Advertisement

Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು

03:41 PM Oct 18, 2024 | Team Udayavani |

ಬೆಂಗಳೂರು: ಅಲ್ಲಿ ಬೀದಿ ನಾಯಿಗಳು ಖುಷಿಯಲ್ಲಿದ್ದವು. ಸರಿಯಾದ ಸಮಯಕ್ಕೆ ಆಹಾರವಿಲ್ಲದೆ ದಿನವೆಲ್ಲಾ ಬೀದಿ, ಬೀದಿ ಅಲೆದಾಡುತ್ತಿದ್ದ ನಾಯಿಗಳಿಗೆ ಹೊಟ್ಟೆ ತುಂಬಾ ಆಹಾರ ಸಿಕ್ಕ ಹಿನ್ನೆಲೆಯಲ್ಲಿ ಲವಲವಿಕೆಯಿಂದ ಇದ್ದವು. ಬಿಬಿಎಂಪಿ ಆವರಣದಲ್ಲಿ ಕೆಲವು ದಿನಗಳ ಹಿಂದಷ್ಟೇ ಮರಿ ಹಾಕಿದ ನಾಯಿ ತನ್ನ ಪುಟಾಣಿ ಮರಿಗಳ ಜತೆಗೆ ಶ್ವಾನೋತ್ಸವದಲ್ಲಿ ಭಾಗವಹಿಸಿ ಮೃಷ್ಟಾನ್ನ ಭೋಜನ ಮಾಡಿ ಸಂಭ್ರಮಿಸಿತು. ಪಾಲಿಕೆ ಅಧಿಕಾರಿಗಳು, ಪ್ರಾಣಿಪ್ರಿಯರು ಮುದ್ದಾದ ನಾಯಿ ಮರಿಗಳಿಗೆ ಅಕ್ಕರೆಯ ತುತ್ತು ತಿನಿಸಿ, ಪ್ರೀತಿ ತೋರಿಸಿ ಸಂಭ್ರಮಿಸಿದರು. ಇಂತಹ ಅಪರೂಪದ ದೃಶ್ಯ ಬಿಬಿಎಂಪಿ ಆವರಣದಲ್ಲಿ ಗುರುವಾರ ಕಂಡುಬಂತು.

Advertisement

ಬಿಬಿಎಂಪಿ ಪಶುಸಂಗೋಪನಾ ವಿಭಾಗದಿಂದ ಎಲ್ಲಾ ವಲಯಗಳ ಆಯ್ದ ಸ್ಥಳಗಳಲ್ಲಿ ಗುರುವಾರ ಶ್ವಾನ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಬೀದಿ ಬದಿ ನಾಯಿಗಳಿಗೆ ಆಹಾರ ದೊರಕದ ಪ್ರದೇಶಗಳಲ್ಲಿ ದಿನಕ್ಕೆ 1 ಬಾರಿ ಆಹಾರ ನೀಡುವುದು ಪ್ರಮುಖ ಉದ್ದೇಶವಾಗಿದೆ.

ದಿನಕ್ಕೆ ಒಂದು ಬಾರಿ ಆಹಾರ: ಈ ವೇಳೆ ಮಾತನಾಡಿದ ಪಾಲಿಕೆ ವಿಶೇಷ ಆಯುಕ್ತ ಸುರಳ್ಕರ್‌ ವಿಕಾಸ್‌ ಕಿಶೋರ್‌, ಪಾಲಿಕೆಯ ಎಲ್ಲ ವಲಯಗಳಲ್ಲಿ ಈಗಾಗಲೇ ಗುರುತಿಸಿರುವ ಆಹಾರ ನೀಡುವ ಸ್ಥಳಗಳಲ್ಲಿಯೇ ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡಲಾಗುವುದು. ಸ್ಥಳದಲ್ಲಿ ಬೌಲ್‌, ನೀರು ಹಾಗೂ ಆಹಾರ ನೀಡುವ ಸ್ಥಳ ಎಂಬ ನಾಮಫಲಕದ ವ್ಯವಸ್ಥೆ ಮಾಡಲಾಗಿದೆ. ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಪರಿಶೀಲಿಸಲಾಗುವುದು. ಈ ವೇಳೆ ಸಾರ್ವಜನಿಕರ ಸ್ಪಂದನೆ, ಆಹಾರ ನೀಡುವ ಸ್ಥಳ, ಸಮಯ, ಸ್ಥಳೀಯ ಪ್ರದೇಶಗಳಲ್ಲಿ ಬರುವ ಸಲಹೆ-ಸೂಚನೆಗಳು ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುವುದು. ಒಂದು ವೇಳೆ ಏನಾದರು ಲೋಪಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಪಾಲಿಕೆಯ ಎಲ್ಲಾ ಕಡೆ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮವಹಿಸಲಿದೆ. ಬಿಬಿಎಂಪಿ ವ್ಯಾಪ್ತಿಯ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಉಳಿಯುವ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವ ಕುರಿತು ಮಾಲಿಕರ ಜೊತೆಗೆ ಚರ್ಚಿಸಲಾಗಿದೆ. ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.

2.70 ಲಕ್ಷ ಬೀದಿ ನಾಯಿಗಳು: ಬಿಬಿಎಂಪಿ ವ್ಯಾಪ್ತಿಯಲ್ಲಿ 2.70 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಬೀದಿ ನಾಯಿಗಳ ಕಚ್ಚುವ ಸಂಖ್ಯೆ, ಉದ್ರೇಖಗೊಳ್ಳುವದನ್ನು ತಡೆಯಬೇಕಿದೆ. ಈ ಬಗ್ಗೆ ಪಶು ವೈದ್ಯರು, ಪರಿಣಿತ ತಜ್ಞರು, ಪ್ರಾಣಿ ಪ್ರಿಯ ಸ್ವಯಂ ಸೇವಕರು ಬಳಿ ಚರ್ಚೆ ನಡೆಸಿದಾಗ ಬೀದಿ ನಾಯಿಗಳಿಗೆ ಆಹಾರ ಸರಿಯಾಗಿ ಸಿಗದಿರುವ ಪರಿಣಾಮ ಕಚ್ಚುವ ಹಾಗೂ ಉದ್ರೇಕಗೊಳ್ಳುಬ ಘಟನೆಗಳು ನಡೆಯುತ್ತಿವೆ ಎಂಬುದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗುವಂತಾಗಬೇಕೆಂಬ ಉದ್ದೇಶದಿಂದ ಆಹಾರ ನೀಡುವ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಪಾಲಿಕೆ ಸುರಳ್ಕರ್‌ ವಿಕಾಸ್‌ ಕಿಶೋರ್‌ ತಿಳಿಸಿದರು.

ಈ ಸಂದರ್ಭದಲ್ಲಿ ಪಶುಸಂಗೋಪನಾ ವಿಭಾಗದ ಜಂಟಿ ನಿರ್ದೇಶಕ ಡಾ. ಚಂದ್ರಯ್ಯ, ಸಹಾಯಕ ನಿರ್ದೇಶಕರಾದ ಡಾ. ಮಲ್ಲಪ್ಪ ಬಜಂತ್ರಿ, ಸಹವರ್ತೀನ್‌, ವಾಟರ್‌ ಫಾರ್‌ ವಾಯ್ಸ್ ಲೆಸ್‌ ಎನ್‌.ಜಿ.ಒ ಸಂಸ್ಥೆಗಳು ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ‌

Advertisement

200ಕ್ಕೂ ಹೆಚ್ಚು ಸ್ವಯಂ ಸೇವಕರ ನೋಂದಣಿ

ಪ್ರಾಣಿ ಕಲ್ಯಾಣ ಯೋಜನೆಗಳಲ್ಲಿ ಭಾಗಿಯಾಗುವ ಸಲುವಾಗಿ ನೋಂದಣಿಗೆ ಆಹ್ವಾನಿಸಲಾಗಿತ್ತು. ಈ ಪೈಕಿ 200ಕ್ಕೂ ಹೆಚ್ಚು ನೋಂದಾಯಿಸಿಕೊಂಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಶೀಘ್ರ ‘ಸಹಬಾಳ್ವೆ ಚಾಂಪಿಯನ್‌ ಲೊಕಲಿಟೀಸ್‌ ಅಭಿಯಾನ’ ನಡೆಸಲಾಗುವುದು. ಬೀದಿ ನಾಯಿಗಳಿಗೆ ಆಹಾರ ನೀಡಲು ಪಾಲಿಕೆ ಜೊತೆ ಕೈ ಜೋಡಿಸಲು ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪಾಲಿಕೆಯಿಂದ ಆಹಾರ ನೀಡುವ ಸ್ಥಳಗಳು

ಪೂರ್ವ ವಲಯ: ಪಾಲಿಕೆ ಕೇಂದ್ರ ಕಚೇರಿ, ಎನ್‌ಆರ್‌ ಚೌಕ, ಹಡ್ಸನ್‌ ವೃತ್ತ

ಮಹದೇವಪುರ ವಲಯ: ಸದಾಮಂಗಲ ರಸ್ತೆ ಮತ್ತು ಗ್ರಾಮದೇವತೆ ದೇವಸ್ಥಾನ, ಹೂಡಿ

ಬೊಮ್ಮನಹಳ್ಳಿ ವಲಯ: ಗುಬ್ಬಲಾಲ ಮುಖ್ಯ ರಸ್ತೆ, ಕೋಣನಕುಂಟೆ, ಸುಬ್ರಹ್ಮಣ್ಯಪುರ, ವಸಂತಪುರ.

ಆರ್‌.ಆರ್‌ ನಗರ ವಲಯ: ಬಿಸಿ ಎಂಸಿ ಲೇಔಟ್‌, ಆರ್‌.ಆರ್‌ ನಗರ

ದಾಸರಹಳ್ಳಿ ವಲಯ: ಬಾಗಲಗುಂಟೆ, ಮಂಜುನಾಥ ನಗರ

ದಕ್ಷಿಣ ವಲಯ: ಸಿದ್ದಾಪುರ ವಾರ್ಡ್‌, ಗುಟ್ಟೆಪಾಳ್ಯ

ಯಲಹಂಕ ವಲಯ: ಟೆಲಿಕಾಂ ಲೇಔಟ್‌, ಜಕ್ಕೂರ್‌

ಪಶ್ಚಿಮ ವಲಯ: ಗಾಯತ್ರಿ ನಗರ, ಬಹು ಸ್ಥಳಗಳು

Advertisement

Udayavani is now on Telegram. Click here to join our channel and stay updated with the latest news.

Next