ಬೆಂಗಳೂರು: ಮೋಜಿನ ಜೀವನಕ್ಕಾಗಿ ರಾತ್ರಿ ವೇಳೆ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ರವಿ ಅಲಿಯಾಸ್ ಪ್ರವೀಣ್ ಅಲಿಯಾಸ್ ಕರಿಯಾ(27) ಮತ್ತು ಮಂಡ್ಯ ಮೂಲದ ಅರುಣ್(19) ಬಂಧಿತರು. ಆರೋಪಿಗಳಿಂದ 31 ಲಕ್ಷ ರೂ. ಮೌಲ್ಯದ 478 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಬ್ಬರು ಕೆಲ ವರ್ಷಗಳಿಂದ ಸ್ನೇಹಿತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಠಾಣೆ ವ್ಯಾಪ್ತಿಯ ಶ್ರೀನಗರದಲ್ಲಿ ವಾಸವಾಗಿರುವ ದೂರುದಾರರು, ಮೇ 23ರಂದು ಮುಂಜಾನೆ 5 ಗಂಟೆಗೆ ಎದ್ದು ಮನೆ ಬಾಗಿಲು ಸ್ವಚ್ಛಗೊಳಿಸಿ, ಬಾಗಿಲ ಚೀಲಕ ಹಾಕದೆ ಚಿನ್ನದ ಸರವನ್ನು ಹಾಸಿಗೆ ಮೇಲೆ ಇಟ್ಟು ಸ್ನಾನಕ್ಕೆ ತೆರಳಿದ್ದರು. ಸ್ನಾನ ಮುಗಿಸಿ ಕೆಲ ಹೊತ್ತಿನ ಬಳಿಕ ಬಂದು ನೋಡಿದಾಗ ಚಿನ್ನದ ಸರ ಕಳುವಾಗಿತ್ತು. ಈ ಸಂಬಂಧ ದೂರು ದಾಖಲಿಸಿದ್ದರು.
ಈ ಮಧ್ಯೆ ಶ್ರೀನಗರದ ಬಸ್ ನಿಲ್ದಾಣ ಸಮೀಪದಲ್ಲಿ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಈ ಮಾಹಿತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಕೃತ್ಯ ಬಾಯಿಬಿಟ್ಟಿದ್ದಾರೆ. ಅಲ್ಲದೆ, ಆರೋಪಿಗಳು ಈ ಹಿಂದೆಯೂ ಮಂಡ್ಯ, ಮೈಸೂರು ಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಮನೆಗಳ ಬೀಗ ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಮೋಜು ಮಸ್ತಿಗಾಗಿ ಕಳ್ಳತನ ಆರೋಪಿಗಳು ಕಳವು ವಸ್ತುಗಳನ್ನು ಫೈನಾನ್ಸ್ ಹಾಗೂ ಚಿನ್ನಾಭರಣ ಮಳಿಗೆಗಳಲ್ಲಿ ಅಡಮಾನ ಇಟ್ಟು ಬಂದ ಹಣದಲ್ಲಿ ಮದ್ಯ ಸೇವನೆ, ಪ್ರವಾಸಿ ತಾಣಗಳಿಗೆ ಭೇಟಿ ಹಾಗೂ ಇತರೆ ಶೋಕಿಗಾಗಿ ವ್ಯಯಿಸಿ ಜೀವನ ನಡೆಸುತ್ತಿದ್ದರು. ಕಳವು ಚಿನ್ನಾಭರಣಗಳನ್ನು ಮೈಸೂರು, ಮಂಡ್ಯದ ಕೆಲ ಜ್ಯುವೆಲ್ಲರಿ ಶಾಪ್ಗಳಲ್ಲಿ ಅಡಮಾನ ಇಟ್ಟಿರುವುದು ಗೊತ್ತಾಗಿ, ಎಲ್ಲವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು