ಬೆಂಗಳೂರು: ಬೆಂಗಳೂರಿನಲ್ಲಿ ಪರಿಹಾರ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಕೂಡಲೇ 1,000 ಕೋಟಿ ರೂ. ಬಿಡುಗಡೆ ಮಾಡಲಿ. ಜೊತೆಗೆ ರಾಜ್ಯದಲ್ಲಿ ಪ್ರವಾಹದಿಂದ ಅಪಾರ ಹಾನಿ ಉಂಟಾಗಿದ್ದು, ಸಭೆ ಕರೆದು 5,000 ಕೋಟಿ ರೂ. ಬಿಡುಗಡೆ ಮಾಡಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಸಿಲ್ಕ್ ಬೋರ್ಡ್ ವೃತ್ತದ ಬಳಿ ಬಿಜೆಪಿ ಶಾಸಕರ ಜತೆಗೆ ಮಳೆ ಹಾನಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, 16 ತಿಂಗಳ ಕಾಂಗ್ರೆಸ್ ಸರ್ಕಾರದ ಪಾಪದ ಫಲವನ್ನು ಬೆಂಗಳೂರಿನ ಜನರು ಅನುಭವಿಸಬೇಕಾಗಿದೆ. ರಾಜಕಾಲುವೆಯ ಹೂಳು ತೆಗೆದು ಸ್ವತ್ಛ ಮಾಡುವ ಕೆಲಸ ಸರ್ಕಾರ ಮಾಡಿಲ್ಲ. ಇದರಿಂದಾಗಿ ತೇಲುತ್ತಿರುವಬೆಂಗಳೂರು ಎಂಬ ಅಪಖ್ಯಾತಿ ನಗರಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಒಂದೂವರೆ ವರ್ಷದಲ್ಲಿ ಎಷ್ಟು ಒತ್ತುವರಿ ತೆರವು ಮಾಡಿದ್ದಾರೆ? ಎಷ್ಟು ಹೂಳು ತೆಗೆಸಿದ್ದಾರೆ? ಎಂದು ತಿಳಿಸಲಿ. ಬಿಜೆಪಿ ಸರ್ಕಾರವಿದ್ದಾಗ ಮಳೆಗಾಲಕ್ಕೆಮುನ್ನ ಎಲ್ಲ ಸಿದ್ಧತೆ ಮಾಡಲಾಗುತ್ತಿತ್ತು. ಆದರೆ, ಈ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಟೀಕಿಸಿದರು.
ಸಿಲ್ಕ್ ಬೋರ್ಡ್‌ನಲ್ಲಿ ಪ್ರತಿ ದಿನವೂ ಪ್ರವಾಹ:
ಬೆಂಗಳೂರಿನಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಖಜಾನೆ ಖಾಲಿಯಾಗಿದೆ ಎಂದು ನಮಗೂ ಗೊತ್ತಿದೆ. ಆದ್ದರಿಂದ ಕನಿಷ್ಠ 500 ಕೋಟಿ ರೂ. ಹಣವಾದರೂ ಬಿಡುಗಡೆ ಮಾಡಲಿ. ಇಲ್ಲವೆಂದರೆ ಗುತ್ತಿಗೆದಾರರು ಮುಂದೆ ಬರುವುದಿಲ್ಲ. ಇದರ ಜೊತೆಗೆ ಕಸದ ಸಮಸ್ಯೆಯೂ ಸೃಷ್ಟಿಯಾಗಿದೆ. ಮಾನ್ಯತಾ ಟೆಕ್ ಪಾರ್ಕ್ ಈಗ ಮುಳುಗಡೆ ಪಾರ್ಕ್ ಆಗಿಬಿಟ್ಟಿದೆ. ಸಿಲ್ಕ್ ಬೋರ್ಡ್‌ನಲ್ಲಿ ಪ್ರತಿ ದಿನವೂ ಪ್ರವಾಹ ಉಂಟಾಗುತ್ತಿದೆ. ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆ ಮಾಡು ತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ 6 ತಿಂಗಳಾದರೂ ಏನೂ ಮಾಡಿಲ್ಲ ಎಂದರು.