Advertisement

ಲಷ್ಕರ್‌ ಉಗ್ರನಿಗೆ  7 ವರ್ಷ ಜೈಲುಶಿಕ್ಷೆ

06:00 AM Feb 10, 2018 | Team Udayavani |

ಬೆಂಗಳೂರು: ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಪಾಕ್‌ ಮೂಲದ  ಲಷ್ಕರ್‌ ಇ -ತೊಯ್ಬಾ ಸಂಘಟನೆ ಉಗ್ರ ಬಿಲಾಲ್‌ ಅಹ್ಮದ್‌ ಕ್ವಾಟ್‌ ಅಲಿಯಾಸ್‌ ಇಮ್ರಾನ್‌ ಜಲೀಲ್‌ (45) ಎಂಬಾತನಿಗೆ ಹಣ ದುರ್ಬಳಕೆ ತಡೆ ಕಾಯಿದೆ (ಪಿಎಂಎಲ್‌ಎ) ಪ್ರಕರಣದಲ್ಲಿ 7 ವರ್ಷ ಕಠಿಣ ಜೈಲು  ಶಿಕ್ಷೆ ಹಾಗೂ 50  ಸಾವಿರ ರೂಪಾಯಿ ದಂಡ ವಿಧಿಸಿ ನಗರದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಬೆಂಗಳೂರಿನ ಯಶವಂತಪುರದಲ್ಲಿ ಎ.ಕೆ 47 ಸೇರಿದಂತೆ ಇನ್ನಿತರೆ ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರ ಬಲೆಗೆ ಬಿದ್ದಿದ್ದ ಜಮ್ಮುಕಾಶ್ಮೀರ ಮೂಲದ ಇಮ್ರಾನ್‌ ಜಲೀಲ್‌ ವಿರುದ್ದ, 2009ರಲ್ಲಿ ಪಿಎಂಎಲ್‌ಎ ಕಾಯಿದೆ ಅಡಿ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದಲ್ಲಿ  ಉಗ್ರ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ಆರೋಪಿ ವಿರುದ್ಧ ಜಾರಿನಿರ್ದೇಶನಾಲಯ ಪ್ರಾಸಿಕ್ಯೂಶನ್‌ ವಾದ ಪುರಸ್ಕರಿಸಿರುವ ಪಿಎಂಎಎಲ್‌ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ್‌ ಅಮರಣ್ಣವರ್‌, ಆರೋಪಿ ಉಗ್ರನಿಗೆ  7 ವರ್ಷ ಜೈಲು 50 ಸಾವಿರ ದಂಡ ವಿಧಿಸಿ, ಒಂದು ವೇಳೆ ದಂಡಪಾವತಿಸಿದ್ದರೆ 6 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದ್ದಾರೆ.

ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರಿಂದ ದೋಷಾರೋಪ ಪಟ್ಟಿ ಹಾಗೂ ಇನ್ನಿತರೆ ದಾಖಲೆಗಳನ್ನು 2009ರಲ್ಲಿ ಪಡೆದುಕೊಂಡಿದ್ದ ಜಾರಿನಿರ್ದೇಶನಾಲಯ ಅಧಿಕಾರಿಗಳು ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ವೇಳೆ ಆರೋಪಿ ಬಿಲಾಲ್‌ ಬೆಂಗಳೂರಿನ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ ಹಾಗೂ ಹಂಪಿಯ ಕೆನರಾ ಬ್ಯಾಂಕ್‌ನಲ್ಲಿ ಎರಡು  ಹೆಸರುಗಳಲ್ಲಿ  ಪ್ರತ್ಯೇಕ ಅಕೌಂಟ್‌ಗಳನ್ನು ಹೊಂದಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ ಆರೋಪಿ ಉಗ್ರ ಚಟುವಟಿಕೆಗಳನ್ನು ನಡೆಸಲು 2005ರ ಜುಲೈನಿಂದ 2007ರವರೆಗೆ ಎರಡೂ ಅಕೌಂಟ್‌ಗಳಲ್ಲಿ 9.90 ಲಕ್ಷ ರೂ. ಅಕ್ರಮವಾಗಿ ಹಣದ ವ್ಯವಹಾರ ನಡೆಸಿದ್ದ. ಈ ಪೈಕಿ ಹಂಪಿಯ ಬ್ಯಾಂಕ್‌ ಖಾತೆಯಲ್ಲಿ 34830 ರೂ.ಪತ್ತೆಯಾಗಿತ್ತು. ಈ ಮಾಹಿತಿಯನ್ನು ಉಲ್ಲೇಖೀಸಿ ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಎಲ್ಲಿ ಸಿಕ್ಕಿಬಿದ್ದಿದ್ದ ?
ವಿಧ್ವಂಸಕ ಕೃತ್ಯಗಳನ್ನೆಸಗಲು ಸಂಚುರೂಪಿಸುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ 2007ರ ಜನವರಿಯಲ್ಲಿ ಯಶವಂತಪುರ ಬಸ್‌ನಿಲ್ದಾಣದಲ್ಲಿ ಬಿಲಾಲ್‌ ಅಹ್ಮದ್‌  ಕೂಟ ಅಲಿಯಾಸ್‌ ಜಲೀಲ್‌ನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿ ಬಳಿ ಎ.ಕೆ 47 ಗನ್‌, 200 ಜೀವಂತಗುಂಡುಗಳು, 10 ಗ್ರೇನೆಡ್‌ ಬಾಂಬ್‌, ಸ್ಯಾಟ್‌ಲೆçಟ್‌ ಪೋನ್‌ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಹಲವು ಸ್ಫೋಟಕ ಮಾಹಿತಿಗಳು ಲಭ್ಯವಾಗಿದ್ದವು.

Advertisement

ಜಮ್ಮುಕಾಶ್ಮೀರದ ಶ್ರೀನಗರ ಸಮೀಪದ ಸದರ್‌ಬಾಲ್‌ ನಿವಾಸಿಯಾದ ಬಿಲಾಲ್‌ ಅಹ್ಮದ್‌ ಕೂಟ, ಆರಂಭದಲ್ಲಿ  ಜೆ.ಕೆಎಲ್‌ಎಫ್ ಸಂಘಟನೆ ಸದಸ್ಯನಾಗಿದ್ದು ಬಳಿಕ ಲಷ್ಕರ್‌ ಇ-ತೊಯ್ಬಾ  ಉಗ್ರ ಸಂಘಟನೆ ಸಂಪರ್ಕ ಬೆಳೆಸಿ ಪಾಕಿಸ್ತಾನಕ್ಕೆ ತೆರಳಿ ತರಬೇತಿ ಪಡೆದುಕೊಂಡು ವಾಪಾಸಾಗಿದ್ದ.ದೇಶದ ಹಲವು ಭಾಗಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರ ಚಟುವಟಿಕೆಗಳನ್ನು ವಿಸ್ತರಿಸಿದ್ದ ಬಿಲಾಲ್‌, ವಿಧಾನಸೌಧ, ವಿಪ್ರೋ, ಇನ್ಫೋಸಿಸ್‌, ಸೇರಿದಂತೆ ದೇಶದ ಹಲವು ಪ್ರಮುಖ ಕಟ್ಟಡಗಳನ್ನು ಟಾರ್ಗೆಟ್‌ ಮಾಡಿಕೊಂಡಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಸಂಬಂಧ ತನಿಖೆ ಪೂರ್ಣಗೊಳಿಸಿ ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ದೇಶದ ವಿರುದ್ಧ ಯುದ್ಧಸಾರುವ ಸಂಚು  ಹಾಗೂ ಕಾನೂನು  ಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯಿದೆ ಕಲಂ 20, 23 (1) ಅನ್ವಯ ಆರೋಪಿ ಬಿಲಾಲ್‌ಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 2.75 ಲಕ್ಷ ರೂ. ದಂಡ ವಿಧಿಸಿ 2016ರ ಅಕ್ಟೋಬರ್‌ 4ರಂದು ನಗರದ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು.

ಹಂಪಿಯಲ್ಲಿದ್ದ ಕಲಾಕೃತಿ ಅಂಗಡಿ ತೆರೆದಿದ್ದ ಉಗ್ರ!
ಪಾಕ್‌ನಲ್ಲಿ ಉಗ್ರಚಟುವಟಿಕೆಗಳ ತರಬೇತಿ ಪಡೆದ ಉಗ್ರ ಬಿಲಾಲ್‌ ವಿದ್ಯಾಭ್ಯಾಸದ ನೆಪದಲ್ಲಿ ಸೀದಾ ಬೆಂಗಳೂರಿಗೆ ಬಂದು 1994ರವರೆಗೆ ಆಚಾರ್ಯ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡಿದರೂ ಅನುತ್ತೀರ್ಣಗೊಂಡಿದ್ದ. ನಂತರ ಹುಟ್ಟೂರಿಗೆ ತೆರಳಿ ಕೆಲವೇ ತಿಂಗಳಲ್ಲಿ ಹಂಪಿಗೆ ಆಗಮಿಸಿ ” ಕಾಶ್ಮೀರಿ ಕಲಾಕೃತಿ’ ಮಾರಾಟ ಮಳಿಗೆ ತೆರಿದಿದ್ದ. ಅಲ್ಲಿಂದಲೇ ಬೆಂಗಳೂರು ಸೇರಿದಂತೆ ಹಲವೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿ, ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ. ಆತನನ್ನು ಬಂಧಿಸಿದಾಗಲೂ ಹಂಪಿಯಿಂದ ಆಗಮಿಸುತ್ತಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next