ಬೆಂಗಳೂರು: ಪಾಕ್ ಸೈನಿಕರಿಂದ ಬಂಧಿಯಾಗಿದ್ದರೂ ಕಿಂಚಿತ್ತೂ ಎದೆಗುಂದದೇ ದೇಶಕ್ಕೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಏತನ್ಮಧ್ಯೆ ಅವರ ಮೇಲಿನ ಅಭಿಮಾನದಿಂದಾಗಿ ಕುಷ್ಟಗಿ ನಗರದ ಮಾನ್ವಿ ನಗರದ ಶಿಕ್ಷಕ ಮಹಾಂತೇಶ್ ಶೆಟ್ಟರ್ ದಂಪತಿ 2ನೇ ಮಗುವಿಗೆ ಅಭಿನಂದನ್ ಎಂದು ಹೆಸರಿಟ್ಟಿದ್ದಾರೆ. ದೇಶದ ಹಲವು ಭಾಗಗಳಲ್ಲಿ ನವಜಾತ ಶಿಶುಗಳಿಗೆ ಅಭಿನಂದನ್ ಹೆಸರು ಇಡಲಾಗಿದೆ. ಜೊತೆಗೆ ಅಭಿನಂದನ್ ಹೇರ್ ಸ್ಟೈಲ್, ಮೀಸೆ ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ದೇಶಾದ್ಯಂತ ಜನಪ್ರಿಯವಾಗತೊಡಗಿದೆ.
ಉದ್ಯಾನನಗರಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಅಭಿನಂದನ್ ಹೇರ್ ಸ್ಟೈಲ್ ಮತ್ತು ಮೀಸೆ ಟ್ರೆಂಡಿಂಗ್ ನಲ್ಲಿದೆ. ಕೋರಮಂಗಲದ ನಾನೇಶ್ ಬ್ಯೂಟಿ ಸ್ಟುಡಿಯೋ ಇದೀಗ ಅಭಿನಂದನ್ ಹೇರ್ ಸ್ಟೈಲ್ ಹಾಗೂ ಮೀಸೆಯನ್ನು ಉಚಿತವಾಗಿ ಶೇವ್ ಮಾಡಿಕೊಡುವುದಾಗಿ ಗ್ರಾಹಕರಿಗೆ ಆಫರ್ ಕೊಟ್ಟಿದ್ದಾರೆ. ಈ ಮೂಲಕ ಅಭಿನಂದನ್ ಅವರಿಗೆ ಗೌರವವನ್ನು ಸಲ್ಲಿಸಿದ್ದಾರೆ.
ಈ ಆಫರ್ ನಿಂದಾಗಿ ಕೋರಮಂಗಲದಲ್ಲಿ ನೂರಾರು ಮಂದಿ ಅಭಿನಂದನ್ ಸ್ಟೈಲ್ ನಲ್ಲಿ ಮೀಸೆಯನ್ನು ಹಾಗೂ ಹೇರ್ ಸ್ಟೈಲ್ ಅನ್ನು ಮಾಡಿಸಿಕೊಂಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕರಾವಳಿಯಲ್ಲಿಯೂ ಅಭಿನಂದನ್ ಮೀಸೆ ಟ್ರೆಂಡಿಂಗ್:
ಮಂಗಳೂರು, ಉಡುಪಿಯಲ್ಲಿಯೂ ವಿಂಗ್ ಕಮಾಂಡರ್ ಅಭಿನಂದನ್ ಅವರ ಹೇರ್ ಸ್ಟೈಲ್, ಮೀಸೆ ಟ್ರೆಂಡಿಂಗ್ ಆಗಿದೆ. ಕೋಟದ ಸತ್ಯನಾರಾಯಣ ಮಧ್ಯಸ್ಥ ಕೂಡಾ ಅಭಿನಂದನ್ ಸ್ಟೈಲ್ ಮೀಸೆಯ ಮೊರೆ ಹೋಗಿದ್ದಾರೆ. ಇನ್ನೂ ಹಲವಾರು ಸ್ಥಳೀಯರು ಅಭಿನಂದನ್ ಹೇರ್ ಸ್ಟೈಲ್ ಮಾಡಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದಾರೆ.