ರಾಮನಗರ: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ನಡೆಯಲಿದ್ದು, ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿಯೋದು ಯಾರು? ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿ ಡಿ.ಕೆ.ಸುರೇಶ್ ಮುಂದುವರಿಯುವರೇ? ಪ್ರಧಾನಿ ಮೋದಿ ಅಲೆಯಲ್ಲಿ ಅಶ್ವತ್ಥನಾರಾಯಣ ಅವರು ದಹೆಲಿಗೆ ತೇಲಿ ಹೋಗುವರೇ? ಎಂಬ ಕುತೂಹಲ ಜಿಲ್ಲೆಯ ನಾಗರಿಕರಲ್ಲಿದೆ. ಜಿಲ್ಲೆಯ ನಾಗರಿಕರಿಗೆ ತಮ್ಮ ಲೋಕಸಭಾ ಕ್ಷೇತ್ರಕ್ಕಿಂತ ಒಂದು ಕೈ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವವರು ಯಾರು? ಎಂಬ ಕುತೂಹಲವೇ ಹೆಚ್ಚಾಗಿದೆ.
ಡಿ.ಕೆ.ಸುರೇಶ್ ಗೆದ್ದರೆ ಹ್ಯಾಟ್ರಿಕ್!: ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದರೆ ಹ್ಯಾಟ್ರಿಕ್ ಸಾಧನೆಯಾಗಲಿದೆ.
2013ರಲ್ಲಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ತೆರವುಗೊಂಡ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಡಿ.ಕೆ.ಸುರೇಶ್ ಮತ್ತು 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ವಿಜಯ ಸಾಧಿಸಿದ್ದಾರೆ. 2014ರಲ್ಲಿ ಹಾರಿದ್ದ ವಿಜಯ ಪತಾಕೆಯ ಈ ಬಾರಿಯೂ ಹಾರಲಿದೆ. ಡಿ.ಕೆ.ಸುರೇಶ್ ಹ್ಯಾಟ್ರಿಕ್ ಹೀರೋ ಆಗಲಿ ದ್ದಾರೆ ಎಂದು ಕಾಂಗ್ರೆಸ್ ಕಾರ್ಯ ಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಅಸ್ಥಿತ್ವಕ್ಕೆ ಬರುವ ಮುನ್ನ ಇದ್ದ ಕನಕಪುರ ಲೋಕಸಭಾ ಕ್ಷೇತ್ರದಿಂದ ಎಂ.ವಿ.ಚಂದ್ರಶೇಖರ ಮೂರ್ತಿ 6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅವರನ್ನು ಬಿಟ್ಟರೆ ಬೇರ್ಯಾರು ಹ್ಯಾಟ್ರಿಕ್ ಸಾಧಿಸಿರಲಿಲ್ಲ.
ಅಶ್ವತ್ಥನಾರಾಯಣ ಗೌಡರು ಗೆದ್ದರೂ ದಾಖಲೆ!: 1998ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಕಮಲ ಅರಳಿತ್ತು. ಇದೀಗ ಬಿಜೆಪಿ ಅಭ್ಯರ್ಥಿ ಅಶ್ವಥನಾರಾಯಣ ಗೌಡರು ಗೆಲುವು ಸಾಧಿಸಿದರೆ ಜೆಡಿಎಸ್, ಕಾಂಗ್ರೆಸ್ ಕಪಿಮುಷ್ಠಿಯಲ್ಲಿರುವ ಈ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಕಮಲ ಅರಳಿದಂತಾಗುತ್ತದೆ. ಇದು ಬಿಜೆಪಿ ಪಾಲಿಗೆ ದಾಖಲೆ ಗೆಲುವು. ಇನ್ನೊಂದೆಡೆ ಬಿಜೆಪಿ ಮುಖಂಡರಾಗಿ ಅಶ್ವಥನಾರಾಯಣ ಅವರು ಇದೇ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸಿ ವಿಜಯ ಸಾಧಿಸಿದಂತಾಗುತ್ತದೆ ಎಂಬುದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ.
ಒಟ್ಟಾರೆ ನೇರ ಹಣಾಹಣಿ ಇದ್ದ ಕ್ಷೇತ್ರದಲ್ಲಿ ಮತ ಎಣಿಕೆಯ ಕುತೂಹಲ ಹೆಚ್ಚಾಗಿದೆ. ಗುರುವಾರ ನಗರದ ಹೊರವಲಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಜಿಲ್ಲಾಡಳಿತ ಸಜ್ಜಾಗಿದ್ದು, ಜಿಲ್ಲಾ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಲಾಗಿದೆ.
● ಬಿ.ವಿ.ಸೂರ್ಯ ಪ್ರಕಾಶ್