯಿತು.

ಸಂತೆಕಟ್ಟೆಯಲ್ಲಿ “ಟ್ರಾಫಿಕ್‌ ಸಂತೆ’
ದಿನಂಪ್ರತಿ ಟ್ರಾಫಿಕ್‌ ದಟ್ಟನೆ ಕಂಡುಬರುವ ಸಂತೆಕಟ್ಟೆಯಲ್ಲಿ ರವಿವಾರ 1 ಗಂಟೆಗೂ ಅಧಿಕ ಕಾಲ ವಾಹನಗಳು ನಿಂತಲ್ಲಿಯೇ ಇದ್ದವು. ಹೆದ್ದಾರಿ ಸಹಿತ ಸರ್ವಿಸ್‌ ರಸ್ತೆಯಲ್ಲಿ ಒಂಚೂರು ಜಾಗವಿಲ್ಲದಷ್ಟು ಸ್ಥಿತಿ ಉಂಟಾಗಿತ್ತು. ಈ ನಡುವೆ ಸಂತೆಕಟ್ಟೆಯ ಸಂತೆಮಾರುಕಟ್ಟೆ ಭಾಗದ ರಸ್ತೆಯೂ ಸಂಪೂರ್ಣ ಬ್ಲಾಕ್‌ ಆದ ಪರಿಣಾಮ ವಾಹನ ಸವಾರರು ಎತ್ತ ಸಾಗಬೇಕೆಂಬ ಗೊಂದಲಕ್ಕೆ ಉಂಟಾದರು. ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ ಅವರೂ ಅಸಹಾಯಕರಾಗಿದ್ದರು. ಈ ನಡುವೆ ಹಲವಾರು ಖಾಸಗಿ ಬಸ್‌ಗಳು ತಮ್ಮ ಟ್ರಿಪ್‌ಗ್ಳನ್ನು ಕಡಿತಗೊಳಿಸಿದ ಘಟನೆಯೂ ನಡೆಯಿತು.

ಹೆ. ಸಂಪರ್ಕ ರಸ್ತೆಗಳ ಬಂದ್‌
ಹೆದ್ದಾರಿಯ ಸಂಪರ್ಕ ರಸ್ತೆಗಳನ್ನು ಬಂದ್‌ ಮಾಡಲಾದ ಕಾರಣ ಉದ್ಯಾವರ, ಕಡೆಕಾರು, ಕುತ್ಪಾಡಿ, ಕಿದಿಯೂರು ಮೊದಲಾದ ಪ್ರದೇಶಗಳ ಜನರು ಗಂಟೆಗಟ್ಟಲೆ ಕಾದು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬಂತು. ಪೂರ್ವಮಾಹಿತಿ ನೀಡಿದ್ದರೆ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದರು.

ಬಿಸಿಲಿನಲ್ಲಿ ಕಾದ ವಿದ್ಯಾರ್ಥಿಗಳು
9.57ರಿಂದ 10 ಗಂಟೆಯವರೆಗೆ ಮಾನವ ಸರಪಳಿಯ ವೇಳೆಯಾಗಿತ್ತು. ಆದರೆ 10.15ರವರೆಗೂ ಬಿಸಿಲಿನಲ್ಲಿಲ್ಲೇ ವಿದ್ಯಾರ್ಥಿಗಳು ಕಾಯುತ್ತಿದ್ದರು. ಸಾರ್ವಜನಿಕರಿಗೆ ತ್ಯಾಜ್ಯ ಎತ್ತುವ ವಾಹನದಲ್ಲಿ ಸಿಹಿತಿಂಡಿಯನ್ನು ವಿತರಿಸಲು ರವಾನಿಸಲಾಗಿತ್ತು. ಇದನ್ನು ಕಂಡ ಕೆಲ ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಚಾಲಕರು ಆಕ್ಷೇಪಿಸಿದರು. ಸಿಹಿಯನ್ನು ಸ್ವೀಕರಿಸದೆ ಅಲ್ಲಿಯೇ ಬಿಟ್ಟು ತೆರಳಿದ್ದೂ ಕಂಡು ಬಂತು.

Advertisement

ಸರತಿ ಸಾಲು
ನಿಟ್ಟೆ, ಕಾರ್ಕಳ, ಬಂಗ್ಲೆಗುಡ್ಡೆಗಳಿಂದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಅಧ್ಯಾಪಕರು ಶಾಲಾ ವಾಹನದಲ್ಲಿ ಆಗಮಿಸಿ ಮಾನವ ಸರಪಳಿ ಯಲ್ಲಿ ಸೇರಿಕೊಂಡರೂ ಸರಪಳಿ ಪೂರ್ಣವಾಗಿರದೇ ಪ್ರತ್ಯೇಕವಾಗಿರುವುದು ಕಂಡು ಬಂತು. ಬಿಸಿಲಿನ ಆಘಾತದಲ್ಲಿ ಕೆಲ ಮಕ್ಕಳು ಪ್ರಜ್ಞೆ ತಪ್ಪಿ ಬಿದ್ದಾಗಲೂ ಪ್ರಥಮ ಚಿಕಿತ್ಸಕರು ಸ್ಥಳದಲ್ಲಿರದೇ ಎಲ್ಲವೂ ಅಯೋಮಯವೆನಿಸಿತು. ಪಡುಬಿದ್ರಿ ಜಂಕ್ಷನ್‌ನಿಂದ ಹೆಜಮಾಡಿವರೆಗೆ ವಾಹನಗಳ ಸರತಿ ಒಂದೆಡೆಯಾದರೆ ಮತ್ತೂಂದು ಕಡೆ ಎರ್ಮಾಳಿನವರೆಗೂ ವಾಹನಗಳು ನಿಂತಿದ್ದವು. ಮಾನವ ಸರಪಳಿ ಮುಗಿದ ಬಳಿಕ ಸ್ಥಳೀಯ ಗ್ರಾಮ ಪಂಚಾಯತ್‌ಗಳ ಡಿ ಗ್ರೂಪ್‌ ನೌಕರರು ಸ್ವತ್ಛತೆಯಲ್ಲಿ ಭಾಗಿಯಾಗಿರುವುದು ಕಂಡು ಬಂತು.

ಪಡುಬಿದ್ರಿ: ಮೂವರು ವಿದ್ಯಾರ್ಥಿನಿಯರಿಗೆ ಗಾಯ
ಪಡುಬಿದ್ರಿ: ತೆಂಕ ಸರಕಾರಿ ಪ್ರೌಢಶಾಲಾ ಮೂವರು ವಿದ್ಯಾರ್ಥಿನಿಯರು ರಸ್ತೆ ದಾಟುತ್ತಿರುವಾಗ ಕಾರು ಢಿಕ್ಕಿಯಾಗಿ ರಸ್ತೆಗೆ ಬಿದ್ದು ತರಚಿದ ಗಾಯ
ಗಳೊಂದಿಗೆ ಪಡುಬಿದ್ರಿ ಪ್ರಾ.ಆ. ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮಧ್ಯಾಹ್ನದ ವೇಳೆ ಮನೆಗೆ ಹಿಂದಿರುಗಿದ್ದಾರೆ. ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಯಾಯ ಶಾಲಾ-ಶಿಕ್ಷಕಿಯರಿಗೆ ಶಾಲಾ ವಿದ್ಯಾರ್ಥಿಗಳ ಸಾಥ್‌ ನಿಭಾವಣೆಗೆ ಅವಕಾಶ ನೀಡಲಾಗಿರಲಿಲ್ಲ. ಎರ್ಮಾಳು ಶಿಕ್ಷಕಿಯರಿಗೆ ಹೆಜಮಾಡಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಮಂಗಳೂರು ಹೆದ್ದಾರಿ ಬ್ಲಾಕ್‌; ಬಸವಳಿದ ಪ್ರಯಾಣಿಕರು
ಮಂಗಳೂರು: ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರವಿವಾರ ಮಾನವ ಸರಪಳಿ ನಡೆದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಮೂರ್‍ನಾಲ್ಕು ತಾಸುಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಜಂಕ್ಷನ್‌ ಸೇರಿದಂತೆ ಹಲವು ಕಡೆ ಪದೇ ಪದೇ ವಾಹನಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.

ಮೂಲ್ಕಿ, ಹಳೆಯಂಗಡಿ, ಸುರತ್ಕಲ್‌, ಕುಳಾಯಿ, ಬೈಕಂಪಾಡಿ, ಕೊಟ್ಟಾರ, ನಂತೂರು, ಪಡೀಲ್‌ ಸೇರಿದಂತೆ ಜಂಕ್ಷನ್‌ಗಳಲ್ಲಿ ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡವು. ಸರಪಳಿ ಆರಂಭಕ್ಕೂ ಮುನ್ನವೇ ಹಲವು ಜಂಕ್ಷನ್‌ಗಳಲ್ಲಿ ಸಂಚಾರ ಅಸಾಧ್ಯವಾಯಿತು. ಕೆಲವೆಡೆ ಪೊಲೀಸರು ಪೂರ್ವಭಾವಿಯಾಗಿ ಸೂಚನೆ ನೀಡಿದರೂ ಸಂಚಾರ ಸುಗಮವಾಗಲಿಲ್ಲ. ಸರಪಳಿ ಮುಗಿಯುವವರೆಗೆ ಮಾತ್ರವಲ್ಲದೆ, ಮುಗಿದ ಅನಂತರವೂ ಸಂಚಾರ ದಟ್ಟಣೆಯಿಂದ ಚಾಲಕರು, ಪ್ರಯಾಣಿಕರು ಕಂಗಾಲಾದರು.

ಹೆದ್ದಾರಿಗೆ ಸಮಾನಾಂತರವಾದ ಸರ್ವೀಸ್‌ ರಸ್ತೆಗಳಲ್ಲಿಯೂ ಟ್ರಾಫಿಕ್‌ ಜಾಮ್‌ ಆಗಿ ಸಮಸ್ಯೆ ತಲೆದೋರಿತು. ಹೆದ್ದಾರಿಯ ಒಂದು ಬದಿಯಲ್ಲಿ ಮಾನವ ಸರಪಳಿಗೆ ಅವಕಾಶ ಮಾಡಿಕೊಟ್ಟು ಆ ಭಾಗದಲ್ಲಿ ವಾಹನ ಸಂಚಾರ ಪೂರ್ಣ ನಿರ್ಬಂಧಿಸಲಾಗಿತ್ತು. ಮತ್ತೂಂದು ಬದಿಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದಾಗ್ಯೂ ಮಧ್ಯಾಹ್ನ 12 ಗಂಟೆಯವರೆಗೂ ಪದೇ ಪದೇ ವಾಹನ ಸಂಚಾರ ಸ್ಥಗಿತಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next