ಬೆಂಗಳೂರು: ಆದಿ ಚುಂಚನಗಿರಿ ಮಠ ಹಾಗೂ ವಿಶ್ವ ಒಕ್ಕಲಿಗರ ಮಠದ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಆದಿ ಚುಂಚನಗಿರಿ ಮಠದ ಪೀಠಾಧಿಪತಿ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಕೆಂಗೇರಿಯ ಮೈಸೂರು ರಸ್ತೆಯಲ್ಲಿರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ರವಿವಾರ ನಡೆದ ಶ್ರೀ ನಿಶ್ಚಲನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿ, ಎರಡೂ ಮಠಗಳ ನಡುವೆ ಏನೋ ಒಂದು ಸಮಸ್ಯೆ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಎರಡೂ ಮಠಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. ಒಂದೇ ಗುರು, ಒಂದೇ ಸಮುದಾಯ, ಒಂದೇ ತಾಯಿ. ನಾಥಪಂಥದ ರೀತಿಯಲ್ಲಿ ಎರಡೂ ಮಠಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರದ್ದು 4 ದಶಕಗಳ ಪರಿಶ್ರಮ. ಒಕ್ಕಲಿಗರ ಮಹಾ ಸಂಸ್ಥಾನ 40 ವರ್ಷಗಳ ಹಿಂದೆ ಹುಟ್ಟಿದ್ದು. ಚಂದ್ರಶೇಖರ ಶ್ರೀಗಳು ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇನ್ನಷ್ಟು ಎತ್ತರಕ್ಕೆ ಈ ಸಮಾಜವನ್ನು ಕೊಂಡೊಯ್ಯಲು ನಾಗರಾಜ್ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಹಾಲು ಜೇನಿನ ರೀತಿಯಲ್ಲಿ ಬೆರೆತು ಸಂಸ್ಥಾನಗಳನ್ನು ನಡೆಸಿಕೊಂಡು ಹೋಗೋಣ ಎಂದು ಹೇಳಿದರು.
ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು.