ಬೆಂಗಳೂರು: ಬಿಎಂಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮತ್ತು ಕಾರುಗಳಿಗೆ ಢಿಕ್ಕಿ ಹೊಡೆದ ಘಟನೆ ಸೋಮವಾರ (ಆ.12) ನಡೆದಿದೆ. ಘಟನೆಯಲ್ಲಿ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.
ಹೆಬ್ಬಾಳ ಫ್ಲೈಓವರ್ ಮೇಲೆ ಬಿಎಂಟಿಸಿ ಬಸ್ ಈ ರೀತಿ ಢಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯಗಳು ಬಸ್ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಮಾನ ನಿಲ್ದಾಣದಿಂದ ನಗರದೊಳಗೆ ಬರುತ್ತಿದ್ದ ವೋಲ್ವೋ ಬಸ್ ಬೈಕ್ ಮತ್ತು ಕಾರುಗಳಿಗೆ ಢಿಕ್ಕಿ ಹೊಡೆದಿದೆ. ವೋಲ್ವೋ ಬಸ್ಸನ್ನು ಒಂದು ಕೈಯಿಂದ ಚಲಾಯಿಸುತ್ತಿರುವ ವ್ಯಕ್ತಿಯನ್ನು ವೀಡಿಯೊ ತೋರಿಸುತ್ತದೆ.
ಟ್ರಾಫಿಕ್ ನಲ್ಲಿ ವಾಹನಗಳು ನಿಲ್ಲುತ್ತಿದ್ದಂತೆ ಬಸ್ ನಿಲ್ಲಿಸಬೇಕಿದ್ದ ಚಾಲಕ ಬಸ್ಸನ್ನು ನುಗ್ಗಿಸಿಕೊಂಡು ಹೋಗಿದ್ದು ನಾಲ್ಕು ಕಾರುಗಳು ಮತ್ತು ಐದು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾನೆ.
ಕೊನೆಗೆ ಸುಮಾರು 10 ಸೆಕೆಂಡ್‌ಗಳ ನಂತರ ಬಸ್ ನಿಂತಿತು. ಈ ವೇಳೆ ಒಂದು ಕಾರು ಹಲವಾರು ಮೀಟರ್ ಗಳಷ್ಟು ಎಳೆಯಲ್ಪಟ್ಟಿತು.
ಬಸ್ಸಿನ ಕಂಡಕ್ಟರ್ ಡ್ರೈವರ್ ಸೀಟಿನತ್ತ ಧಾವಿಸಿ, ಏಕೆ ಬ್ರೇಕ್ ಹಾಕುತ್ತಿಲ್ಲ ಎಂದು ಕೇಳುತ್ತಿರುವುದು ಕೂಡ ವಿಡಿಯೋದಲ್ಲಿದೆ.
ಚಾಲಕನು ಬ್ರೇಕ್ ಒತ್ತುವ ಬದಲು ಎಕ್ಸಿಲೇಟರ್ ಗೆ ಕಾಲಿಟ್ಟಿದ್ದ ಎನ್ನಲಾಗಿದೆ.