ಬೆಂಗಳೂರು : ನಗರದ ಕಮ್ಮನಹಳ್ಳಿಯಲ್ಲಿ ಜನವರಿ 1 ರ ನಸುಕಿನ ವೇಳೆ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ರಾಷ್ಟ್ರವ್ಯಾಪಿ ಭಾರಿ ಸುದ್ದಿಯಾದ ಬಳಿಕ ವ್ಯಾಪಕ ಕಾರ್ಯಾಚರಣೆ ನಡೆಸಿದ ಪೊಲೀಸರು 2 ದಿನಗಳ ಒಳಗೆ ಪ್ರಕರಣದ ಆರೋಪಿಗಳ ಗುರುತು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವೀಯಾಗಿದ್ದಾರೆ.
ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಸುದ್ದಿಗೋಷ್ಠಿ ನಡೆಸಿ ಬಂಧನ ವಿಚಾರವನ್ನು ಸ್ಪಷ್ಟಪಡಿಸಿ ಬಂಧಿತ ಆರೋಪಿಗಳ ಬಗ್ಗೆ ವಿವರ ನೀಡಿದರು.
ನಾಲ್ವರು ಶಂಕಿತರನ್ನು ಬಂಧಿಸಲಾಗಿದ್ದು ಈ ಪೈಕಿ ಒರ್ವ ಪ್ರಮುಖ ಆರೋಪಿ ಅಯ್ಯಪ್ಪ ಎಂದು ಸೂದ್ ತಿಳಿಸಿದ್ದು, ಈತ ಲಿಂಗರಾಜಪುರಂ ನಿವಾಸಿ ಎಂದು ತಿಳಿದು ಬಂದಿದೆ. ಇನ್ನುಳಿದ ಬಂಧಿತ ಆರೋಪಿಗಳು ಸ್ಕೂಟರ್‌ನಲ್ಲಿ ಕುಳಿತಿದ್ದವ ಬಿಕಾಂ ವಿದ್ಯಾರ್ಥಿ ಲಿನೋ ,ಪಿಯುಸಿ ಓದಿರುವ ಚಿಕ್ಕಬಾಣಸವಾಡಿಯ ಸುದೇಶ್, ಎಸ್‌ಎಸ್‌ಎಲ್‌ಸಿ ಅನುತ್ತೀರ್ಣನಾಗಿದ್ದ ಸೋಮ ಎಂದು ಗುರುತಿಸಲಾಗಿದೆ. ಕೃತ್ಯದಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದು ಉಳಿದಿಬ್ಬರಿಗಾಗಿ ಶೋಧ ಮುಂದುವರಿದಿದೆ.
ಬಂಧಿತ ನಾಲ್ವರು ಆರೋಪಿಗಳನ್ನು ರಾಮಮೂರ್ತಿನಗರ ಪೊಲೀಸ್ ಠಾಣೆಯಿಂದ ಕಮಿಷನರ್ ಕಚೇರಿಗಳಿಗೆ ಕರೆದೊಯ್ಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ತಂಡಗಳು ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ವ್ಯಾಪಕವಾಗಿ ಪರಿಶೀಲನೆ ನಡೆಸಿದ್ದರು.
ಯುವತಿ ಈಶಾನ್ಯ ರಾಜ್ಯದವಳು
ಲೈಂಗಿಕ ಕಿರುಕುಳಕ್ಕೊಳಗಾದ ಯುವತಿ ಈಶಾನ್ಯ ರಾಜ್ಯದವಳು ಎಂದು ತಿಳಿದು ಬಂದಿದ್ದು, ಇಂಜಿನಿಯರಿಂಗ್ 2 ನೇ ವರ್ಷದ ವ್ಯಾಸಂಗ ಮಾಡುತ್ತಿದ್ದು ಇನ್ನೂ 2 ವರ್ಷ ವಿದ್ಯಾಭ್ಯಾಸ ಮುಂದುವರಿಸಬೇಕಾಗಿರುವ ಕಾರಣ ಪೊಲೀಸರ ಮುಂದೆ ಬರಲು ಹಿಂಜರಿದಿದ್ದಾಳೆ ಎಂದು ಹೇಳಲಾಗಿದೆ.
ವಾಟ್ಸಪ್‌ನಲ್ಲಿ ಗುರುತು ಪತ್ತೆ !
ಬಂಧಿತ ಆರೋಪಿಗಳ ಚಿತ್ರಗಳನ್ನು ವಾಟ್ಸಪ್ ಮೂಲಕ ಸಂತ್ರಸ್ಥ ಯುವತಿಗೆ ಕಳುಹಿಸಿದಾಗ ಆಕೆ ಇಬ್ಬರ ಗುರುತು ಪತ್ತೆ ಹಚ್ಚಿರುವುದಾಗಿ ವರದಿಯಾಗಿದೆ.