ಬೆಂಗಳೂರು : ನಗರದ ವಿವಿಧೆಡೆ ಮತ್ತು ಹೊರವಲಯದಲ್ಲಿ ಭಾನುವಾರ ಮಧ್ಯಾಹ್ನ ಭಾರಿ ಮಳೆ ಸುರಿದಿದ್ದು ಕೆ.ಆರ್.ಸರ್ಕಲ್ ನ ಅಂಡರ್ ಪಾಸ್ ನಲ್ಲಿ ನೀರಿನಲ್ಲಿ ಸಿಲುಕಿದ್ದ ಕಾರಿನಲ್ಲಿದ್ದ ಯುವತಿಯೊಬ್ಬಳು ದಾರುಣವಾಗಿ ಕೊನೆಯುಸಿರೆಳೆದಿದ್ದಾಳೆ.
ಮೃತ ದುರ್ದೈವಿ ಆಂಧ್ರದ ವಿಜಯವಾಡದ ಮೂಲದ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ(22) ಎಂದು ತಿಳಿದು ಬಂದಿದೆ. ಕಾರಿನಲ್ಲಿ ಚಾಲಕ ಸೇರಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು. ಅಂಡರ್ ಪಾಸ್ ನಲ್ಲಿ ಏಕಾಏಕಿ ಮಳೆಯಿಂದ ಭಾರಿ ಪ್ರಮಾಣದ ನೀಡು ಸಂಗ್ರಹವಾಗಿತ್ತು. ಕಾರು ಮುಳುಗಡೆಯಾಗಿದ್ದು ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಭಾನುರೇಖಾ ಹೆಚ್ಚಿನ ಪ್ರಮಾಣದಲ್ಲಿ ನೀರುಕುಡಿದ ಕಾರಣ ಸ್ಥಿತಿ ಚಿಂತಾಜನಕವಾಗಿತ್ತು. ಆಕೆಯನ್ನು ಸ್ಥಳೀಯರು ಖಾಸಗಿ ಆಸತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಮತ್ತು ಸಿಬಂದಿ ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ವೇಳೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಿಎಂ ಭೇಟಿ
ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರು. ಸ್ಥಳೀಯರು ಮತ್ತು ಆಸ್ಪತ್ರೆಯ ವೈದ್ಯರು ಮತ್ತು ಸಿಬಂದಿಗಳಿಂದ ಮಾಹಿತಿ ಪಡೆದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆಸ್ಪತ್ರೆ ವೈದ್ಯರುಗಳ ಪ್ರಕಾರ ಆಸ್ಪತ್ರೆಗೆ ತರುವಾಗಲೇ ಕೊನೆಯುಸಿರೆಳೆದಿದ್ದಾಳೆ ಎಂದರು.
Related Articles
ಸರ್ಕಾರದ ವತಿಯಿಂದ ಐದು ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ. ಉಳಿದವರಿಗೆ ಸರಕಾರದ ವತಿಯಿಂದ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಇನ್ನು ಮುಂದೆ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುತ್ತೇವೆ. ಮಳೆಗಾಲಕ್ಕೆ ಮುಂಚಿತವಾಗಿ ನೀರು ನಿಲ್ಲದಂತೆ ಕಾಮಗಾರಿ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.
ಹಲವರ ಹರಸಾಹಸ
ಕಾರು ನೀರಿನಲ್ಲಿ ಮುಳುಗಿದ್ದ ವೇಳೆ ರಕ್ಷಣ ಕಾರ್ಯಕ್ಕೆ ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಹಲವಾರು ರಕ್ಷಣ ಕಾರ್ಯದಲ್ಲಿ ಭಾಗಿಯಾದರು. ಆಸ್ಪತ್ರೆಗೂ ತೆರಳಿ ತುರ್ತು ಚಿಕಿತ್ಸೆ ನೀಡುವಂತೆ ಅಂಗಲಾಚಿದರು.