Advertisement

ಮೆಟ್ರೋ ಪಿಲ್ಲರ್‌ ಬಿದ್ದು ತಾಯಿ, ಮಗ ಸಾವು

10:26 PM Jan 10, 2023 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ಗೆ ಮತ್ತೆರಡು ಜೀವಗಳು ಬಲಿಯಾಗಿವೆ. ನಿರ್ಮಾಣ ಹಂತದಲ್ಲಿದ್ದ ಅತೀ ಭಾರವಾದ ಮೆಟ್ರೋ ಕಂಬ ರಸ್ತೆ ಮೇಲೆ ಬಿದ್ದು ತಾಯಿ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಎಚ್‌ಬಿಆರ್‌ ಲೇಔಟ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

Advertisement

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಕೆ.ಆರ್‌. ಪುರ- ಹೆಬ್ಟಾಳ ನಡುವೆ ನಿರ್ಮಾಣಗೊಳ್ಳುತ್ತಿರುವ ಮೆಟ್ರೋ ಮಾರ್ಗದ ಕಾಂಕ್ರೀಟ್‌ ಪೂರ್ವದ ಕಂಬಕ್ಕೆ ಸಮರ್ಪಕ ಆಸರೆ ಇಲ್ಲದ್ದರಿಂದ ರಸ್ತೆಗೆ ವಾಲಿದೆ. ಅದೇ ಮಾರ್ಗದಲ್ಲಿ ತಮ್ಮ ಇಬ್ಬರು ಅವಳಿ ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಗದಗ ಮೂಲದ ಲೋಹಿತ್‌ ಮತ್ತು ತೇಜಸ್ವಿನಿ ದಂಪತಿಯ ಮೇಲೆ ಆ ಕಂಬ ಬಿದ್ದಿದೆ.

ಪರಿಣಾಮವಾಗಿ ಹಿಂಬದಿ ಆಸನದಲ್ಲಿ ಕುಳಿತಿದ್ದ ಲೋಹಿತ್‌ ಅವರ ಪತ್ನಿ ತೇಜಸ್ವಿನಿ (28) ಹಾಗೂ ಎರಡೂವರೆ ವರ್ಷದ ಮಗ ವಿಹಾನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನ ಚಾಲನೆ ಮಾಡುತ್ತಿದ್ದ ಲೋಹಿತ್‌ (32) ಹಾಗೂ ಮಗಳು ವಿಸ್ಮಿತಾ ಪಾರಾಗಿದ್ದಾರೆ. ಘಟನೆಯ ಬೆನ್ನಲ್ಲೇ ಮೆಟ್ರೋ ಕಾಮಗಾರಿ ವೈಖರಿ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಾಮಗಾರಿಯಲ್ಲಿ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ವಿರುದ್ಧ ವಾಗ್ಧಾಳಿ ನಡೆಸಿದರು.

ಗದಗ ಮೂಲದ ಲೋಹಿತ್‌ ಮತ್ತು ದಾವಣಗೆರೆ ಮೂಲದ ತೇಜಸ್ವಿನಿ ದಂಪತಿಗೆ ಎರಡೂವರೆ ವರ್ಷಗಳ ಹಿಂದೆ ಗಂಡು -ಹೆಣ್ಣು ಅವಳಿ ಮಕ್ಕಳು ಜನಿಸಿದ್ದರು. ಲೋಹಿತ್‌ ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದು, ತೇಜಸ್ವಿನಿ ಸಾಫ್ಟ್ವೇರ್‌ ಎಂಜಿನಿಯರ್‌. ಮಂಗಳವಾರ ಬೆಳಗ್ಗೆ 10.45ರ ಸುಮಾರಿಗೆ ಪತ್ನಿ ತೇಜಸ್ವಿನಿಯನ್ನು ಕೆಲಸಕ್ಕೆ ಬಿಟ್ಟು, ಇಬ್ಬರು ಮಕ್ಕಳನ್ನು ಬೇಬಿ ಸಿಟಿಂಗ್‌ಗೆ ಬಿಡಲು ಹೋಗುತ್ತಿದ್ದಾಗ ಈ ದುರ್ಘ‌ಟನೆ ಸಂಭವಿಸಿದೆ.

ಈ ಹಿಂದೆ ನಮ್ಮ ಮೆಟ್ರೋ ಕಾಮಗಾರಿ ನಡೆ ಯುತ್ತಿರುವ ವೇಳೆ ಪ್ರತ್ಯೇಕ ಘಟನೆಗಳಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಸಾರ್ವಜನಿಕರಿಬ್ಬರು ಸಾವನ್ನಪ್ಪಿರುವುದು ಇದೇ ಮೊದಲು.

Advertisement

ಸನ್ನೇ ಮಾಡಿದರೂ ಗೊತ್ತಾಗಲಿಲ್ಲ!
ಲೋಹಿತ್‌ ಅವರ ಮುಂದೆಯೇ ಅನತಿ ದೂರದಲ್ಲಿ ಸಾಗುತ್ತಿದ್ದ ಬೈಕ್‌ ಸವಾರರೊಬ್ಬರಿಗೆ ಕಬ್ಬಿಣದ ಸರಳುಗಳಿಂದ ಕೂಡಿದ ಕಂಬ ವಾಲುವುದು ಕಣ್ಣಿಗೆ ಬಿದ್ದಿತ್ತು. ಕೂಡಲೇ ಅವರು ಹಿಂದಿದ್ದ ಲೋಹಿತ್‌ ಅವರಿಗೆ ಸನ್ನೆ ಮಾಡಿದ್ದರು. ಆದರೆ ಅದು ಏನು ಎಂಬುದು ಅರ್ಥವಾಗುವಷ್ಟರಲ್ಲಿ ಕಂಬ ವಾಲುವ ಜಾಗಕ್ಕೆ ಲೋಹಿತ್‌ ತಲುಪಿದ್ದರು. ಅದು ನೇರವಾಗಿ ವಾಹನದಲ್ಲಿ ಕುಳಿತಿದ್ದ ಪತ್ನಿ ತೇಜಸ್ವಿನಿ ಮತ್ತು ಮಗುವಿನ ಮೇಲೆ ಬಿತ್ತು ಎಂದು ಅಲ್ಲಿ ಹಾಜರಿದ್ದ ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

30 ಲಕ್ಷ ರೂ. ಪರಿಹಾರ ಘೋಷಣೆ
ಮೆಟ್ರೋ ಪಿಲ್ಲರ್‌ ಕುಸಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌, ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವುದರ ಜತೆಗೆ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next