ಬೆಂಗಳೂರು: ತಂದೆಯ ಕಳವಾಗಿದ್ದ ರಾಯಲ್ ಎನ್ ಫೀಲ್ಡ್ ಬೈಕ್ ಪತ್ತೆ ಹಚ್ಚಲು ನಗರ ಮೂಲದ ಟೆಕ್ಕಿಯೊಬ್ಬರು 15 ವರ್ಷಗಳ ಕಾಲ ಅವಿರತ ಶ್ರಮಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿ ಅರುಣ್, 15 ವರ್ಷಗಳ ಪರಿಶ್ರಮದ ನಂತರ ತನ್ನ ತಂದೆಯ ಕಳವಾವಾಗಿದ್ದ ಬೈಕನ್ನು ಕಂಡುಕೊಂಡಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಿವೃತ್ತ ಬ್ಯಾಂಕ್ ಅಧಿಕಾರಿ ಎನ್ ಶ್ರೀನಿವಾಸನ್ ಅವರು 1971ರಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಖರೀದಿಸಿ ಅದರ ಬಗ್ಗೆ ವಿಶೇಷ ಒಲವು ತೋರಿದ್ದರು. ಅದಕ್ಕೆ ಭಾರೀ ಕಾಳಜಿ ತೋರಿ ನಿರ್ವಹಣೆ ಮಾಡುತ್ತಿದ್ದರು. ಆದರೆ 1996ರಲ್ಲಿ ಹೆಬ್ಬಾಳದ ಅವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಏಕಾಏಕಿ ಕಳ್ಳತನವಾಗಿ ಹೃದಯವನ್ನೇ ಭೇದಿಸಿದಂತಾಗಿ ತ್ತು. ಬೈಕ್ ಹುಡುಕಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಶ್ರೀನಿವಾಸನ್ ಯಾವಾಗಲೂ ಬೈಕ್ ಅನ್ನು ನೆನಪಿಸಿಕೊಳ್ಳುತ್ತಿದ್ದರಾದರೂ ಅದನ್ನು ಕಂಡುಕೊಳ್ಳುವ ಭರವಸೆಯನ್ನು ಕಳೆದುಕೊಂಡಿದ್ದರು. ಆದರೆ ಅವರ ಮಗ ಅರುಣ್ ಬೈಕ್ ಹುಡುಕಲು ನಿರ್ಧರಿಸಿದರು.
1972 ರಲ್ಲಿ ತೆಗೆದ ಹಳೆಯ ಕಪ್ಪು ಮತ್ತು ಬಿಳಿ ಛಾಯಾಚಿತ್ರದೊಂದಿಗೆ ಅರುಣ್ ನೋಂದಣಿ ಸಂಖ್ಯೆ MYH 1731 ರ ಬೈಕ್‌ಗಾಗಿ ಹುಡುಕಿದರು. ಅವರು ರಾಜ್ಯದಾದ್ಯಂತ ಹಳೆಯ ಬೈಕ್‌ಗಳನ್ನು ರಿಪೇರಿ ಮಾಡುವ ಗ್ಯಾರೇಜ್‌ಗಳಿಗೆ ಭೇಟಿ ನೀಡಿದರು. ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ವಿಚಾರಣೆ ನಡೆಸಿದರು. ಅವರು 2006 ರಿಂದ ಬೈಕ್‌ಗಾಗಿ ಹುಡುಕುತ್ತಲೇ ಇದ್ದರು ಮತ್ತು ಅಂತಿಮವಾಗಿ 2021 ರಲ್ಲಿ ಪ್ರಗತಿಯನ್ನು ಸಾಧಿಸಿಯೇ ಬಿಟ್ಟರು.
ಆರ್‌ಟಿಒ ದಾಖಲೆಗಳ ಡಿಜಿಟಲೀಕರಣವು ತನ್ನ ತಂದೆಯ ಬೈಕ್‌ನ ಅಸ್ತಿತ್ವಕ್ಕೆ ಮೊದಲ ಸುಳಿವು ನೀಡಿತು. ಟೆಕ್ಕಿಯು ಟಿ . ನರಸೀಪುರದ ರೈತರೊಬ್ಬರ ಹೆಸರಿನಲ್ಲಿ RTO ನ ಪರಿವಾಹನ್ ಸೇವಾ ಪೋರ್ಟಲ್‌ನಲ್ಲಿ ಹೊಂದಾಣಿಕೆಯ ನೋಂದಣಿ ಸಂಖ್ಯೆಗಳೊಂದಿಗೆ ಸಕ್ರಿಯ ವಿಮಾ ಪಾಲಿಸಿಯನ್ನು ಕಂಡುಕೊಂಡಿದ್ದಾರೆ. ಕದ್ದ ಮತ್ತು ಕೈಬಿಟ್ಟ ವಾಹನಗಳಿಗಾಗಿ ಪೊಲೀಸ್ ಹರಾಜಿನಲ್ಲಿ ಖರೀದಿಸಿದ ಡೀಲರ್‌ನಿಂದ ರೈತ ಬೈಕ್ ಖರೀದಿಸಿದ್ದಾನೆ ಎಂದು ನಂತರ ತಿಳಿದುಬಂದಿದೆ.
ಅರುಣ್ ರೈತನ ಬಳಿ ತೆರಳಿ ಬೈಕನ್ನು ಮಾರಾಟ ಮಾಡಲು ಮನವರಿಕೆ ಮಾಡಿಕೊಟ್ಟರು, ಅದನ್ನು ರಿಪೇರಿ ಮಾಡಿದರು. ನವೀಕರಿಸಿದ ಬೈಕನ್ನು ಅದರ ನಿಜವಾದ ಮಾಲೀಕ ಎನ್ ಶ್ರೀನಿವಾಸನ್ ಅವರ ಕೈಗೆ ಮರಳಿ ಸೇರಿಸುವಲ್ಲಿ ಯಶಸ್ವಿಯಾದರು.
ಶ್ರೀನಿವಾಸನ್ ತನ್ನ ಬಹುಕಾಲದಿಂದ ಕಳೆದುಹೋದ ಸ್ನೇಹಿತನಾಗಿದ್ದ, ತಾನು ಸವಾರಿ ಮಾಡಿದ ಬೈಕನ್ನು ಮತ್ತೆ ಕಂಡು ಫುಲ್ ಖುಷ್ ಆಗಿದ್ದಾರೆ.