Advertisement

ಶಂಕರ್ ಬಿದರಿ ಇ-ಮೇಲ್‌ ಹ್ಯಾಕ್‌: ನಾಗಲ್ಯಾಂಡ್‌ ಮೂಲದ ಮೂವರ ಬಂಧನ

07:04 PM Mar 10, 2021 | Team Udayavani |

ಬೆಂಗಳೂರು: ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಶಂಕರ್‌ ಬಿದರಿ ಅವರ ಇ-ಮೇಲ್‌ ಹ್ಯಾಕ್‌ ಮಾಡಿ ಅವರ ಸ್ನೇಹಿತರಿಂದ 25 ಸಾವಿರ ರೂ. ಹಣ ವಸೂಲಿ ಮಾಡಿದ್ದ ನಾಗಲ್ಯಾಂಡ್‌ ಮೂಲದ ಮಹಿಳೆ ಸೇರಿ ಮೂವರು ಆಗ್ನೇಯ ವಿಭಾಗ ಸಿಇಎನ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಹೊರಮಾವು ನಿವಾಸಿ ಥಿಯಾ (31), ಸೆರೋಪಾ (27) ಮತ್ತು ಇಸ್ಟರ್‌ ಕೊನ್ಯಾಕ್‌ ಅಲಿಯಾಸ್‌ ರುಬಿಕಾ (28) ಬಂಧಿತರು. ಮೂವರು ನಾಗಲ್ಯಾಂಡ್‌ ಮೂಲದವರಾಗಿದ್ದಾರೆ. ಅವರಿಂದ ನಾಲ್ಕು ಮೊಬೈಲ್‌ಗಳು, ವಿವಿಧ ಹೆಸರಿನ 13 ಪಾನ್‌ ಕಾರ್ಡ್‌, ಆರು ಆಧಾರ್‌ ಕಾರ್ಡ್‌, ಎರಡು ಎಟಿಎಂ ಕಾರ್ಡ್‌ ಹಾಗೂ 20 ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿದ್ದ ಎರಡು ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಗಳಾದ ಜೇಮ್ಸ್‌ ಮತ್ತು ಪೀಟರ್‌ ಎಂಬವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಇತ್ತೀಚೆಗೆ ಆರೋಪಿಗಳು ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ್‌ ಬಿದರಿ ಅವರ ಈ-ಮೇಲ್‌ ಹ್ಯಾಕ್‌ ಮಾಡಿ ಅವರ ಸ್ನೇಹಿತರೊಬ್ಬರಿಗೆ ಹಣ ಕಳುಹಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಆರೋಪಿಗಳು ಸೂಚಿಸಿದ ಖಾತೆಗೆ 25 ಸಾವಿರ ರೂ. ವರ್ಗಾಹಿಸಿದ್ದರು. ಈ ಸಂಬಂಧ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಸಿಇಎನ್‌ ಠಾಣೆಯ ಎಲ್‌.ವೈ. ರಾಜೇಶ್‌ ಅವರ ನೇತೃತ್ವದ ತಂಡ ತಾಂತ್ರಿಕ ತನಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ :ಉತ್ತರ ಪ್ರದೇಶ:  ಗುದನಾಳದ ಮೂಲಕ ದೇಹದೊಳಗೆ ಗಾಳಿ ತುಂಬಿಸಿ ಬಾಲಕನ ಕೊಲೆ

ಆರೋಪಿಗಳ ಪೈಕಿ ಕೊನ್ಯಾಕ್‌ ಅಲಿಯಾಸ್‌ ರುಬಿಕಾ ನಾಲ್ಕು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಬ್ಯೂಟಿ ಪಾರ್ಲರ್‌ಗಳಲ್ಲಿ ಮತ್ತು ಸೇಲ್ಸ್‌ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ಜೇಮ್ಸ್‌ ಮತ್ತು ಪೀಟರ್‌ ಎಂಬವರನ್ನು ಪರಿಚಯಿಸಿಕೊಂಡಿದ್ದಾಳೆ. ಈ ವೇಳೆ ಜೇಮ್ಸ್‌ ಮತ್ತು ಪೀಟರ್‌, ಈಕೆಗೆ ಆನ್‌ಲೈನ್‌ ವಂಚನೆ ಬಗ್ಗೆ ಮಾಹಿತಿ ನೀಡಿ, ವಂಚಿಸಿದ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಹಿಸಿಕೊಳ್ಳುವ ಸಲುವಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ನಾಗಲ್ಯಾಂಡ್‌ನ‌ ನಿರುದ್ಯೋಗಿ(ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರು) ಯುವಕರಿಗೆ ಹಣದ ಆಮಿಷವೊಡ್ಡುತ್ತಿದ್ದಳು. ಬಳಿಕ ಅವರನ್ನು ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಳು.

Advertisement

ಆ ಯುವಕರಿಗೆ ತನ್ನ ಸ್ವಂತ ಖರ್ಚಿನಲ್ಲಿ ಆಧಾರ್‌ ಕಾರ್ಡ್‌, ಬಾಡಿಗೆ ಕರಾರು ಪತ್ರ, ಪಾನ್‌ ಕಾರ್ಡ್ ಗಳನ್ನು ಮಾಡಿಸಿಕೊಡುತ್ತಿದ್ದರು. ಬಳಿಕ ಅವರ ಹೆಸರಿನಲ್ಲಿ ಬ್ಯಾಂಕ್‌ ಖಾತೆಗಳನ್ನು ತೆರೆಯುತ್ತಿದ್ದಳು. 2020ರ ನವೆಂಬರ್‌ನಿಂದ ಇದುವರೆಗೂ 60ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದ್ದು,. ಈ ಎಟಿಎಂ ಕಾರ್ಡ್‌ಗಳು ಮತ್ತು ಪಾಸ್‌ ಬುಕ್ಗಳನ್ನು ಜೇಮ್ಸ್‌ ಮತ್ತು ಪೀಟರ್‌ಗೆ ನೀಡಿದ್ದಳು ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ :ಪಶ್ಚಿಮಬಂಗಾಳ: ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ, ಕಾಲಿಗೆ ಗಾಯ

ಪತ್ತೆ ಹೇಗೆ?
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ನಿವೃತ್ತ ಡಿಜಿಪಿ ಶಂಕರ್‌ ಬಿದರಿ ಸ್ನೇಹಿತರಿಗೆ ಬಂದಿದ್ದ ಇ-ಮೇಲ್‌ ವಿಳಾಸ ಸಂಗ್ರಹಿಸಿ ತಾಂತ್ರಿಕವಾಗಿ ತನಿಖೆ ನಡೆಸಿದಾಗ ಬೇರೆ ದೇಶದಲ್ಲಿ ಕಾರ್ಯಾ ನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು. ಬಳಿಕ ಪ್ರಮುಖ ಆರೋಪಿಗಳ ಇ-ಮೇಲ್‌ ಖಾತೆ ಶೋಧಿಸಿದಾಗ ರುಬಿಕಾಗೆ ಮೇಲ್‌ ಮೂಲಕ ಹಣ ವರ್ಗಾವಣೆ ಆಗಿರುವ ಬಗ್ಗೆ ಖಚಿತ ಪಡಿಸಿಕೊಂಡಿದ್ದರು. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ನೈಜಿರಿಯಾ ಸಿಮ್‌ ಕಾರ್ಡ್‌ ಬಳಕೆ
ಜೇಮ್ಸ್‌ ಮತ್ತು ಪೀಟರ್‌ ನೈಜಿರಿಯಾ ದೇಶದ ಸಿಮ್‌ ಕಾರ್ಡ್‌ಗಳನ್ನು ಬಳಸಿ ರುಬಿಯಾಳನ್ನು ಸಂಪರ್ಕಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಇನ್‌ ಠಾಣೆ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next