ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ತಿಂಗಳುಗಳು ಬಾಕಿ ಇದೆ ಎನ್ನುವಾಗಲೇ ಹೊರ ರಾಜ್ಯಗಳಿಂದ ಮಾದಕ ವಸ್ತು ಗಾಂಜಾ ಹೇರಳವಾಗಿ ಬೆಂಗಳೂರಿಗೆ ಬರಲಾರಂಭಿಸಿದೆ. ಒಡಿಶಾ ಹಾಗೂ ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಕಾರಿನಲ್ಲಿ ತುಂಬಿ ಬೆಂಗಳೂ ರಿಗೆ ತಂದಿದ್ದ ಕೇರಳ ಮೂಲದ ದಂಪತಿ ಸೇರಿ ಮೂವ ರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 3.25 ಕೋಟಿ ರೂ. ಮೌಲ್ಯದ 318 ಕೆ.ಜಿ. ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಕೇರಳದ ಅಚ್ಚು ಸಂತೋಷ್ (28), ಬೆಂಗಳೂರಿನ ಜಕ್ಕೂರು ನಿವಾಸಿ ಜಮೀರ್ ಖಾನ್(29) ಹಾಗೂ ಈತನ ಪತ್ನಿ ರೇಷ್ಮಾ (28) ಬಂಧಿತರು. ಗಾಂಜಾ ಸಾಗಣೆಗೆ ಬಳಸಿದ್ದ ಕಾರು ಹಾಗೂ 3 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ಜಮೀರ್ ಖಾನ್ ಟ್ರಾವೆಲ್ಸ್ ಏಜೆನ್ಸಿ ಇಟ್ಟು ಕೊಂಡಿದ್ದು, ಕೇರಳಕ್ಕೆ ಪ್ರವಾಸಿಗರನ್ನು ಈ ಹಿಂದೆ ಬೆಂಗಳೂರಿಗೆ ಕರೆತರುತ್ತಿದ್ದಾಗ ಅಚ್ಚು ಸಂತೋಷ್ ಪರಿಚಯ ವಾಗಿತ್ತು. ಆ ವೇಳೆ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಹೆಚ್ಚಿನ ಲಾಭವಾಗುತ್ತಿಲ್ಲ ಎಂದು ಜಮೀರ್ ಹೇಳಿಕೊಂಡಿದ್ದ. ಆಗ ಜಮೀರ್ ದಂಪತಿಯನ್ನು ಪುಸಲಾಯಿಸಿದ್ದ ಅಚ್ಚು, ಗಾಂಜಾ ಮಾರಾಟದ ಕೃತ್ಯಕ್ಕೆ ಬಳಸಿಕೊಂಡಿದ್ದ.
ಇತ್ತೀಚೆಗೆ ಆರೋಪಿ ಜಮೀರ್ ಎರ್ಟಿಕಾ ಬಾಡಿಗೆ ಕಾರು ಬುಕ್ ಮಾಡಿದ್ದ. ನಂತರ ಮೂವರು ಆರೋಪಿಗಳೂ ಇದೇ ಕಾರಿನಲ್ಲಿ ಆಂಧ್ರ ಪ್ರದೇಶದ ಮೂಲಕವಾಗಿ ಒಡಿಶಾ ಗಡಿ ಭಾಗಕ್ಕೆ ತೆರಳಿದ್ದರು. ಅಲ್ಲಿ ಗಾಂಜಾ ಮಾರಾಟ ಮಾಡುವ ಬುಡಕಟ್ಟು ಜನಾಂಗದವರನ್ನು ಸಂಪರ್ಕಿಸಿದ್ದರು. ಬುಡಗಟ್ಟು ಜನಾಂಗದವರು ಆರೋಪಿಗಳ ಕಣ್ಣಿಗೆ ಬಟ್ಟೆ ಕಟ್ಟಿ ತಮ್ಮ ಸುಳಿವು ಸಿಗದಂತೆ ಕಾಡಿನೊಳಗೆ ಕರೆದೊಯ್ದಿ ದ್ದರು. ನಂತರ ಇವರಿಂದ 12 ಲಕ್ಷ ರೂ. ಪಡೆದು 318 ಕೆಜಿ ಗಾಂಜಾವನ್ನು ಇವರ ಕಾರಿಗೆ ತುಂಬಿದ್ದರು. ಬಳಿಕ ಆರೋಪಿಗಳು ಗಾಂಜಾ ತುಂಬಿದ ಕಾರಿನಲ್ಲಿ ಬೆಂಗಳೂ ರಿಗೆ ವಾಪಸ್ಸಾಗುತ್ತಿದ್ದರು.
ಈ ಬಗ್ಗೆ ಗೋವಿಂದಪುರ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಆಂಧ್ರ-ಬೆಂಗ ಳೂರು ಗಡಿಯಲ್ಲಿ ಕಾದು ಕುಳಿತು ಆರೋಪಿಗಳು ಬಂದಾಗ ಅವರ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ದ್ದರು. ಆರೋಪಿಗಳು ಬೆಂಗಳೂರಿಗೆ ಎಂಟ್ರಿಯಾಗುತ್ತಿ ದ್ದಂತೆ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ 318 ಕೆ.ಜಿ. ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿ ಗಾಂಜಾ ಮಾರಾಟ
ಒಡಿಶಾದಿಂದ ಗಾಂಜಾ ಖರೀದಿಸಿ ತಂದಿದ್ದ ಆರೋಪಿಗಳು, ಇದನ್ನು ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿ 100 ಗ್ರಾಂ ಗಾಂಜಾವನ್ನು 500 ರಿಂದ ಸಾವಿರ ರೂ.ಗೆ ನಗರದಲ್ಲಿ ಮಾರಾಟ ಮಾಡಲು ಚಿಂತಿಸಿದ್ದರು. ಆರೋಪಿಗಳು ಈ ಹಿಂದೆಯೂ ಒಡಿಶಾದಿಂದ ಕಾರಿನಲ್ಲಿ ಗಾಂಜಾವನ್ನು ನಗರಕ್ಕೆ ತಂದಿದ್ದರು. ನಂತರ ಕೆಲವು ಪ್ರಮಾಣದ ಗಾಂಜಾವನ್ನು ಕೇರಳಕ್ಕೆ ಸಾಗಾಟ ಮಾಡಿದ್ದರು ಎನ್ನಲಾಗಿದೆ.
ಆರೋಪಿ ವಿರುದ್ದ ದರೋಡೆ, ಕೊಲೆ ಯತ್ನ ಕೇಸ್ ದಾಖಲು
ಪ್ರಮುಖ ಆರೋಪಿಯಾಗಿರುವ ಅಚ್ಚು ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಮಾದಕ ವಸ್ತು ಸಾಗಟ, ದರೋಡೆ, ಹತ್ಯೆ ಯತ್ನ ಮಾತ್ರವಲ್ಲದೇ 3 ಬಾರಿ ಗೂಂಡಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ಗೊತ್ತಾಗಿದೆ. ಇನ್ನು ಆರೋಪಿಗಳಾದ ಜಮೀರ್ ಹಾಗೂ ರೇಷ್ಮಾ ಇದೇ ಮೊದಲ ಬಾರಿಗೆ ಸಿಕ್ಕಿ ಬಿದ್ದಿದ್ದಾರೆ.