Advertisement

ಅಧಿಕ ಮತ ಗಳಿಕೆಗೆ ಅಭ್ಯರ್ಥಿಗಳ ಕಸರತ್ತು

10:54 AM Apr 13, 2019 | keerthan |

ಚನ್ನಪಟ್ಟಣ: ಮತದಾನದ ದಿನ ಹತ್ತಿರವಾಗುತ್ತಿರುವಂತೆಯೇ ಲೋಕಸಭಾ
ಚುನಾವಣಾ ಬಿರುಸು ತಾರಕಕ್ಕೇರಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಅಭ್ಯರ್ಥಿಗಳ ಪರ ಹೆಚ್ಚಿನ ಮತಗಳನ್ನು ಪಡೆದುಕೊಳ್ಳಲು ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

Advertisement

ಈಗಾಗಲೇ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಹಾಗೂ ಬಿಜೆಪಿ ಅಭ್ಯರ್ಥಿ ಅಶ್ವತ್ ನಾರಾಯಣಗೌಡ ಅವರು ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡುತ್ತಿದ್ದಾರೆ. ಇವರ ಜತೆಗೆ ಪಕ್ಷೇತರ ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳೂ ಸಹ ತಮ್ಮನ್ನು ಬೆಂಬಲಿಸುವಂತೆ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ಮಾತ್ರ ಶತ ಪ್ರಯತ್ನವನ್ನು ನಡೆಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ಸುರೇಶ್‌ಗೆ ಜೆಡಿಎಸ್‌ ಆಸರೆ: ಜೆಡಿಎಸ್‌ ಶಾಸಕ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಿರುವ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷಕ್ಕೆ ತನ್ನದೇ ಆದ ನೆಲೆ ಇದೆ. ವಿಧಾನಸಭೆ ಚುನಾವಣೆಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಕನಿಷ್ಠ 60 ಸಾವಿರ ಮತಗಳನ್ನು ಪಡೆದುಕೊಳ್ಳುವ ಶಕ್ತಿ ಜೆಡಿಎಸ್‌ಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಇಲ್ಲದಿರುವುದು ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಗೆ ವರದಾನವಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಬಾರಿ ಸಿ.ಪಿ.ಯೋಗೇಶ್ವರ್‌ ಅವರು ಡಿ.ಕೆ. ಸುರೇಶ್‌ಗೆ ಬೆಂಬಲವಾಗಿ ನಿಂತಿದ್ದರು. ತಮ್ಮ ಮತಗಳು ಜೆಡಿಎಸ್‌ನತ್ತ ಹೋಗದಂತೆ ನಿಗಾ ವಹಿಸಿ ಹೆಚ್ಚು ಮತಗಳನ್ನು ಸುರೇಶ್‌ಗೆ ಕೊಡಿಸುವಲ್ಲ ಯಶಸ್ವಿಯಾಗಿದ್ದರು. ಈ ಬಾರಿ ಸುರೇಶ್‌ಗೆ ಜೆಡಿಎಸ್‌ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಖುದ್ದಾಗಿ ತಾಲೂಕಿನ
ಮುಖಂ ಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ಸಂಪೂರ್ಣವಾಗಿ ಡಿ.ಕೆ.ಸುರೇಶ್‌ ಅವರನ್ನು ಬೆಂಬಲಿಸು ವಂತೆಸೂಚಿಸಿದ್ದಾರೆ. ಹಾಗಾಗಿ ಜೆಡಿಎಸ್‌ ಸಹ ಸಕ್ರಿಯವಾಗಿ ಸುರೇಶ್‌ ಬೆನ್ನಿಗೆ ನಿಂತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಗ್ರಾಮೀಣ ಭಾಗದಲ್ಲಿ ಅಷ್ಟೇನೂ ನೆಲೆಯಿಲ್ಲದಿರುವುದು ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ವೇದ್ಯವಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿ ಎಚ್‌. ಎಂ.ರೇವಣ್ಣ 30 ಸಾವಿರ ಮತಗಳನ್ನು ಪಡೆದದ್ದು ಯೋಗೇಶ್ವರ್‌ ಬಿಜೆಪಿ ಅಭ್ಯರ್ಥಿಯಾಗಿ ದ್ದುದರಿಂದಲೇ ಹೊರತು ಇನ್ಯಾವುದೋ ಪವಾಡದಿಂದಲ್ಲ ಎನ್ನುವುದು ಅದೇ ಪಕ್ಷದ ಮುಖಂಡರ ಮಾತು. ಸ್ವಪ್ರತಿಷ್ಟೆ, ನಾಯಕರು ಬಂದಾಗ ದಿಢೀರ್‌ ಸಕ್ರಿಯವಾಗುವ ಮುಖಂಡರು ಇಲ್ಲಿ ಯಥೇಚ್ಚವಾಗಿ ಇದ್ದಾರೆ. ಡಿ.ಕೆ. ಶಿವಕುಮಾರ್‌, ಸುರೇಶ್‌ ಮೇಲಿನ ಅಭಿಮಾನದಿಂದ ಇಂದಿಗೂ ಹಲವು ಮತದಾರರು ಕ್ಷೇತ್ರದಲ್ಲಿದ್ದಾರೆಯೇ ಹೊರತು ಮುಖಂಡರಿಂದಲ್ಲ ಎನ್ನುವುದು ಮಾತ್ರ ಕಹಿ ಸತ್ಯವಾಗಿದೆ.

ಮತ ಬ್ಯಾಂಕ್‌ ಭದ್ರಪಡಿಸುವತ್ತ ಯೋಗೇಶ್ವರ್‌: ತಾಲೂಕಿನಲ್ಲಿ ಹೇಳಿ ಕೇಳಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರಿಗೆ ತಮ್ಮದೇ ಆದ ಮತಬ್ಯಾಂಕ್‌ ಇದೆ. ಅದನ್ನು ಲೋಕಸಭಾ ಚುನಾವಣೆಗೆ ಬಳಕೆ ಮಾಡಿಕೊಳ್ಳುವ ಜತೆಗೆ ನೀರಾವರಿ ವಿಚಾರದಲ್ಲಿ ಜನಮನ ಸೆಳೆದು ಇನ್ನಷ್ಟು ಮತಗಳನ್ನು ಅಭ್ಯರ್ಥಿಗೆ ಹಾಕಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ವತಃ ಸಿ.ಪಿ.ಯೋಗೇಶ್ವರ್‌ ಗ್ರಾಮಗಳಲ್ಲಿ ಪ್ರಚಾರಕ್ಕೆ ಇಳಿದಿದ್ದು ಜನಬೆಂಬಲವೂ ಸಾಕಷ್ಟು ವ್ಯಕ್ತವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ನೀರಾವರಿ ವಿಚಾರವನ್ನು ಜನತೆಯ ಮುಂದಿಡುತ್ತಿರುವ ಯೋಗೇಶ್ವರ್‌, ಈ ಬಾರಿ ಕೆರೆಗಳನ್ನು ತುಂಬಿಸದಿರುವ ವಿಷಯವನ್ನು ಮತದಾರರ ಗಮನಕ್ಕೆ ತರುವ ಜತೆಗೆ ಕನಕಪುರಕ್ಕೆ ಇಗ್ಗಲೂರು ಜಲಾಶಯದ ನೀರನ್ನು ಹರಿಸಿಕೊಂಡ ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಕ್ರಮವನ್ನು ಪರೋಕ್ಷವಾಗಿ ಟೀಕಿಸಿ, ಇತರ ಪಕ್ಷಗಳ ರೈತರು ಹಾಗೂ ಮಹಿಳೆಯರ ಮನ ಗೆಲ್ಲುವ ಯತ್ನಕ್ಕೆ ಕೈ ಹಾಕಿದ್ದಾರೆ. ಕೆಲ ಜೆಡಿಎಸ್‌ ಮುಖಂಡರನ್ನೂ ಸುಮ್ಮನಾಗಿಸುವ ಯತ್ನವೂ ಸಹ ನಡೆಯುತ್ತಿದೆ. ಇದು ಸಹಜವಾಗಿ ಮೈತ್ರಿ ಅಭ್ಯರ್ಥಿಯ ನಿದ್ದೆಕೆಡಿಸಿದೆ.

ಪಕ್ಷದ ಪ್ರಮುಖರ ಎಂಟ್ರಿ: ಬಿಜೆಪಿಯ ಈ ಎಲ್ಲಬೆಳವಣಿಗೆಗಳನ್ನು ಗಮನಿಸಿರುವ ಸಚಿವ ಡಿ.ಕೆ. ಶಿವಕುಮಾರ್‌ ಖುದ್ದಾಗಿ ಕ್ಷೇತ್ರಕ್ಕೆ ತಾವೇ ಎಂಟ್ರಿ ಕೊಟ್ಟಿದ್ದಾರೆ. ಪ್ರತಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಹೋದರ ಸುರೇಶ್‌ ಪರವಾಗಿ ಮತಯಾಚನೆ ಮಾಡಿದ್ದಾರೆ. ಪ್ರಮುಖವಾಗಿ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಬಿಜೆಪಿ ಅಭ್ಯರ್ಥಿ ಮತ್ತು ಸಿ.ಪಿ.ಯೋಗೇಶ್ವರ್‌ ಅವಕಾಶವಾದಿತನವನ್ನು ಮತದಾರರ ಮುಂದಿಡುತ್ತಿರುವ ಅವರು, ಬಹುಮತದೊಂದಿಗೆ ಸುರೇಶ್‌ ಗೆಲ್ಲಿಸುವಂತೆ ಮನವಿ ಮಾಡಿ ಹೋಗಿದ್ದಾರೆ. ಮೈತ್ರಿ ಅಭ್ಯರ್ಥಿ ಪರ ತಂತ್ರ ರೂಪಿಸುತ್ತಿರುವ
ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರ ಕಾರ್ಯಗಳನ್ನು ನೋಡುತ್ತಿರುವ ಬಿಜೆಪಿ ಪ್ರಮುಖರು, ಗ್ರಾಮೀಣ ಪ್ರದೇಶಗಳಲ್ಲಿ ಸದ್ದಿಲ್ಲದೆ ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಪರವಾಗಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌, ಬಿಜೆಪಿ ಪ್ರಮುಖರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಎಂ.ರುದ್ರೇಶ್‌ ಮತ್ತು ಚಿತ್ರನಟಿ ಶುೃತಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಸಾಧನೆಗಳನ್ನು ಮತದಾರರಿಗೆ ತಿಳಿಸುತ್ತಿದ್ದಾರೆ. ಒಟ್ಟಾರೆ ಗೆಲುವಿಗಾಗಿ ಅಭ್ಯರ್ಥಿಗಳು ಹರಸಾಹಸ ನಡೆಸುತ್ತಿರುವುದು ಕ್ಷೇತ್ರದಲ್ಲಿ ರಾಜಕಾರಣ ರಂಗೇರಲು ಕಾರಣವಾಗಿದೆ. ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಚಾರ ಇನ್ನಷ್ಟು ಬಿರುಸು ಪಡೆದುಕೊಳ್ಳಲಿದೆ. ಯಾರು ಏನೇ ಮಾಡಿದರೂ ಕೊನೆಯ ಎರಡು ದಿನಗಳು ಅಭ್ಯರ್ಥಿಯ ಹಣೆಬರಹ ಬದಲಿಸುವಲ್ಲಿ ಯಶಸ್ವಿಯಾಗಲಿವೆ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next