Advertisement

“ಬೆಂಗಳೂರು ಹಂಸ’ಕ್ಕೆ ಐಟಿ-ಬಿಟಿ ರೆಕ್ಕೆಗಳು…!

09:59 PM Nov 17, 2021 | Team Udayavani |

ಬೆಂಗಳೂರು: ನಗರದಲ್ಲಿ ಸುಮಾರು ಎರಡು ಮಿಲಿಯನ್‌ ಸಾಫ್ಟ್ ವೇರ್‌ ಎಂಜಿನಿಯರ್‌ಗಳಿದ್ದರೆ, ಒಂದು ಮಿಲಿಯನ್‌ ಜೈವಿಕ ತಂತ್ರಜ್ಞರಿದ್ದಾರೆ. ಈ ಎರಡೂ ಬಲಿಷ್ಠ ರೆಕ್ಕೆಗಳ ಸಹಾಯದಿಂದ ತಂತ್ರಜ್ಞಾನ ರಾಜಧಾನಿ “ಬೆಂಗಳೂರು ಹಂಸ’ವನ್ನು ಅತಿ ಎತ್ತರಕ್ಕೆ ಕೊಂಡೊಯ್ಯೋಣ…!

Advertisement

– ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಬುಧವಾರ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಹಂಸದ ಪರಿಕಲ್ಪನೆಯೊಂದಿಗೆ ಹೀಗೆ ಸಾಹಿತ್ಯಿಕವಾಗಿ ವಿಶ್ಲೇಷಿಸಿ ಗಮನಸೆಳೆದರು. ಇದಕ್ಕೆ ಕರತಾಡನವೂ ಮೊಳಗಿದವು. ಈ ಹಂಸದ ಹೋಲಿಕೆಗೆ ಪೀಠಿಕೆ ಇಟ್ಟವರು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ನಂತರ ಉಳಿದವರು ಅದಕ್ಕೆ ರೆಕ್ಕೆ ಕಟ್ಟಿದವರು ವಿಜನ್‌ ಗ್ರೂಪ್‌ಗಳ ಅಧ್ಯಕ್ಷರು.

ಉದ್ಘಾಟನೆ ನಂತರ ನಡೆದ ಗೋಷ್ಠಿಯಲ್ಲಿ “ಬೆಂಗಳೂರು ಐಟಿ, ಬಿಟಿ, ಸ್ಟಾರ್ಟ್‌ಅಪ್‌, ಇನ್ನೋವೇಷನ್‌ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇಡೀ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಹಾಗಂತ, ಮೈಮರೆತು ಕುಳಿತುಕೊಳ್ಳುವಂತಿಲ್ಲ. ಈ ಸ್ಥಾನವನ್ನು ಕಾಯ್ದುಕೊಳ್ಳುವುದರ ಜತೆಗೆ ಮತ್ತಷ್ಟು ಪ್ರಗತಿ ಸಾಧಿಸಬೇಕಾದರೆ, ಲಭ್ಯವಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅವಶ್ಯಕತೆ ಇದೆ. ಇದಕ್ಕಾಗಿ ಭವಿಷ್ಯದಲ್ಲಿ ಟೆಕ್‌ ಸಮಿಟ್‌ ಇನ್ನಷ್ಟು ವ್ಯಾಪಕವಾಗಿ ವಿಸ್ತಾರಗೊಳ್ಳಬೇಕು’ ಎಂಬ ಕೂಗು ತಂತ್ರಜ್ಞಾನ ದಿಗ್ಗಜರಿಂದ ಒಕ್ಕೊರಲಿನಿಂದ ಕೇಳಿಬಂತು.

ರಾಜ್ಯ ಐಟಿ ವಿಜನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌ ಮಾತನಾಡಿ, “ಬೆಂಗಳೂರು ಭಾರತದ ತಂತ್ರಜ್ಞಾನಗಳ ರಾಜಧಾನಿ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಇದನ್ನು ಕಾಯ್ದುಕೊಳ್ಳಬೇಕಾದರೆ, ಟೆಕ್‌ ಸಮಿಟ್‌ ಇನ್ನಷ್ಟು ವಿಸ್ತಾರಗೊಳ್ಳಬೇಕು. ಮತ್ತಷ್ಟು ತಂತ್ರಜ್ಞಾನಗಳು, ಆವಿಷ್ಕಾರಗಳು, ಹೊಸ ಸ್ಪೀಕರ್‌ಗಳನ್ನು ಇದಕ್ಕೆ ಕರೆತರಬೇಕು. ಈಗಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದರು.

ಇದನ್ನೂ ಓದಿ:ಕಾಂಗ್ರೆಸ್‌ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ: ಜೆಪಿ ನಡ್ಡಾ

Advertisement

ಸ್ಟಾರ್ಟ್‌ಅಪ್‌ ವಿಜನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ಮಾತನಾಡಿ, “90ರ ದಶಕದಲ್ಲಿ ಚೀನಾದ ಕಾಲವಾಗಿತ್ತು. ಅದರ ನೀತಿಗಳಿಂದ ಜಾಗತಿಕವಾಗಿ ಚೀನಾದತ್ತ ಬಂಡವಾಳ ಹರಿದುಬಂತು. ಆದರೆ, ಈಗ ಭಾರತದ ಮತ್ತು ಕರ್ನಾಟಕದ ಯುಗ ಆರಂಭಗೊಂಡಿದೆ. ಕೊರೊನಾ ಹಾವಳಿ ನಡುವೆಯೂ ಹಿಂದಿನ ಒಂದು ತ್ತೈಮಾಸಿಕದಲ್ಲಿ ಸ್ಟಾರ್ಟ್‌ಅಪ್‌ನಲ್ಲಿ 10 ಬಿಲಿಯನ್‌ ಡಾಲರ್‌ ಹರಿದುಬಂದಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ, ಹೆಚ್ಚು-ಕಡಿಮೆ ಸರಿಸಮವಾಗಿದೆ. ನಾವು ಇಷ್ಟಕ್ಕೇ ತೃಪ್ತಿಪಟ್ಟರೆ ಸಾಲದು, ಮುಂದಿನ ಎರಡು ದಶಕಗಳಲ್ಲಿ “ಡೀಪ್‌ ಟೆಕ್‌’ (ಬಹು ತಂತ್ರಜ್ಞಾನಗಳ ಮಿಶ್ರಣ) ಮತ್ತು ಕ್ಲೈಮ್ಯಾಟೆಕ್‌ಗಳು ಆಳಲಿವೆ. ಇದಕ್ಕೆ ನಾವು ಸಜ್ಜಾಗಬೇಕಿದೆ’ ಎಂದರು.

ರಾಜ್ಯ ಬಿಟಿ ವಿಜನ್‌ ಗ್ರೂಪ್‌ ಅಧ್ಯಕ್ಷೆ ಕಿರಣ್‌ ಮಜೂಂದಾರ್‌ ಷಾ ಮಾತನಾಡಿ, ನಗರದಲ್ಲಿ 20 ಲಕ್ಷ ಸಾಫ್ಟ್ವೇರ್‌ ಎಂಜಿನಿಯರ್‌ಗಳು ಮತ್ತು ಹತ್ತು ಲಕ್ಷ ಬಯಾಲಜಿಸ್ಟ್‌ಗಳಿದ್ದಾರೆ. ಇವರಿಬ್ಬರೂ ಹಂಸದ ಎರಡು ಬಲಿಷ್ಠ ರೆಕ್ಕೆಗಳಾಗಿವೆ. ಇದರ ಸಹಾಯದಿಂದ ನಾವು “ಬೆಂಗಳೂರು’ ಹಂಸವನ್ನು ಅತಿ ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಂಸ ನೋಡಲು ಅತಿ ದೊಡ್ಡದು ಮತ್ತು ಭಾರವಾದದ್ದು. ಆದರೆ, ಅತಿ ಎತ್ತರಕ್ಕೆ ಹಾರಬಲ್ಲ ಏಕೈಕ ಪಕ್ಷಿಯೂ ಇದಾಗಿದೆ. ಕರ್ನಾಟಕ ಮತ್ತು ಬೆಂಗಳೂರು ಕೂಡ ಒಂದು ದೊಡ್ಡ ಹಂಸವಾಗಿದ್ದು, ಅದನ್ನು ಅತಿ ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next