ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (Parappana Agrahara Prison) ನಟ ದರ್ಶನ್‌ಗೆ (Actor Darshan) ವಿಶೇಷ ಆತಿಥ್ಯ ಪ್ರಕರಣ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಸೆಂಟ್ರಲ್ ಜೈಲ್‌ಗೆ ಮೊಬೈಲ್ ರವಾನೆ ಮಾಡುತ್ತಿದ್ದ ವಿಚಾರಣಾಧೀನ ಕೈದಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಕೋಲಾರದ ಕೆಜಿಎಫ್ ನ ವಿಜಯ್ ಎಂಬಾತನನ್ನು ಆಗ್ನೇಯ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೈಲಿನೊಳಗೆ ವಿಜಯ್ ಜೈಲು ಸಿಬ್ಬಂದಿಯ ನೆರವು ಪಡೆದು ಸ್ಮಾರ್ಟ್ ಫೋನ್‌ಗಳನ್ನು ಹೊರಗಿನಿಂದ ಖರೀದಿಸಿಕೊಂಡು ಬಂದು ಅವುಗಳನ್ನು ಜೈಲಿನಲ್ಲಿರುವ ಇತರ ಕೈದಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಜೈಲಿನೊಳಗೆ ಇತರೆ ಕೈದಿಗಳಿಗೆ ವಿಜಯ್ ಮೊಬೈಲ್ ಪೂರೈಸಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿದ ಬೆನ್ನಲ್ಲೇ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹೀಗಾಗಿ ಇಲ್ಲಿನ ಕೈದಿಗಳಿಗೆ ಸುಲಭವಾಗಿ ಮೊಬೈಲ್ ಸಿಗುತ್ತಿದ್ದವು.
ಇನ್ನು ಪೊಲೀಸ್ ಕಸ್ಟಡಿಯಲ್ಲಿರುವ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್ ಹಾಗೂ ವೇಲು ಅವರ ವಿಚಾರಣೆಯೂ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇನ್ನು ವಿಜಯ್ ಜೈಲು ಅಧಿಕಾರಿಗಳ ಸಹಾಯ ದಿಂದಲೇ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿರುವುದು, ರೌಡಿ ಶೀಟರ್‌ಗಳು ಸಾವಿರಾರು ಹಣ ಕೊಟ್ಟು ಈತನಿಂದ ಮೊಬೈಲ್ ಖರೀದಿಸುತ್ತಿದ್ದರೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸೆ.15ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ 26 ಮೊಬೈಲ್ ಪತ್ತೆಯಾಗಿದ್ದವು. ವಿಲ್ಸನ್ ಗಾರ್ಡನ್ ನಾಗ ಹಾಗೂ ವೇಲು ಬಳಿಯೂ ಮೊಬೈಲ್‌ಗಳು ಸಿಕ್ಕಿದ್ದವು. ಇದರ ಬಗ್ಗೆ ಇನ್ನಷ್ಟು ಆಳಕ್ಕೆ ಹೋಗಿ ತನಿಖೆ ನಡೆಸಿದಾಗ ವಿಜಯ್ ಮೊಬೈಲ್ ಪೂರೈಸುತ್ತಿದ್ದ ಎಂಬುದು ತಿಳಿದು ಬಂದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆದ ಕಾರಣದಿಂದಲೇ ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಬೇರೆ ಜೈಲುಗಳಿಗೆ ಕಳುಹಿಸಲಾಗಿದೆ.